ರಘುನಾಥ್‌ ಆತ್ಮಹತ್ಯೆ: ಮಾಜಿ ಸಂಸದ ಆದಿಕೇಶವಲು ಪುತ್ರ ಶ್ರೀನಿವಾಸ್‌, ಪುತ್ರಿ ಕಲ್ಪಜಾ ಏಳು ದಿನ ಸಿಬಿಐ ಕಸ್ಟಡಿಗೆ

ಸಿಬಿಐ ಅಧಿಕಾರಿಗಳು ಸೋಮವಾರ ಬೆಳಿಗ್ಗೆ ಒಂದನೇ ಆರೋಪಿ ಶ್ರೀನಿವಾಸ್‌, ಐದನೇ ಆರೋಪಿ ಕಲ್ಪಜಾ ಮತ್ತು ಆರನೇ ಆರೋಪಿ ಮೋಹನ್‌ ಅವರನ್ನು ಬಂಧಿಸಿ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಿದರು.
Kalpaja & Srinivas
Kalpaja & Srinivas
Published on

ಉದ್ಯಮಿ ಕೆ ರಘುನಾಥ್‌ ಆತ್ಮಹತ್ಯೆ, ಅವರ ಆಸ್ತಿಗಳಿಗೆ ಸಂಬಂಧ ನಕಲಿ ದಾಖಲೆ ಸೃಷ್ಟಿ ಮತ್ತು ವಂಚನೆ ಪ್ರಕರಣದ ಸಂಬಂಧ ಮಾಜಿ ಸಂಸದ ಹಾಗೂ ತಿರುಪತಿ ತಿರುಮಲ ದೇವಸ್ಥಾನದ ಮಾಜಿ ಅಧ್ಯಕ್ಷ ಡಿ ಕೆ ಆದಿಕೇಶವಲು ನಾಯ್ಡು ಪುತ್ರ ಡಿ ಎ ಶ್ರೀನಿವಾಸ್‌ ಮತ್ತು ಪುತ್ರಿ ಹಾಗೂ ವೈದೇಹಿ ಸಮೂಹ ಸಂಸ್ಥೆಗಳ ಮುಖ್ಯಸ್ಥೆ ಡಿ ಎ ಕಲ್ಪಜಾ ಹಾಗೂ ಪೊಲೀಸ್‌ ಅಧಿಕಾರಿ ಎಸ್‌ ವೈ ಮೋಹನ್‌ ಅವರನ್ನು ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಸೋಮವಾರ ಏಳು ದಿನ ಕೇಂದ್ರೀಯ ತನಿಖಾ ದಳದ (ಸಿಬಿಐ) ಕಸ್ಟಡಿಗೆ ನೀಡಿದೆ.

ಕರ್ನಾಟಕ ಹೈಕೋರ್ಟ್‌ ನಿರ್ದೇಶನದಂತೆ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಸೋಮವಾರ ಬೆಳಗ್ಗೆ ಒಂದನೇ ಆರೋಪಿ ಶ್ರೀನಿವಾಸ್‌, ಐದನೇ ಆರೋಪಿ ಕಲ್ಪಜಾ ಮತ್ತು ಆರನೇ ಆರೋಪಿ ಮೋಹನ್‌ ಅವರನ್ನು ವಶಕ್ಕೆ ಪಡೆದು 17ನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಎಲ್‌ ಜೆ ಭವಾನಿ ಅವರ ಮುಂದೆ ಹಾಜರುಪಡಿಸಿದರು. ಪ್ರಕರಣದ ಮಾಹಿತಿ ಪಡೆದ ನ್ಯಾಯಾಧೀಶರು ಆರೋಪಿಗಳನ್ನು ಡಿಸೆಂಬರ್‌ 29ರವರೆಗೆ ಸಿಬಿಐ ಅಧಿಕಾರಿಗಳ ಕಸ್ಟಡಿಗೆ ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ: ಆದಿಕೇಶವಲು ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕೆ ರಘುನಾಥ್‌ ಅವರು ಬೆಂಗಳೂರಿನ ದೇವನಹಳ್ಳಿ, ಕೆ ಆರ್‌ ಪುರಂ ಮತ್ತು ಮತ್ತಿತರ ಕಡೆ ಹಲವು ಸ್ಥಿರಾಸ್ತಿ ಹೊಂದಿದ್ದರು. 24-04-2013ರಲ್ಲಿ ಆದಿಕೇಶವಲು ನಿಧನರಾಗುತ್ತಿದ್ದಂತೆ ಶ್ರೀನಿವಾಸ್‌ ಮತ್ತು ಅವರ ಮಕ್ಕಳು ರಘುನಾಥ್‌ಗೆ ತನ್ನ ತಂದೆ ಆದಾಯದಿಂದ ಸಂಪಾದಿಸಿರುವ ಆಸ್ತಿಗಳನ್ನು ತಮಗೆ ವರ್ಗಾಯಿಸುವಂತೆ ಒತ್ತಡ ಹಾಕಿದ್ದರು. ಇದಕ್ಕೆ ನಿರಾಕರಿಸಿದ್ದ ರಘುನಾಥ್‌, ರಿಯಲ್‌ ಎಸ್ಟೇಟ್‌ ಉದ್ಯಮದಿಂದ ಸಂಪತ್ತುಗಳಿಸಿದ್ದಾಗಿ ಹೇಳಿದ್ದರು. ಇದು ರಘುನಾಥ್‌ ಮತ್ತು ಆದಿಕೇಶವಲು ಮಕ್ಕಳ ನಡುವೆ ವೈಮನಸ್ಸಿಗೆ ಕಾರಣವಾಗಿತ್ತು.

2016ರಲ್ಲಿ ಆದಿಕೇಶವಲುಗೆ ಸೇರಿದ ಜಾಗಗಳಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದು, ಇದರ ಹಿಂದಿನ ಸೂತ್ರದಾರ ರಘುನಾಥ್‌ ಎಂದು ಅಭಿಪ್ರಾಯ ವ್ಯಕ್ತವಾಗಿತ್ತು. ಈ ನಡುವೆ, 28-01-2016ರಂದು ಪತ್ನಿ ಎನ್‌ ಮಂಜುಳಾ ಹೆಸರಿಗೆ ರಘುನಾಥ್‌ ಆಸ್ತಿಗಳನ್ನು ವಿಲ್‌ ಮಾಡಿದ್ದರು. ಆದರೆ, ಈ ವಿಚಾರವನ್ನು ಅವರು ಯಾರಿಗೂ ಬಹಿರಂಗಪಡಿಸಿರಲಿಲ್ಲ. 4-05-2019ರಲ್ಲಿ ಆಸ್ತಿಯೊಂದನ್ನು ಮಾರಾಟ ಮಾಡಲು ರಘುನಾಥ್‌ ಮುಂದಾಗಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಶ್ರೀನಿವಾಸ್‌ ಮತ್ತು ಕಲ್ಪಜಾ ಅವರು ರಘುನಾಥ್‌ ಅವರನ್ನು ವೈಟ್‌ಫೀಲ್ಡ್‌ನಲ್ಲಿರುವ ವೈದೇಹಿ ವೈದ್ಯಕೀಯ ವಿಜ್ಞಾನಗಳು ಮತ್ತು ಸಂಶೋಧನಾ ಕೇಂದ್ರಕ್ಕೆ ಕರೆಸಿಕೊಂಡಿದ್ದರು. ಈ ವಿಚಾರವನ್ನು ರಘುನಾಥ್‌ 02-05-2019ರಂದು ಪತ್ನಿ ಮಂಜುಳಾಗೆ ತಿಳಿಸಿದ್ದರು. 4-05-2019ರಂದು ಕರೆ ಮಾಡಿದ್ದ ರಘುನಾಥ್‌ ತನ್ನ ಜೀವಕ್ಕೆ ಅಪಾಯವಿದೆ ಎಂದು ತಿಳಿಸಿದ್ದರು ಎನ್ನಲಾಗಿದೆ.

ಇದರಿಂದ ಗಾಬರಿಗೊಂಡ ಮಂಜುಳಾ ಅವರು ಪುತ್ರ ರೋಹಿತ್‌ನನ್ನು ಕಳುಹಿಸಿದ್ದರು. ರೋಹಿತ್‌ ಅವರು ವೈಟ್‌ಫೀಲ್ಡ್‌ನಲ್ಲಿರುವ ಶ್ರೀನಿವಾಸ್‌ ಅವರ ಅತಿಥಿ ಗೃಹಕ್ಕೆ ತೆರಳಿದಾಗ ರಘುನಾಥ್‌ ಫ್ಯಾನ್‌ಗೆ ನೇಣು ಬಿಗಿದು ಕೊಂಡಿದ್ದರು. ಈ ಸಂದರ್ಭದಲ್ಲಿ ಯಾವುದೇ ಶಂಕೆ ವ್ಯಕ್ತಪಡಿಸದ ರೋಹಿತ್‌ ಹೇಳಿಕೆ ಆಧರಿಸಿ ಎಚ್‌ಎಎಲ್‌ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿ ಪ್ರಕರಣಕ್ಕೆ ಅಂತ್ಯ ಹಾಡಿದ್ದರು.

ಈ ಮಧ್ಯೆ, 15-02-2020ರಂದು ಪತಿ ರಘುನಾಥ್‌ ಅವರನ್ನು ಶ್ರೀನಿವಾಸ್‌, ದಾಮೋದರ್‌, ಆಂಧ್ರಪ್ರದೇಶದ ಚಿತ್ತೂರಿನ ರಾಮಚಂದ್ರಯ್ಯ ಮತ್ತು ಕೆ ಪ್ರತಾಪ್‌ ಕೊಲೆ ಮಾಡಿದ್ದಾರೆ ಎಂದು ಮಂಜುಳಾ ನೀಡಿದ್ದ ದೂರನ್ನು ಆಧರಿಸಿ ಪೊಲೀಸರು ಎಫ್‌ಐಆರ್‌ ದಾಖಲಿಸಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಮಂಜುಳಾ 24-02-2020ರಂದು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಇದರ ತನಿಖೆ ನಡೆಸಿದ್ದ ಮ್ಯಾಜಿಸ್ಟ್ರೇಟ್‌ 2-03-2020ರಂದು ಎಫ್‌ಐಆರ್‌ ದಾಖಲಿಸಿ, ತನಿಖೆ ನಡೆಸಲು ಆದೇಶಿಸಿದ್ದರು. ಈ ನಡುವೆ ಮಂಜುಳಾ ಮತ್ತು ಶ್ರೀನಿವಾಸ್‌ ಕುಟುಂಬದ ನಡುವೆ ಹಲವು ಪ್ರಕರಣಗಳು ಪರಸ್ಪರ ದಾಖಲಾದವು. ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಹೊರತಾಗಿಯೂ ತನಿಖೆ ಪೂರ್ಣಗೊಳ್ಳಲಿಲ್ಲ. ಇದರಿಂದ ಮಂಜುಳಾ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಎಸ್‌ಐಟಿ ತನಿಖೆಗೆ ಆದೇಶಿಸಿತ್ತು. ಇದರ ತನಿಖೆ ನಡೆಸಿದ್ದ ಮೂವರು ಅಧಿಕಾರಿಗಳ ಎಸ್ಐಟಿಯು ಮೂರು ಅಪರಾಧ ಪ್ರಕರಣಗಳಲ್ಲಿ ಸಕ್ಷಮ ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಸಿತ್ತು.

21-02-2022ರಂದು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಬಿ ರಿಪೋರ್ಟ್‌ ತಿರಸ್ಕರಿಸಿ, ಮೊದಲಿಗೆ ಪ್ರಕರಣ ದಾಖಲಾಗಿದ್ದ ಎಚ್‌ಎಎಲ್‌ ಪೊಲೀಸ್‌ ಠಾಣಾಧಿಕಾರಿಗೆ ತನಿಖೆ ನಡೆಸಿ 22-04-2022ರ ಒಳಗೆ ವರದಿ ಸಲ್ಲಿಸಲು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ, ಮಂಜುಳಾ ಮತ್ತು ಅವರ ಪುತ್ರ ರೋಹಿತ್ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದು, ಎಸ್‌ಐಟಿಯು ಈಗಾಗಲೇ ಬಿ ರಿಪೋರ್ಟ್‌ ಸಲ್ಲಿಸಿರುವುದರಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿದ್ದರು. ಇದರ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಆರು ತಿಂಗಳಲ್ಲಿ ತನಿಖೆ ನಡೆಸಬೇಕು ಎಂದು 2022ರ ಸೆಪ್ಟೆಂಬರ್‌ 3ರಂದು ಆದೇಶಿಸಿತ್ತು.

ಹೈಕೋರ್ಟ್‌ ಆದೇಶ ಪ್ರಶ್ನಿಸಿ ಶ್ರೀನಿವಾಸ್‌ ಮತ್ತು ಇತರೆ ಮೂವರು ಸುಪ್ರೀಂ ಕೋರ್ಟ್‌ನಲ್ಲಿ ಎರಡು ವಿಶೇಷ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳನ್ನು ವಜಾಗೊಳಿಸಿದ ಸರ್ವೋಚ್ಚ ನ್ಯಾಯಾಲಯವು 2025ರ ಏಪ್ರಿಲ್‌ 23ರಂದು ಸಿಬಿಐಗೆ 8 ತಿಂಗಳಲ್ಲಿ ತನಿಖೆ ನಡೆಸಿ, ಸಕ್ಷಮ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲು ಆದೇಶಿಸಿತ್ತು.

ಈ ಹಿನ್ನೆಲೆಯಲ್ಲಿ ಹಲಸೂರ್‌ ಗೇಟ್‌ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 420, 465, 468, 471 120B & 34 ಅಡಿ ದಾಖಲಾಗಿರುವ ಪ್ರಕರಣವನ್ನು ಸಿಬಿಐ ಪುನರ್‌ ದಾಖಲಿಸಿ, ವಿಚಾರಣೆ ನಡೆಸುತ್ತಿದೆ.

ಕೆ ರಘುನಾಥ್‌ ಅವರ ಅಸಲಿ ಸಹಿಗಳನ್ನು ಒಳಗೊಂಡ ದಾಖಲೆ ಬಚ್ಚಿಟ್ಟಿರುವುದು ಹಾಗೂ ಮಹಜರ್‌ ದಾಖಲೆಗಳನ್ನು ನಾಶಪಡಿಸಿ, ಅದರ ಬದಲಿಗೆ ತಿರುಚಿದ ದಾಖಲೆಗಳನ್ನು ಬಳಸಿದ ಆರೋಪ ಶ್ರೀನಿವಾಸ್‌, ಕಲ್ಪಜಾ ಮತ್ತು ಮೋಹನ್‌ ಅವರ ಮೇಲಿದೆ. ರಘುನಾಥ್‌ ಅವರ ಅಸಲಿ ಸಹಿಯ ದಾಖಲೆಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದರೆ 20.4.2018ರಂದು ಮಾಡಿರುವ ನಕಲಿ ವಿಲ್‌ ಮೂಲ ಪತ್ತೆಯಾಗುತ್ತದೆ ಎಂದು ಹೀಗೆ ಮಾಡಲಾಗಿದೆ. ಈ ಮೂಲಕ ಪಿತೂರಿ ನಡೆಸಿ, ದಾಖಲೆಗಳನ್ನು ತಿರುಚಲಾಗಿದೆ. ಸಾರ್ವಜನಿಕ ಅಧಿಕಾರಿಯಾಗಿ ಮೋಹನ್‌ ಅವರು ಕಲ್ಪಜಾ ಜೊತೆಗೂಡಿ ಸಾಕ್ಷ್ಯ ನಾಶ ಪ್ರಯತ್ನ ಮಾಡಿದ್ದಾರೆ. ಅಲ್ಲದೇ, ಹಾರಿಕೆ ಉತ್ತರ ನೀಡುವ ಮೂಲಕ ಆರೋಪಿಗಳು ತನಿಖೆಗೆ ಅಸಹಕರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಪೊಲೀಸ್‌ ಅಧಿಕಾರಿ ಮೋಹನ್‌ ಅವರನ್ನು ವಕೀಲ ರಜತ್‌ ಪ್ರತಿನಿಧಿಸಿದ್ದಾರೆ.

Kannada Bar & Bench
kannada.barandbench.com