ʼಎಲ್ಲಾ ಕಳ್ಳರಿಗೂ ಮೋದಿ ಉಪನಾಮʼ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಅವರು ಹೂಡಿರುವ ಮೊಕದ್ದಮೆಯಲ್ಲಿ ಪಾಟ್ನಾ ಕೋರ್ಟ್ ನೀಡಿದ ಸಮನ್ಸ್ ರದ್ದುಗೊಳಿಸುವಂತೆ ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಾಟ್ನಾ ಹೈಕೋರ್ಟ್ ಮೊರೆ ಹೋಗಿದ್ದಾರೆ ಎಂದು ವರದಿಯಾಗಿದೆ.
ಪ್ರಕರಣವನ್ನು ನ್ಯಾ. ಸಂದೀಪ್ ಕುಮಾರ್ ಅವರೆದುರು ಪ್ರಸ್ತಾಪಿಸಲಾಗಿದ್ದು ರಾಹುಲ್ ಅವರ ಅರ್ಜಿಯನ್ನು ಏಪ್ರಿಲ್ 24 ರಂದು ಆಲಿಸಲು ಅವರು ಸಮ್ಮತಿ ಸೂಚಿಸಿದ್ದಾರೆ.
ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಸಿಆರ್‌ಪಿಸಿ ಸೆಕ್ಷನ್ 313ರ ಅಡಿ ಹೇಳಿಕೆ ದಾಖಲಿಸಲು ಏಪ್ರಿಲ್ 12 ರಂದು ಖುದ್ದು ಹಾಜರಾಗುವಂತೆ ರಾಹುಲ್ ಅವರಿಗೆ ಪಾಟ್ನಾ ನ್ಯಾಯಾಲಯ ಸೂಚಿಸಿತ್ತು. ಆದರೆ ನಿಗದಿತ ದಿನದಂದ ರಾಹುಲ್ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ಬದಲಿಗೆ ಹೆಚ್ಚಿನ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಏಪ್ರಿಲ್ 25ರಂದು ಹಾಜರಾಗುವಂತೆ ರಾಹುಲ್ ಅವರಿಗೆ ನ್ಯಾಯಾಲಯ ಸೂಚಿಸಿತ್ತು. ಬಳಿಕ ರಾಹುಲ್ ಪಾಟ್ನಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಕೋಲಾರದಲ್ಲಿ 2019ರಲ್ಲಿ ನಡೆದಿದ್ದ ರಾಜಕೀಯ ಸಮಾವೇಶದ ವೇಳೆ "ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ. ಎಲ್ಲಾ ಕಳ್ಳರಿಗೂ ಮೋದಿ ಉಪನಾಮ ಏಕಿದೆ?” ಎಂದು ರಾಹುಲ್ ಪ್ರಶ್ನಿಸಿದ್ದರು.
ಸುಶೀಲ್ ಕುಮಾರ್ ಮೋದಿ ಅವರು ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ರಾಹುಲ್ ವಿರುದ್ಧ ಮೊಕದ್ದಮೆ ಹೂಡಿದ್ದರು. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಅವರಿಗೆ ಜುಲೈ 6, 2019 ರಂದು ಜಾಮೀನು ನೀಡಲಾಗಿತ್ತು.
ಇಂಥದ್ದೇ ಹೇಳಿಕೆ ನೀಡಿದ್ದ ರಾಹುಲ್ ವಿರುದ್ಧ ಬಿಜೆಪಿ ನಾಯಕ ಪೂರ್ಣೇಶ್ ಮೋದಿ ಅವರು ಹೂಡಿದ್ದ ಬೇರೊಂದು ಪ್ರಕರಣದಲ್ಲಿ ರಾಹುಲ್ ಅವರನ್ನು ಸೂರತ್ ನ್ಯಾಯಾಲಯ ಈಗಾಗಲೇ ದೋಷಿ ಎಂದು ಪರಿಗಣಿಸಿದೆ. ಇದೇ ಹೇಳಿಕೆಗೆ ಸಂಬಂಧಿಸಿದಂತೆ ರಾಹುಲ್ ವಿರುದ್ಧ ಹಲವು ವಿಚಾರಣೆಗಳು ಬಾಕಿ ಇವೆ.
ವಿವಿಧ ಹೇಳಿಕೆಗಳಿಗಾಗಿ ದೇಶದ ವಿವಿಧ ನ್ಯಾಯಾಲಯಗಳಲ್ಲಿ ರಾಹುಲ್ ವಿರುದ್ಧ 10ಕ್ಕೂ ಹೆಚ್ಚು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗಳು ಬಾಕಿ ಇದ್ದು ರಾಹುಲ್ ತಮ್ಮ ವಿರುದ್ಧ ಮಾಡಿದ ಆರೋಪಗಳಿಗಾಗಿ ಯಾರ ಬಗ್ಗೆಯೂ ಇಂತಹ ಪ್ರಕರಣ ದಾಖಲಿಸಿಲ್ಲ.