ಪ್ರಯಾಣಿಕರ ಕಳೆದು ಹೋದ ಬ್ಯಾಗ್‌ಗೆ ಪರಿಹಾರ ನೀಡುವುದು ರೈಲ್ವೆಯ ಹೊಣೆಗಾರಿಕೆ: ತೀರ್ಪು ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ತನ್ನ ಸೀಟಿನ ಕೆಳಗೆ ಸರಪಳಿ ಇರಲಿಲ್ಲ ಎಂದಿರುವ ಪ್ರತಿವಾದಿಯೂ ಸರಪಳಿ ಇಲ್ಲದೇ ಇರುವುದರಿಂದ ಬ್ಯಾಗ್‌ ಕಳವಾಗಿದೆ ಎಂದು ಆ ಬಳಿಕ ಹೇಳಿದ್ದರು.
Supreme Court
Supreme Court

ರೈಲು ಪ್ರಯಾಣದ ಸಂದರ್ಭದಲ್ಲಿ ವಿವಿಧ ವಸ್ತುಗಳನ್ನು ತುಂಬಿದ್ದ ಪ್ರಯಾಣಿಕರೊಬ್ಬರ ಬ್ಯಾಗ್‌ ಕಳೆದು ಹೋಗಿರುವ ಘಟನೆಯು ರೈಲ್ವೇಯ ಜವಾಬ್ದಾರಿಯನ್ನು ಎತ್ತಿಹಿಡಿಯುವ ಮಹತ್ವದ ತೀರ್ಪೊಂದಕ್ಕೆ ಕಾರಣವಾಗಿದೆ. ಪ್ರಯಾಣಿಕರೊಬ್ಬರ ಕಳುವಾದ ವಸ್ತುಗಳಿಗೆ ಸಂಬಂದಿಸಿದಂತೆ ಪರಿಹಾರ ನೀಡುವಂತೆ ಸೂಚಿಸಿದ್ದ ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಆದೇಶವನ್ನು ಪ್ರಶ್ನಿಸಿ ಭಾರತೀಯ ರೈಲ್ವೇಯು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ಆ ಮೂಲಕ ಗ್ರಾಹಕ ಆಯೋಗ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದೆ.

ದೆಹಲಿಯಿಂದ ಸಿಕಂದರಾಬಾದ್‌ಗೆ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರ ಬೆಲೆಬಾಳುವ ವಸ್ತುಗಳುಳ್ಳ ಬ್ಯಾಗ್ ಕಳುವಾಗಿತ್ತು. ತನ್ನ ಸೀಟಿನ ಕೆಳಗೆ ಸರಪಳಿ ಇರಲಿಲ್ಲ. ಸರಪಳಿ ಇಲ್ಲದೇ ಇದ್ದುದರಿಂದ ಸೀಟಿನ ಕೆಳಗೆ ಇಟ್ಟಿದ್ದ ಬ್ಯಾಗ್‌ ಕಳವಾಗಿದೆ ಎಂದು ಅವರು ದೂರಿದ್ದರು. ಅನಧಿಕೃತ ವ್ಯಕ್ತಿಗಳು ರೈಲ್ವೆ ಬೋಗಿಗೆ ನುಸುಳುವುದನ್ನು ತಡೆಯಲು ಮತ್ತು ಟಿಕೆಟ್‌ ಹೊಂದಿಲ್ಲದ ವ್ಯಕ್ತಿಗಳು ಬೋಗಿಗೆ ಪ್ರವೇಶಿಸುವುದನ್ನು ತಡೆಯಲು ರೈಲು ಭದ್ರತಾ ಪಡೆ ವಿಫಲವಾಗಿದ್ದರಿಂದ ಘಟನೆ ನಡೆದಿದೆ ಎಂದು ಆರೋಪಿಸಿ ಅವರು ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ (ಎನ್‌ಸಿಡಿಆರ್‌ಸಿ) ಮೆಟ್ಟಿಲೇರಿದ್ದರು.

ಸೀಟಿನ ಕೆಳಗೆ ಸರಪಳಿ ಇದ್ದಿದ್ದರೆ ಮತ್ತು ರೈಲ್ವೇ ಭದ್ರತಾ ಪಡೆಯ ಸಿಬ್ಬಂದಿ ಸರಿಯಾದ ರೀತಿಯಲ್ಲಿ ಪಹರೆ ಹಾಕಿದ್ದರೆ ಬ್ಯಾಗ್‌ ಕಳವಾಗುವ ಸಾಧ್ಯತೆ ಇರಲಿಲ್ಲ ಎಂದು ಬ್ಯಾಗ್‌ ಕಳೆದುಕೊಂಡ ಮಹಿಳಾ ಪ್ರಯಾಣಿಕರೊಬ್ಬರು ವಾದಿಸಿದ್ದರು. ಇತ್ತ ಮತ್ತೊಂದೆಡೆ ರೈಲ್ವೇಯು, ಬ್ಯಾಗಿನಲ್ಲಿರುವ ಬೆಲೆಬಾಳುವ ವಸ್ತುಗಳ ಬಗ್ಗೆ ಪ್ರಯಾಣಿಕರು ಮೊದಲೇ ತಿಳಿಸಬೇಕಿತ್ತು. ಪ್ರಯಾಣಿಕರು ಬೆಲೆಬಾಳುವ ಸೀರೆ ಮತ್ತು ಆಭರಣ ಕೊಂಡೊಯ್ಯುತ್ತಿರುವ ವಿಚಾರವನ್ನು ತಮಗೆ ತಿಳಿಸಿರಲಿಲ್ಲ. ಅಲ್ಲದೇ, ಬೆಲೆಬಾಳುವ ವಸ್ತುಗಳನ್ನು ತಮ್ಮ ಜೊತೆ ಕೊಂಡೊಯ್ಯುತ್ತಿದ್ದುದನ್ನು ಸಾಬೀತುಪಡಿಸಲು ಸಹ ಪ್ರಯಾಣಿಕರು ವಿಫಲವಾಗಿದ್ದಾರೆ ಎಂದು ವಾದಿಸಿತ್ತು.

ಪ್ರಕರಣವನ್ನು ಆಲಿಸಿದ್ದ ಗ್ರಾಹಕ ಆಯೋಗವು ಪ್ರಯಾಣಿಕ ಮಹಿಳೆಗೆ ಪರಿಹಾರವನ್ನು ನೀಡುವಂತೆ ಆದೇಶಿಸಿತ್ತು. ಆದರೆ ರೈಲ್ವೆಯು ಈ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಅಲ್ಲಿಯೂ ತಪರಾಕಿ ಹಾಕಿಸಿಕೊಂಡಿತು.

ಪ್ರಯಾಣಿಕರು ಗ್ರಾಹಕ ಭದ್ರತಾ ಕಾಯಿದೆಯ ಸೆಕ್ಷನ್‌ 2(ಡಿ) ಅಡಿ ಗ್ರಾಹಕರು ಎಂಬ ವ್ಯಾಖ್ಯಾನಕ್ಕೆ ಒಳಪಡುವುದಿಲ್ಲ. ಅಲ್ಲದೇ ಮಹಿಳಾ ಪ್ರಯಾಣಿಕರು ಕಾಯಿದೆಯ ಅನ್ವಯ ಕಳುವಾದ ವಸ್ತುಗಳ ಸಾಗಾಟಕ್ಕೆ ಸಂಬಂಧಿಸಿದಂತೆ ರೈಲ್ವೆ ಸೇವೆಯನ್ನು ಬಳಕೆ ಮಾಡಿರಲಿಲ್ಲ ಎಂದು ರೈಲ್ವೆ ವಾದಿಸಿತ್ತು.

Also Read
ರೇರಾ ಕಾಯಿದೆಯು ಗ್ರಾಹಕ ಸಂರಕ್ಷಣಾ ಕಾಯಿದೆಯಡಿ ಪರಿಹಾರ ನಿರ್ಬಂಧಿಸುವುದಿಲ್ಲ: ಸುಪ್ರೀಂ ಕೋರ್ಟ್

ವಸ್ತುಗಳನ್ನು ಸಾಗಿಸಲು ರೈಲ್ವೆ ಸೇವೆ ಬಳಸದೇ ಇದ್ದರೆ, ರೈಲ್ವೆ ಕಾಯಿದೆ-1989ರ ಸೆಕ್ಷನ್‌ 100ರ ಅಡಿ ತಾವು ಕೊಂಡೊಯ್ಯುತ್ತಿರುವ ವಸ್ತುಗಳನ್ನು ಸಾಗಿಸುವಾಗ ಆಗುವ ಹಾನಿ ಅಥವಾ ನಾಶಕ್ಕೆ ರೈಲ್ವೆಯನ್ನು ಜವಾಬ್ದಾರಿಯನ್ನಾಗಿಸುವಂತಿಲ್ಲ ಎಂದು ವಾದಿಸಿತ್ತು. ಇದನ್ನು ಒಪ್ಪದ ಜಿಲ್ಲಾ ಮತ್ತು ರಾಜ್ಯ ಒಕ್ಕೂಟವು ರುಬಿ ಚಂದ್ರ ವರ್ಸಸ್‌ ಯುನೈಟೆಡ್‌ ಇನ್ಯೂರೆನ್ಸ್‌ ತೀರ್ಪನ್ನು ಆಧರಿಸಿ ಆದೇಶ ಮಾಡಿತ್ತು.

ಗ್ರಾಹಕ ಆಯೋಗದ ಈ ಆದೇಶವನ್ನು ಪ್ರಶ್ನಿಸಿ ಭಾರತೀಯ ರೈಲ್ವೆಯು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ನೇತೃತ್ವದ ಪೀಠವು ಶುಕ್ರವಾರ ಮೇಲ್ಮನವಿಯನ್ನು ವಜಾಗೊಳಿಸಿದ್ದು, ಪ್ರಯಾಣಿಕರ ಕಳೆದು ಹೋಗಿರುವ ವಸ್ತುಗಳಿಗೆ ಪರಿಹಾರ ಪಾವತಿಸುವಂತೆ ನಿರ್ದೇಶಿಸಿದೆ.

ಪ್ರಯಾಣಿಕರಿಗೆ 1,33,000 ರೂಪಾಯಿ ಪರಿಹಾರ ಪಾವತಿಸುವ ಆದೇಶವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದ್ದು, “ಇದೇನು? ಕೇವಲ 1,33,000 ರೂಪಾಯಿ ತಾನೆ?” ಎನ್ನುವ ಮೂಲಕ ಮೇಲ್ಮನವಿ ಸಲ್ಲಿಸಿರುವ ರೈಲ್ವೇಯ ನಡೆಯ ಬಗ್ಗೆ ಆಕ್ಷೇಪಿಸಿತು. ರೈಲ್ವೇಯ ಅರ್ಜಿಯನ್ನು ವಜಾಗೊಳಿಸುವ ಮೂಲಕ ಗ್ರಾಹಕ ಆಯೋಗದ ಆದೇಶವನ್ನು ಪುರಸ್ಕರಿಸಿತು.

Related Stories

No stories found.
Kannada Bar & Bench
kannada.barandbench.com