[ರಾಹುಲ್ ವಿಚಾರಣೆ] ಇ ಡಿ ನಿರ್ದೇಶಕರ ಅಧಿಕಾರಾವಧಿ ವಿಸ್ತರಣೆ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಕಾಂಗ್ರೆಸ್ ಸದಸ್ಯೆ

ಕಾಮನ್ ಕಾಸ್ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಇ ಡಿ ನಿರ್ದೇಶಕರ ಅಧಿಕಾರಾವಧಿ ವಿಸ್ತರಣೆ ಉಲ್ಲಂಘಿಸಿದೆ ಎಂದು ಅರ್ಜಿದಾರೆ ಡಾ. ಜಯಾ ಠಾಕೂರ್ ದೂರಿದ್ದಾರೆ.
Enforcement Directorate, PMLA
Enforcement Directorate, PMLA
Published on

ಜಾರಿ ನಿರ್ದೇಶನಾಲಯದ (ಇ ಡಿ) ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವರ ಅಧಿಕಾರಾವಧಿ ವಿಸ್ತರಣೆ ಪ್ರಶ್ನಿಸಿ ಮಹಿಳಾ ಕಾಂಗ್ರೆಸ್ ಸದಸ್ಯರೊಬ್ಬರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ [ಡಾ ಜಯಾ ಠಾಕೂರ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ವಿಚಾರಣೆಗೆ ಒಳಪಡಿಸಿರುವ ಹಿನ್ನೆಲೆಯಲ್ಲಿ ಈ ಅರ್ಜಿ ಸಲ್ಲಿಸಲಾಗಿದೆ. ಕಾಮನ್‌ ಕಾಸ್‌ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ಇ ಡಿ ನಿರ್ದೇಶಕರ ಅಧಿಕಾರಾವಧಿ ವಿಸ್ತರಣೆ ಉಲ್ಲಂಘಿಸಿದೆ ಎಂದು ಅರ್ಜಿದಾರೆ ಡಾ. ಜಯಾ ಠಾಕೂರ್‌ ದೂರಿದ್ದಾರೆ.

ಮಿಶ್ರಾ ಅವರು 2020ರ ನವೆಂಬರ್‌ನಲ್ಲಿ ನಿವೃತ್ತಿಯಾಗಬೇಕಿತ್ತು. ಆದರೆ ಬಳಿಕ ಎರಡು ಬಾರಿ ಅವರ ಅಧಿಕಾರಾವಧಿ ವಿಸ್ತರಿಸಲಾಯಿತು. ಅಧಿಕಾರಾವಧಿಯನ್ನು ಎರಡು ವರ್ಷಗಳಿಂದ ಮೂರು ವರ್ಷಗಳಿಗೆ ಹೆಚ್ಚಿಸುವ ಮೂಲಕ ಅವರ ನೇಮಕಾತಿ ಆದೇಶಕ್ಕೆ ಪೂರ್ವಾನ್ವಯ ಬದಲಾವಣೆ ಮಾಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸೆಪ್ಟೆಂಬರ್ 2021ರಲ್ಲಿ ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು.

ಅರ್ಜಿಯ ಪ್ರಮುಖಾಂಶಗಳು

  • ಎಫ್‌ಐಆರ್‌ ಇಲ್ಲದಿದ್ದರೂ ಹತ್ತು ವರ್ಷಗಳಿಂದ ರಾಹುಲ್‌ ಗಾಂಧಿ ವಿರುದ್ಧ ತನಿಖೆ ನಡೆಯುತ್ತಿದೆ ಎಂದು ಅರ್ಜಿ ಹೇಳಿದೆ.

  • ರಾಹುಲ್‌ ವಿರುದ್ಧ ಬಳಸಲಾಗಿರುವ ಕಾಯಿದೆಗಳು ಪ್ರಜಾಪ್ರಭುತ್ವದ ಲಕ್ಷಣಗಳಿಗೆ ವಿರುದ್ಧವಾಗಿವೆ. ಇಡೀ ಪ್ರಪಂಚದಲ್ಲಿ 10 ವರ್ಷಗಳವರೆಗೆ ತನಿಖೆ ನಡೆಸುವ ಯಾವುದೇ ಸಂಸ್ಥೆಗಳು ಇಲ್ಲ.

  • ಕೇಂದ್ರ ಸರ್ಕಾರ ಹೀಗೆ ಅಧಿಕಾರಾವಧಿ ವಿಸ್ತರಿಸಿ ರಾಜಕೀಯ ವಿರೋಧಿಗಳ ವಿರುದ್ಧ ತನಿಖಾ ಸಂಸ್ಥೆಗಳನ್ನು ಬಳಸಿ ಸಂವಿಧಾನದ ಮೂಲ ರಚನೆಯನ್ನು ನಾಶಪಡಿಸುತ್ತಿದೆ.

  • ಕಾಂಗ್ರೆಸ್‌ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪ್ರತಿಷ್ಠೆಗೆ ಧಕ್ಕೆ ತರಲು ಏಜೆನ್ಸಿಗಳನ್ನು ಕೇಂದ್ರ ಬಳಸುತ್ತಿದೆ.

  • ಹೀಗಾಗಿ ಇ ಡಿಯ ಹಾಲಿ ನಿರ್ದೇಶಕರಿಗೆ ನೀಡಲಾದ ವಿಸ್ತರಣಾ ಆದೇಶಗಳನ್ನು ಮತ್ತುಅದಕ್ಕೆ ದಾರಿಮಾಡಿಕೊಟ್ಟ 2021ರ ಕಾಯಿದೆಯನ್ನು ರದ್ದುಪಡಿಸಬೇಕು.

Kannada Bar & Bench
kannada.barandbench.com