ಶಿಕ್ಷೆಗೆ ತಡೆ ಕೋರಿ ರಾಹುಲ್ ಸಲ್ಲಿಸಿರುವ ಮನವಿ ವಿಚಾರಣೆ: ಏ. 20ರಂದು ಆದೇಶ ನೀಡಲಿರುವ ಸೂರತ್ ಸೆಷನ್ಸ್ ನ್ಯಾಯಾಲಯ

ಗುಜರಾತಿಗಳ ಒಟ್ಟು ಜನಸಂಖ್ಯೆಯೇ ಕೇವಲ 6 ಕೋಟಿ ಇರುವಾಗ ಮೋದಿ ಉಪನಾಮ ಹೊಂದಿರುವ 13 ಕೋಟಿ ವ್ಯಕ್ತಿಗಳಿಗೆ ಅಪಮಾನವಾಗಿದೆ ಎಂಬ ದೂರುದಾರರ ತರ್ಕವನ್ನು ವಾದದ ವೇಳೆ ರಾಹುಲ್ ಪರ ವಕೀಲರು ಪ್ರಶ್ನಿಸಿದರು.
Rahul Gandhi, Surat Court
Rahul Gandhi, Surat Court

ತಮ್ಮ ವಿರುದ್ಧ ದಾಖಲಾಗಿರುವ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ವಿಧಿಸಿರುವ ಎರಡು ವರ್ಷಗಳ ಜೈಲು ಶಿಕ್ಷೆಗೆ ತಡೆ ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಲ್ಲಿಸಿದ ಮೇಲ್ಮನವಿಯ ತೀರ್ಪನ್ನು ಸೂರತ್ ಸೆಷನ್ಸ್ ನ್ಯಾಯಾಲಯ ಗುರುವಾರ ಕಾಯ್ದಿರಿಸಿದೆ.

ಪ್ರಕರಣದ ತೀರ್ಪನ್ನು ಕಾಯ್ದಿರಿಸುವ ಮೊದಲು ರಾಹುಲ್‌ ಮತ್ತು ದೂರುದಾರ ಬಿಜೆಪಿಯ ಪೂರ್ಣೇಶ್‌ ಮೋದಿ ಅವರ ವಾದವನ್ನು ನ್ಯಾಯಾಧೀಶ ರಾಬಿನ್ ಮೊಗೇರ ಆಲಿಸಿದರು. ಏಪ್ರಿಲ್ 20 ರಂದು ಆದೇಶ ಪ್ರಕಟವಾಗಲಿದೆ. ಇಂದಿನ ವಿಚಾರಣೆ ವೇಳೆ ಇಬ್ಬರು ಪಕ್ಷಕಾರರ ಪರ ಮಂಡನೆಯಾದ ವಾದಗಳ ಪ್ರಮುಖಾಂಶಗಳು ಈ ರೀತಿ ಇವೆ:

ರಾಹುಲ್‌ ಪರ ಹಿರಿಯ ನ್ಯಾಯವಾದಿ ಆರ್‌ ಎಸ್‌ ಚೀಮಾ ಮಂಡಿಸಿದ ವಾದ:

 • ಐಪಿಸಿ ಸೆಕ್ಷನ್‌ ಸೆಕ್ಷನ್ 499ಕ್ಕೆ ನೀಡಿರುವ ಎರಡನೇ ವಿವರಣೆ ಪ್ರಕಾರ ವ್ಯಕ್ತಿ, ಕಂಪೆನಿ, ಗುಂಪು ಅಥವಾ ಅವರಿಗೆ ಸಂಬಂಧಪಟ್ಟ ವ್ಯಕ್ತಿಗಳನ್ನು ಅಪಮಾನಗೊಳಿಸಿದ್ದರೆ ಮಾತ್ರ ದೂರು ಸಲ್ಲಿಸಬಹುದು. ಪೂರ್ಣೇಶ್‌ ಮೋದಿ ಅವರಿಗೆ ದೂರು ಸಲ್ಲಿಸಲು ಅವಕಾಶವಿದೆಯೇ ಎಂಬುದನ್ನು ನ್ಯಾಯಾಲಯ ಪರಾಮರ್ಶಿಸಬೇಕು.

 • ಸನ್ನಿವೇಶದಿಂದ ಹೊರಗಿರಿಸಿ ನೋಡದೆ ಹೋದರೆ ರಾಹುಲ್‌ ಗಾಂಧಿ ಅವರ ಭಾಷಣ ಮಾನಹಾನಿಕರವಾಗದು. ಮಾನನಷ್ಟ ಪ್ರಕರಣ ಸೃಷ್ಟಿಸಲೆಂದೇ ಹೇಳಿಕೆಯನ್ನು ಭೂತಗನ್ನಡಿ ಹಿಡಿದು ನೋಡಲಾಗಿದೆ.

 • ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದ ಕಾರಣಕ್ಕಾಗಿ ಈ ದಾವೆ ಹೂಡಲಾಗಿದೆಯೇ ವಿನಾ ಬೇರೇನೂ ಅಲ್ಲ.

 • ರಾಹುಲ್‌ ಅವರ ಇಡೀ ಭಾಷಣವನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ.

 • ರಾಹುಲ್‌ ಭಾಷಣ ಮಾಡಿರುವುದು ಕರ್ನಾಟಕದ ಕೋಲಾರದಲ್ಲಿ. ವಿಚಾರಣೆ ನಡೆಸಿದ ಸೂರತ್‌ ನ್ಯಾಯಾಲಯಕ್ಕೆ ಅಧಿಕಾರ ವ್ಯಾಪ್ತಿ ಇಲ್ಲ.

 •  ಮಾನನಷ್ಟ ಕಾನೂನನ್ನು ಅತ್ಯಂತ ನಿಕಟ ಮತ್ತು ಸೂಕ್ಷ್ಮವಾಗಿ ಪರಿಶೀಲಿಸುವ ಅಗತ್ಯವಿದೆ.  

 • ಗುಜರಾತಿಗಳ ಒಟ್ಟು ಜನಸಂಖ್ಯೆಯೇ ಕೇವಲ 6 ಕೋಟಿ ಇರುವಾಗ ಮೋದಿ ಉಪನಾಮ ಹೊಂದಿರುವ 13 ಕೋಟಿ ವ್ಯಕ್ತಿಗಳಿಗೆ ಅಪಮಾನವಾಗಿದೆ ಎಂಬ ದೂರುದಾರರ ತರ್ಕ ಒಪ್ಪುವಂಥದ್ದಲ್ಲ.

 • ವಿಚಾರಣಾ ನ್ಯಾಯಾಲಯ ರಾಹುಲ್‌ ಅವರನ್ನು ಅಪರಾಧಿ ಎಂದು ಘೋಷಿಸಿದ ಮತ್ತು ಗರಿಷ್ಠ ಶಿಕ್ಷೆ ವಿಧಿಸಿದ ಬಗೆ ಪ್ರಶ್ನಾರ್ಹ. ಶಿಕ್ಷೆಯ ಅವಧಿಯನ್ನು ಒಂದು ದಿನ ಮೊಟಕುಗೊಳಿಸಿದ್ದರೂ ರಾಹುಲ್‌ ಲೋಕಸಭಾ ಸದಸ್ಯತ್ವದಿಂದ ಅನರ್ಹರಾಗುತ್ತಿರಲಿಲ್ಲ.

 • ಪೂರ್ಣೇಶ್‌ ಪರ ವಕೀಲರ ವಾದ ಸಂಪೂರ್ಣ ಕ್ಷುಲ್ಲಕ. ರಾಹುಲ್‌ ಕ್ಷಮೆ ಕೇಳಬೇಕು ಎನ್ನುವ ಅವರ ವಾದದಲ್ಲಿ ಹುರುಳಿಲ್ಲ.

ಪೂರ್ಣೇಶ್‌ ಪರ ನ್ಯಾಯವಾದಿ ಟೋಲಿಯಾ ವಾದ

 • ಕಾನೂನಿನ ಪ್ರಕಾರ ಒಬ್ಬನನ್ನು ತಪ್ಪಿತಸ್ಥ ಎಂದು ಘೋಷಿಸಿ ಶಿಕ್ಷೆಗೆ ಗುರಿಪಡಿಸಿದ ಕೂಡಲೇ ಆತ ಅಥವಾ ಆಕೆ ಸಂಸದ ಇಲ್ಲವೇ ಶಾಸಕರಾಗಿ ಮುಂದುವರಿಯಲು ಅನರ್ಹರಾಗುತ್ತಾರೆ.

 • ಅಪರಾಧಧ ಗುರುತ್ವವನ್ನು ನ್ಯಾಯಾಲಯ ಗಮನಿಸಬೇಕು. ಸಂಸದರು ಹಾಗೂ ದೇಶದ ಎರಡನೇ ಅತಿ ದೊಡ್ಡದ ಪಕ್ಷದ ಅಧ್ಯಕ್ಷರಾಗಿದ್ದ ರಾಹುಲ್‌ ಅವರ ಭಾಷಣ ದೇಶದ ಮೇಲೆ  ಭಾರಿ ಪರಿಣಾಮ ಬೀರಿತು. ಅವರು ತಮ್ಮದೇ ಭಾಷಣವನ್ನು ರೋಚಕಗೊಳಿಸಲು ಯತ್ನಿಸಿದರು.

 • ಭಾಷಣ ಪ್ರಧಾನಿ ಮೋದಿ ಅವರನ್ನು ಟೀಕಿಸುವುದಕ್ಕಷ್ಟೇ ಸೀಮಿತವಾಗಲಿಲ್ಲ. ʼಎಲ್ಲಾ ಕಳ್ಳರ ಹೆಸರಿನಲ್ಲಿ ಮೋದಿ ಉಪನಾಮ ಏಕೆ ಇದೆ? ಹುಡುಕಿದರೆ ಇನ್ನಷ್ಟು ಮೋದಿಗಳು ಸಿಗಬಹುದು” ಎಂದರು ಇದರಿಂದ ನನ್ನ ಕಕ್ಷೀದಾರ ಪೂರ್ಣೇಶ್‌ ಮೋದಿ ಅವರಿಗೆ ಅಪಮಾನವಾಗಿದೆ.

 • ವಿಚಾರಣಾ ನ್ಯಾಯಾಲಯ  ರಾಹುಲ್‌ ಅವರಿಗೆ ಗರಿಷ್ಠ ಶಿಕ್ಷೆ ವಿಧಿಸಿದ್ದು ಸಮರ್ಥನೀಯ.

 • ಸಂಸದರಾದ ಮಾತ್ರಕ್ಕೆ ಅವರು ಶಿಕ್ಷೆಯಿಂದ ಹೊರತಲ್ಲ.

 • ತೀರ್ಪು ನೀಡಿದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ವಿರುದ್ಧ ರಾಹುಲ್‌ ಆರೋಪಗಳನ್ನು ಮಾಡಿದ್ದಾರೆ.

 • ತಮ್ಮ ಹೇಳಿಕೆ ಬಗ್ಗೆ ರಾಹುಲ್‌ ಇದುವರೆಗೂ ಕ್ಷಮೆ ಕೇಳಿಲ್ಲ.

 • ನ್ಯಾಯಾಲಯಕ್ಕೆ ತಮ್ಮ ಪಕ್ಷದ ನಾಯಕರನ್ನು ಕರೆತಂದು ತಮಗೆ ಬೆಂಬಲ ಇರುವುದಾಗಿ ಸಾರ್ವಜನಿಕರಿಗೆ ತೋರಿಸುತ್ತಿದ್ದಾರೆ. ಸಂಸದರಾದವರು ಮೊದಲು ಸಾರ್ವಜನಿಕರ ಸೇವಕರು ನಂತರ ಮತ್ಮ ಪಕ್ಷದ ನಾಯಕರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

Kannada Bar & Bench
kannada.barandbench.com