ಪ್ರಜ್ವಲ್‌ ವಿರುದ್ಧ 400 ಮಹಿಳೆಯರ ಅತ್ಯಾಚಾರದ ಆರೋಪ: ರಾಹುಲ್‌ ಮೇಲೆ ಕ್ರಮಕೈಗೊಳ್ಳಲು ಕೋರಿ ಹೈಕೋರ್ಟ್‌ಗೆ ಪಿಐಎಲ್‌

ಶಿವಮೊಗ್ಗದಲ್ಲಿ 2024ರ ಮೇ 2ರಂದು ಪ್ರಚಾರ ಭಾಷಣ ಮಾಡಿದ್ದ ರಾಹುಲ್‌ ಹಾಸನದ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಪ್ರಜ್ವಲ್‌ 400 ಮಹಿಳೆಯರನ್ನು ಅತ್ಯಾಚಾರ ಮಾಡಿ, ಆ ಘಟನೆಯನ್ನು ವಿಡಿಯೊ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು ಎಂದು ವಿವರಿಸಲಾಗಿದೆ.
Prajwal Revanna, Rahul Gandhi and Karnataka HC
Prajwal Revanna, Rahul Gandhi and Karnataka HC
Published on

ಕಳೆದ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಜೆಡಿಎಸ್‌ನ ಉಚ್ಚಾಟಿತ ಸಂಸದ ಪ್ರಜ್ವಲ್‌ ರೇವಣ್ಣ ಅವರು 400 ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗಿ, ಅವರ ವಿಡಿಯೋಗಳನ್ನು ಮಾಡಿಕೊಂಡಿದ್ದಾರೆ ಎಂದು ಸಾರ್ವಜನಿಕವಾಗಿ ಸುಳ್ಳು ಹರಡಿದ ಆರೋಪದ ಮೇಲೆ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ವಿರುದ್ಧ ಕ್ರಮಕೈಗೊಳ್ಳಲು ನಿರ್ದೇಶಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ಆಲ್‌ ಇಂಡಿಯಾ ದಲಿತ ಆಕ್ಷನ್‌ ಕಮಿಟಿಯು ರಾಷ್ಟ್ರೀಯ ಅಧ್ಯಕ್ಷ ಚಿ ನಾ ರಾಮು ಮತ್ತು ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷೆ ಸುಶೀಲಾ ದೇವರಾಜ್‌ ಅವರಿಂದ ಜಿ ಆರ್‌ ಲಾ ಫರ್ಮ್‌ ಮೂಲಕ ಪಿಐಎಲ್‌ ಸಲ್ಲಿಕೆಯಾಗಿದ್ದು, ಅದು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ. ಅರ್ಜಿಯಲ್ಲಿ ರಾಹುಲ್‌ ಗಾಂಧಿ, ರಾಷ್ಟ್ರೀಯ ಮತ್ತು ರಾಜ್ಯ ಮಹಿಳಾ ಆಯೋಗ, ರಾಜ್ಯ ಗೃಹ ಇಲಾಖೆ ಮತ್ತು ರಾಜ್ಯ ಪೊಲೀಸ್‌ ಮಹಾನಿರ್ದೇಶಕರನ್ನು ಪ್ರತಿವಾದಿಗಳನ್ನಾಗಿಸಲಾಗಿದೆ.

ದ್ವೇಷ ಭಾಷಣದ ಮೂಲಕ ಮಹಿಳೆಯ ಘನತೆಗೆ ಚ್ಯುತಿ ಉಂಟು ಮಾಡಿರುವ, ಸಂವಿಧಾನ ಮತ್ತು ಭಾರತೀಯ ನಾರಿಗೆ ಒದಗಿಸಿರುವ ಸಾಂವಿಧಾನಿಕ ರಕ್ಷಣೆಗೆ ಅವಿಧೇಯತೆ ತೋರಿರುವ ರಾಹುಲ್‌ ಗಾಂಧಿ ವಿರುದ್ಧ ಕ್ರಮಕೈಗೊಳ್ಳಲು ರಾಷ್ಟ್ರೀಯ ಮತ್ತು ರಾಜ್ಯ ಮಹಿಳಾ ಆಯೋಗ, ರಾಜ್ಯ ಗೃಹ ಇಲಾಖೆ ಮತ್ತು ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಮಹಿಳೆಯ ಘನತೆಗೆ ಚ್ಯುತಿ ಉಂಟು ಮಾಡುವ ಮೂಲಕ ಆಕೆಗೆ ಅವಮಾನ, ನೋವು, ವೇದನೆ ಉಂಟು ಮಾಡಿರುವ ಅಸಾಂವಿಧಾನಿಕ ಭಾಷಣಕ್ಕೆ ರಾಹುಲ್‌ ಬೇಷರತ್‌ ಕ್ಷಮೆ ಕೋರಲು ಆದೇಶಿಸಬೇಕು. ಮಹಿಳೆಯ ಘನತೆಗೆ ಹಾನಿ ಮಾಡಿರುವ ರಾಹುಲ್‌ ಹಾಗೂ ಇತರೆ ಪ್ರತಿವಾದಿಗಳಿಗೆ ಸಾರ್ವಜನಿಕ ಹುದ್ದೆಯ ದುರ್ಬಳಕೆ, ಸಾರ್ವಜನಿಕ ನಂಬಿಕೆಗೆ ಹಾನಿ, ಸಾಂವಿಧಾನಿಕ ನಿಬಂಧನೆಗಳ ಉಲ್ಲಂಘನೆಗಾಗಿ ಭಾರತೀಯ ನ್ಯಾಯ ಸಂಹಿತೆಯ ಅಡಿ ಸಾಂಕೇತಿಕ ದಂಡ ವಿಧಿಸಬೇಕು ಎಂದು ಮನವಿ ಮಾಡಲಾಗಿದೆ.

Also Read
ನೆರವಿನ ಸೋಗಿನಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ: ಪ್ರಜ್ವಲ್‌ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದ ವಿಶೇಷ ನ್ಯಾಯಾಲಯ

ಪ್ರಕರಣದ ಹಿನ್ನೆಲೆ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ 2024ರ ಮೇ 2ರಂದು ಶಿವಮೊಗ್ಗದಲ್ಲಿ ಪ್ರಚಾರ ಭಾಷಣ ಮಾಡಿದ್ದ ರಾಹುಲ್‌ ಗಾಂಧಿ ಅವರು ಹಾಸನದ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಪ್ರಜ್ವಲ್‌ ರೇವಣ್ಣ ಅವರು 400 ಮಹಿಳೆಯರನ್ನು ಅತ್ಯಾಚಾರ ಮಾಡಿ, ಆ ಘಟನೆಯನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಇಂಥ ಅಭ್ಯರ್ಥಿಯ ಪರವಾಗಿ ಮತ ಕೇಳಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರ ಕ್ಷಮೆ ಕೋರಬೇಕು ಎಂದು ವಾಗ್ದಾಳಿ ನಡೆಸಿದ್ದರು.

ಈ ಹೇಳಿಕೆಯ ಮೂಲಕ ಮಹಿಳೆಯ ಘನತೆಗೆ ವಿಶೇಷವಾಗಿ ಹಾಸನ ಭಾಗದ ಮಹಿಳೆಯರ ಘನತೆಗೆ ರಾಹುಲ್‌ ಹಾನಿ ಮಾಡಿದ್ದಾರೆ. ಸುಳ್ಳು ಸುದ್ದಿ ಹರಡುವ ಮೂಲಕ ಮತಗಳಿಕೆಗೆ ಪ್ರಕರಣವನ್ನು ಬಳಕೆ ಮಾಡಿಕೊಂಡಿದ್ದಾರೆ. ಭಾರತದ ಮಹಿಳೆಯ ಘನತೆಗೆ ಹಾನಿ ಮಾಡಿದ್ದಾರೆ. ಅಧಿಕಾರಿಗಳೂ ಅವರ ವಿರುದ್ಧ ಕ್ರಮಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

Kannada Bar & Bench
kannada.barandbench.com