ರೈಲ್ವೆ ಇಲಾಖೆಯಿಂದ ದಲಿತ ಕುಟುಂಬಗಳ 29 ಮನೆ ಧ್ವಂಸ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ರೈಲ್ವೆ ಇಲಾಖೆ ಯಾವುದೇ ನೋಟಿಸ್ ಕೊಡದೇ ಅ. 31ರಂದು ಬುಲ್ಡೋಜರ್ ಮೂಲಕ 29 ಮನೆ ಧ್ವಂಸಗೊಳಿಸಿದೆ. ಇದರಿಂದ ದಲಿತ ಕುಟುಂಬಗಳ ಬೀದಿಪಾಲಾಗಿದ್ದು ಲಿಡ್ಕರ್ ಭವನದಲ್ಲಿ ನ. 30ರವರೆಗೆ ತಾತ್ಕಾಲಿಕ ಆಶ್ರಯ ಪಡೆದಿದ್ದಾರೆ ಎಂದು ನ್ಯಾಯಾಲಯಕ್ಕೆ ಮಾಹಿತಿ.
High Court of Karnataka
High Court of Karnataka
Published on

ಬೆಂಗಳೂರು ನಗರಾಭಿವೃದ್ದಿ ಪ್ರಾಧಿಕಾರ (ಬಿಡಿಎ) ಅಭಿವೃದ್ದಿಪಡಿಸಿ ಜಾಗ ಹಂಚಿಕೆ ಮಾಡಿದ ಲೇಔಟ್‌ನಲ್ಲಿ ಬಿಬಿಎಂಪಿ ಮಂಜೂರು ಮಾಡಿದ ಹಣದಲ್ಲಿ ಕೆ ಜಿ ಹಳ್ಳಿಯ ಎಚ್‌ಬಿಆರ್ ಒಂದನೇ ಹಂತ ವಾರ್ಡ್ ನಂಬರ್ 23ರಲ್ಲಿ ಸರ್ವೆ ನಂಬರ್ 71ರಲ್ಲಿ ಕಟ್ಟಿಕೊಂಡಿದ್ದ ದಲಿತ ಕುಟುಂಬಗಳ 29 ಮನೆಗಳನ್ನು ರೈಲ್ವೆ ಇಲಾಖೆ ನೆಲಸಮಗೊಳಿಸಿರುವುದನ್ನು ಪ್ರಶ್ನಿಸಿ ಸಂತ್ರಸ್ತ ಕುಟುಂಬಗಳು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿವೆ.

ಈ ವಿಚಾರವಾಗಿ ಮನೆ ಕಳೆದುಕೊಂಡಿರುವ ಕೆ ಜಿ ಹಳ್ಳಿ ಚುನಾ ಲೈನ್ ನಿವಾಸಿಗಳಾದ ಯು ರಾಣಿ ಸೇರಿ 14 ಮಂದಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲ ಜಿ ಆರ್ ಮೋಹನ್ ಅವರು “ಬಿಡಿಎ 1985ರಲ್ಲಿ ಬಡಾವಣೆ ನಿರ್ಮಿಸಿ ನಿವೇಶನಗಳನ್ನು ಹಂಚಿಕೆ ಮಾಡಿತ್ತು. 2015-16ರಲ್ಲಿ ಬಿಬಿಎಂಪಿ ಮನೆ ಕಟ್ಟಿಸಿಕೊಳ್ಳಲು ಪ್ರತಿಯೊಬ್ಬರಿಗೆ 3 ಲಕ್ಷ ರೂಪಾಯಿ ಸಾಲ ಸಹಾಯಧನ ನೀಡಿತ್ತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಟುಂಬಗಳು ಅಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಅವರಿಗೆ ಬಿಬಿಎಂಪಿ ವತಿಯಿಂದ ಮೂಲಸೌಕರ್ಯ ಸಹ ಕೊಡಲಾಗಿದೆ. ಹಕ್ಕುಪತ್ರ ಸಹ ವಿತರಿಸಲಾಗಿದೆ. ಆದರೆ, ರೈಲ್ವೆ ಇಲಾಖೆ ಯಾವುದೇ ನೋಟಿಸ್ ಕೊಡದೇ ಅಕ್ಟೋಬರ್‌ 31ರಂದು ಏಕಾಏಕಿ ಬುಲ್ಡೋಜರ್ ಮೂಲಕ 29 ಮನೆಗಳನ್ನು ಧ್ವಂಸಗೊಳಿಸಿದೆ. ಇದರಿಂದ ನೂರಾರು ದಲಿತ ಕುಟುಂಬಗಳ ಬೀದಿಪಾಲಾಗಿದ್ದು, ಸದ್ಯ ಅವರೆಲ್ಲ ಸ್ಥಳೀಯ ಲಿಡ್ಕರ್ ಭವನದಲ್ಲಿ ನವೆಂಬರ್ 30ರವರೆಗೆ ತಾತ್ಕಾಲಿಕವಾಗಿ ಆಶ್ರಯ ಪಡೆದುಕೊಂಡಿದ್ದಾರೆ. ವಿವಾದ ಇತ್ಯರ್ಥವಾಗುವ ತನಕ ಹೆಚ್ಚುವರಿಯಾಗಿ 30 ದಿನಗಳ ಕಾಲ ಆಶ್ರಯ ಒದಗಿಸಲು ಬಿಬಿಎಂಪಿಗೆ ನಿರ್ದೇಶನ ನೀಡಬೇಕು ಎಂದು ಕೋರಿದರು.

ವಾದ ಆಲಿಸಿದ ಪೀಠವು ಅರ್ಜಿ ಸಂಬಂಧ ರಾಜ್ಯ ಸರ್ಕಾರ, ರೈಲ್ವೆ ಇಲಾಖೆ, ಗ್ರೇಟರ್‌ ಬೆಂಗಳೂರು ಪ್ರಾಧಿಕಾರ, ಬಿಡಿಎ, ಕೊಳಗೇರಿ ಮಂಡಳಿ ಸೇರಿ ಎಲ್ಲಾ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿತು. ಅಲ್ಲದೇ ಸಂತ್ರಸ್ತ ಕುಟುಂಬಗಳಿಗೆ ನವೆಂಬರ್ 30ರ ನಂತರ ಹೆಚ್ಚುವರಿಯಾಗಿ 30 ದಿನಗಳ ತಾತ್ಕಾಲಿಕ ಆಶ್ರಯ ನೀಡುವ ಬಗ್ಗೆ ನಿಲುವು ತಿಳಿಸುವಂತೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಹಾಗೂ ಇತರರಿಗೆ ಸೂಚಿಸಿ ವಿಚಾರಣೆಯನ್ನು ನವೆಂಬರ್ 26ಕ್ಕೆ ಮುಂದೂಡಿತು.

Kannada Bar & Bench
kannada.barandbench.com