ತಮ್ಮನ್ನು ರಾಜ್ಯಸಭೆಯಿಂದ ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಿರುವುದನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ಪಂಜಾಬ್‌ನ ಸಂಸದ ರಾಘವ್ ಚಡ್ಡಾ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ದೆಹಲಿ ಸೇವೆಗಳ ಮಸೂದೆಯ ಕುರಿತಾಗಿ ಅಧ್ಯಯನ ನಡೆಸಲು ಸ್ಥಾಯಿ ಸಮಿತಿಯೊಂದನ್ನು ರಚಿಸಬೇಕು ಎಂದು ಒತ್ತಾಯಿಸಿ ನಿರ್ಣಯ ಮಂಡಿಸಲು ಚಡ್ಡಾ ಅವರು ಐವರು ರಾಜ್ಯಸಭಾ ಸದಸ್ಯರ ಸಹಿಯನ್ನು ನಕಲು ಮಾಡಿದ್ದರು ಎನ್ನುವ ಅರೋಪವಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಆಗಸ್ಟ್ 11ರಂದು ಸಂಸತ್ತಿನ ಮೇಲ್ಮನೆಯಿಂದ ಅಮಾನತುಗೊಳಿಸಲಾಗಿತ್ತು.
ತಮ್ಮ ಅಮಾನತು ರಾಜ್ಯಗಳ ಪರಿಷತ್ (ರಾಜ್ಯಸಭೆ) ಕಾರ್ಯವಿಧಾನ ಮತ್ತು ನಡಾವಳಿ ನಿಯಮಾವಳಿಗಳ ಮತ್ತು ಸಂವಿಧಾನದ 14 ಮತ್ತು 21ನೇ ವಿಧಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಚಡ್ಡಾ ವಾದಿಸಿದ್ದಾರೆ.
ಸುಪ್ರೀಂ ಕೋರ್ಟ್‌ಗೆ ಚಡ್ಡಾ ಅವರು ಸಲ್ಲಿಸಿರುವ ಸಿವಿಲ್ ರಿಟ್ ಅರ್ಜಿಯಲ್ಲಿ ರಾಜ್ಯಸಭಾ ಸೆಕ್ರೇಟರಿಯೇಟ್ ಮತ್ತದರ ಅಧ್ಯಕ್ಷರು ಪ್ರತಿವಾದಿಗಳಾಗಿದ್ದಾರೆ.
ಯಾವುದೇ ಸದಸ್ಯರನ್ನು ಸಂಸತ್ ಅಧಿವೇಶನ ಮೀರಿ ಉಳಿದ ಅವಧಿಗೂ ಅಮಾನತು ಮಾಡುವುದಕ್ಕೆ ನಿರ್ಬಂಧ ಇದೆ ಎಂದು ಮುಂಗಾರು ಅಧಿವೇಶನದ ವೇಳೆ ಅಮಾನತುಗೊಂಡಿದ್ದ ಚಡ್ಡಾ ತಿಳಿಸಿದ್ದಾರೆ.
ಅಮಾನತಿನಿಂದಾಗಿ, ಸಂಸತ್ ಅಧಿವೇಶನ ನಡೆಯದಿರುವ ಅವಧಿಯಲ್ಲಿ ಕೂಡ ಹಣಕಾಸು ಸ್ಥಾಯಿ ಸಮಿತಿ ಮತ್ತು ಅಧೀನ ಶಾಸನ ಸಮಿತಿಯ ಸಭೆಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.