ನರೇಂದ್ರ ಮೋದಿ ಮಾತ್ರ ಮೊಕದ್ದಮೆ ಹೂಡಬಹುದಿತ್ತೆ ವಿನಾ ಮೋದಿ ಉಪನಾಮ ಇರುವವರೆಲ್ಲಾ ಅಲ್ಲ: ಮೇಲ್ಮನವಿಯಲ್ಲಿ ರಾಹುಲ್

ಇದು ರಾಜಕೀಯಪ್ರೇರಿತ ದೂರಾಗಿದ್ದು ದೂರು ಸಲ್ಲಿಸುವ ಹಕ್ಕು ಅರ್ಜಿದಾರನಿಗೆ ಇಲ್ಲ ಎಂದು ವಿವಿಧ ಆಧಾರಗಳನ್ನು ಉಲ್ಲೇಖಿಸಿ ರಾಹುಲ್ ವಿವರಿಸಿದ್ದಾರೆ.
Rahul Gandhi
Rahul Gandhi Facebook
Published on

ತಮ್ಮ ವಿರುದ್ಧ 2019ರಲ್ಲಿ ಹೂಡಲಾಗಿದ್ದ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ  ತಮ್ಮನ್ನು ದೋಷಿ ಎಂದು ಘೋಷಿಸಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ್ದ ಸೂರತ್‌ನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ನೀಡಿದ್ದ ತೀರ್ಪನ್ನುಸೂರತ್‌ನ ಸೆಷನ್ಸ್‌ ನ್ಯಾಯಾಲಯದಲ್ಲಿ ಪ್ರಶ್ನಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೊಕದ್ದಮೆಗೆ ಸಂಬಂಧಿಸಿದಂತೆ ವಿವಿಧ ಆಕ್ಷೇಪಗಳನ್ನು ಎತ್ತಿದ್ದಾರೆ.

ಇದು ರಾಜಕೀಯಪ್ರೇರಿತ ದೂರಾಗಿದ್ದು ದೂರು ಸಲ್ಲಿಸುವ ಹಕ್ಕು ದೂರುದಾರನಿಗೆ ಇಲ್ಲ ಎಂದು ವಿವಿಧ ಆಧಾರಗಳನ್ನು ಉಲ್ಲೇಖಿಸಿ ರಾಹುಲ್‌ ವಿವರಿಸಿದ್ದಾರೆ. ಅವರು ಅರ್ಜಿಯಲ್ಲಿ ಮಂಡಿಸಿರುವ ವಾದದ ಪ್ರಮುಖಾಂಶಗಳು ಹೀಗಿವೆ:

  1. ನಾನು ಮಾಡಿರುವೆ ಎನ್ನಲಾದ ಆರೋಪಗಳು ನರೇಂದ್ರ ಮೋದಿ ಅವರ ವಿರುದ್ಧ ವೈಯಕ್ತಿಕವಾಗಿರುವುದರಿಂದ ಅವರನ್ನು ಮಾತ್ರ ಮಾನನಷ್ಟ ಮೊಕದ್ದಮೆಯ ಬಾಧಿತ ವ್ಯಕ್ತಿ ಎಂದು ಪರಿಗಣಿಸಬಹುದಾಗಿದ್ದು ಅವರು ಮಾತ್ರ ದೂರು ಸಲ್ಲಿಸಬಹುದಾಗಿತ್ತು. ಪೂರ್ಣೇಶ್‌ ಮೋದಿ ಅವರಿಗೆ ದೂರು ಸಲ್ಲಿಸುವ ಹಕ್ಕಿಲ್ಲ.

  2. ಪ್ರತಿಪಕ್ಷದ ನಾಯಕನಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಬೇಕಾಗುತ್ತದೆ.

  3. ದೂರುದಾರರಿಗೆ ಆಘಾತವಾಗಿದೆ, ಅವರ ಖ್ಯಾತಿಗೆ ಧಕ್ಕೆ ಉಂಟಾಗಿದೆ ಎಂಬ ಏಕೈಕ ಕಾರಣಕ್ಕೆ ಅವರನ್ನು ಪ್ರಕರಣದ ಬಾಧಿತ ವ್ಯಕ್ತಿಯನ್ನಾಗಿ ಮಾಡಲಾಗದು.

  4. ವಿಚಾರಣಾ ನ್ಯಾಯಾಲಯ ನಾನು ಆರೋಪಿಸಿದೆ ಎನ್ನಲಾದ ಮೋದಿಗಳನ್ನು (ನರೇಂದ್ರ ಮೋದಿ, ನೀರವ್‌ ಮೋದಿ, ಲಲಿತ್‌ ಮೋದಿ) ಮೋದಿ ಜಾತಿ ಎಂದು ಪರಿಗಣಿಸಿಲ್ಲ; ಮೋದಿ ಸಮುದಾಯದ ಸದಸ್ಯ ಎಂದು ದೂರುದಾರರನ್ನು ತಾನು ನಿಂದಿಸಿಲ್ಲ.

  5. ದೂರು ರಾಜಕೀಯ ಪ್ರೇರಿತವಾಗಿದೆ

  6. "ಆಘಾತಕಾರಿ" ವಾಕ್ಯವನ್ನು ನಿರ್ಧರಿಸುವುದು ಅಸಂಬದ್ಧ ವಿಧಾನ.

  7. ಎರಡು ವರ್ಷಗಳ ಶಿಕ್ಷೆ ಅನರ್ಹತೆಗೆ ಕಾರಣವಾಗುತ್ತದೆ ಎಂದು ನ್ಯಾಯಾಧೀಶರಿಗೆ ತಿಳಿದಿರಬೇಕಿತ್ತು.

ರಾಜ್ಯದ ಕೋಲಾರದಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ರಾಜಕೀಯ ಸಮಾವೇಶವೊಂದರಲ್ಲಿ ರಾಹುಲ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ನೀರವ್‌ ಮೋದಿ, ಲಲಿತ್‌ ಮೋದಿ ಅವರಂತಹ ದೇಶಬಿಟ್ಟು ಪರಾರಿಯಾದ ವ್ಯಕ್ತಿಗಳೊಂದಿಗೆ ಹೋಲಿಸಿದ್ದರು. "ನೀರವ್ ಮೋದಿ, ಲಲಿತ್ ಮೋದಿ ಅಥವಾ ನರೇಂದ್ರ ಮೋದಿಯೇ ಇರಲಿ, ಎಲ್ಲಾ ಕಳ್ಳರ ಹೆಸರಿನಲ್ಲಿ ಮೋದಿ ಏಕೆ ಇದೆ?" ಎಂದು ಅವರು ಪ್ರಶ್ನಿಸಿದ್ದರು.

ರಾಹುಲ್‌ ಸಂಸತ್ತಿನ ಸದಸ್ಯರಾಗಿರುವುದರಿಂದ ಅವರು ಏನು ಹೇಳಿದರೂ ಅದು ಹೆಚ್ಚಿನ ಪರಿಣಾಮ ಬೀರುತ್ತದೆ ಹೀಗಾಗಿ ಅವರು ಸಂಯಮ ತೋರಬೇಕಿತ್ತು ಎಂದು ತಮ್ಮ168 ಪುಟಗಳ ತೀರ್ಪಿನಲ್ಲಿ, ನ್ಯಾಯಾಧೀಶ ಹದಿರಾಶ್ ವರ್ಮಾ ಅವರು ಹೇಳಿದ್ದರು. ಈ ಅಪರಾಧದಿಂದಾಗಿ ರಾಹುಲ್‌ ಗಾಂಧಿ ಲೋಕಸಭೆಯ ಸದಸ್ಯತ್ವದಿಂದ ಅನರ್ಹರಾಗಿದ್ದರು.

ಹಿರಿಯ ವಕೀಲ ಆರ್‌ಎಸ್ ಚೀಮಾ ಮತ್ತು ವಕೀಲರಾದ ಕಿರಿತ್ ಪನ್ವಾಲಾ ಹಾಗೂ ತರನ್ನುಮ್ ಚೀಮಾ ಅವರ ಕಾನೂನು ತಂಡದ ಮೂಲಕ ರಾಹುಲ್‌ ಮೇಲ್ಮನವಿ ಸಲ್ಲಿಸಿದ್ದಾರೆ.

Kannada Bar & Bench
kannada.barandbench.com