ತಮ್ಮ ವಿರುದ್ಧ ಹೂಡಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಹಾಜರಾಗುವುದರಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಭಿವಂಡಿ ನ್ಯಾಯಾಲಯ ಇಂದು ಶಾಶ್ವತ ವಿನಾಯಿತಿ ನೀಡಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖಂಡ ರಾಜೇಶ್ ಕುಂಟೆ ಅವರು ಸಲ್ಲಿಸಿರುವ ದೂರಿನ ಹಿನ್ನೆಲೆಯಲ್ಲಿ ದಾಖಲಾಗಿದ್ದ ಪ್ರಕರಣ ಇದಾಗಿದೆ.
ಮಹಾತ್ಮ ಗಾಂಧಿಯವರ ಸಾವಿಗೆ ಆರೆಸ್ಸೆಸ್ ಕಾರಣ ಎಂದು ರಾಹುಲ್ ತಮ್ಮ ಭಾಷಣದಲ್ಲಿ ಹೇಳಿದ್ದನ್ನು ಆಕ್ಷೇಪಿಸಿ ಕುಂಟೆ ಮಾನನಷ್ಟ ಮೊಕದ್ದಮೆ ಹೂಡಿದ್ದರು.
2014ರಿಂದ ಮಹಾರಾಷ್ಟ್ರದ ಭಿವಂಡಿಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಜೂನ್ 2018ರಲ್ಲಿ ಮ್ಯಾಜಿಸ್ಟ್ರೇಟ್ ಎದುರು ಹಾಜರಾದ ರಾಹುಲ್ ತಾವು ನಿರ್ದೋಷಿ ಎಂದು ವಾದಿಸಿದ್ದರು. ಬಳಿಕ ವಿಚಾರಣೆ ಆರಂಭವಾಗಿತ್ತು.
ತಾನು ಸಂಸತ್ ಸದಸ್ಯನಾಗಿದ್ದು ಕ್ಷೇತ್ರಕ್ಕೆ ಭೇಟಿ ನೀಡಬೇಕು, ಜೊತೆಗೆ ಪಕ್ಷದ ಕಾರ್ಯಗಳಿಗೆ ಹಾಜರಾಗಬೇಕಿದೆ ಎಂದು ಕಾರಣ ನೀಡಿ 2022ರಲ್ಲಿ ನ್ಯಾಯಾಲಯಕ್ಕೆ ಖುದ್ದು ಹಾಜರಾತಿಯಿಂದ ಶಾಶ್ವತ ವಿನಾಯಿತಿ ಕೋರಿ ರಾಹುಲ್ ಅರ್ಜಿ ಸಲ್ಲಿಸಿದ್ದರು.
ದೂರುದಾರರ ಪರ ವಾದ ಮಂಡಿಸಿದ ವಕೀಲ ಪ್ರಭೋದ್ ಜಯವಂತ್ ಅವರು ರಾಹುಲ್ ಅವರಿಗೆ ವಿನಾಯಿತಿ ನೀಡುವುದನ್ನು ವಿರೋಧಿಸಿ ಏಪ್ರಿಲ್ 1 ರಂದು ಅರ್ಜಿ ಸಲ್ಲಿಸಿದರು. (ಮೋದಿ ಉಪನಾಮ ಕುರಿತಂತೆ) ಹೂಡಲಾದ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ನ್ಯಾಯಾಲಯ ರಾಹುಲ್ ದೋಷಿ ಎಂದಿದ್ದು ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ. ಪರಿಣಾಮ ಸಂಸದರಾಗಿ ಅವರು ಅನರ್ಹಗೊಂಡಿದ್ದಾರೆ ಎಂದು ಹೊಸದಾಗಿ ಸಂಭವಿಸಿರುವ ಬೆಳವಣಿಗೆಗಳನ್ನು ನ್ಯಾಯಾಲಯದ ಮುಂದಿರಿಸಿದರು.
ಆದರೆ ರಾಹುಲ್ ಪರ ವಾದ ಮಂಡಿಸಿದ ವಕೀಲ ಎನ್ ವಿ ಅಯ್ಯರ್ (ʼಸೂರತ್ ನ್ಯಾಯಾಲಯ ನೀಡಿದ ಆದೇಶವನ್ನು ತಮ್ಮ ಕಕ್ಷಿದಾರರು ಪ್ರಶ್ನಿಸಿದ್ದಾರೆ. ಹೊಸ ಬೆಳವಣಿಗೆಯಿಂದಾಗಿ ಈಗಾಗಲೇ ಸಲ್ಲಿಸಿರುವ ವಿನಾಯಿತಿ ಅರ್ಜಿಗೆ ತೊಂದರೆಯುಂಟಾಗುವುದಿಲ್ಲ ಎಂದರು.
ಸುದೀರ್ಘವಾಗಿ ವಾದ ಆಲಿಸಿದ ನ್ಯಾಯಾಧೀಶ ಎಲ್ ಸಿ ವಾಡೀಕರ್ ಅವರು ಹಾಜರಾತಿಯಿಂದ ಶಾಶ್ವತ ವಿನಾಯಿತಿ ಕೋರಿದ್ದ ರಾಹುಲ್ ಅವರ ಮನವಿಯನ್ನು ಪುರಸ್ಕರಿಸಿದರು. ನ್ಯಾಯಾಧೀಶರು ಜೂನ್ 3, 2023 ರಿಂದ ಸಾಕ್ಷ್ಯ ದಾಖಲಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಲಿದ್ದಾರೆ.