ಅಶ್ಲೀಲ ಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಿಸಿದ್ದ ಎಫ್‌ಐಆರ್ ಕುರಿತಂತೆ ಮುಂಬೈ ಅಪರಾಧ ವಿಭಾಗದ ಪೊಲೀಸ್ 1,497 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದು, ಇದರಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರಾ ಸೇರಿದಂತೆ ನಾಲ್ವರ ಹೆಸರನ್ನು ಉಲ್ಲೇಖಿಸಿದ್ದಾರೆ.
ಸದರಿ ಪ್ರಕರಣದಲ್ಲಿ ಕುಂದ್ರಾ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್ ಬಿ ಭಾಜಿಪಲೆ ಅವರ ಪೀಠದ ಮುಂದೆ ಅಪರಾಧ ವಿಭಾಗದ ಪೊಲೀಸರು ಪೂರಕ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಪ್ರಾಥಮಿಕ ಆರೋಪ ಪಟ್ಟಿಯಲ್ಲಿ ನಟಿ ಮತ್ತು ನಿರ್ದೇಶಕಿ ಗೆಹನಾ ವಶಿಷ್ಠ್ ಸೇರಿದಂತೆ ಒಂಭತ್ತು ಮಂದಿಯನ್ನು ಆರೋಪಿಗಳು ಎಂದು ಗುರುತಿಸಲಾಗಿದೆ.
ಕುಂದ್ರಾ ಅವರಲ್ಲದೇ ಕುಂದ್ರಾ ಕಂಪೆನಿಯಲ್ಲಿ ಐಟಿ ವಿಭಾಗದಲ್ಲಿದ್ದ ರಯಾನ್ ಥೋರ್ಪ್ ಅವರನ್ನು ಆರೋಪಿ ಎಂದು ಗುರುತಿಸಲಾಗಿದ್ದು, ಅವರು ಕುಂದ್ರಾ ಜೊತೆ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆರೋಪ ಪಟ್ಟಿಯಲ್ಲಿ ಅರವಿಂದಕುಮಾರ್ ಶ್ರೀವಾಸ್ತವ ಅವರನ್ನು ನಾಪತ್ತೆಯಾಗಿರುವ ಆರೋಪಿ ಎಂದು ಹೆಸರಿಸಿದ್ದು, ಸಿಂಗಾಪುರದಲ್ಲಿರುವ ಅವರನ್ನು ಇನ್ನೂ ಬಂಧಿಸಲಾಗಿಲ್ಲ. ಆದರೆ, ಅವರ ವಿರುದ್ದ ಸಾಕಷ್ಟು ದಾಖಲೆಗಳಿವೆ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ. ಪ್ರದೀಪ್ ಬಕ್ಷಿ ಅವರು ರಾಜ್ ಕುಂದ್ರಾ ಅವರ ಭಾವನಾಗಿದ್ದು, ಲಂಡನ್‌ನಲ್ಲಿ ನೆಲೆಸಿದ್ದಾರೆ. ಆರೋಪಪಟ್ಟಿಯಲ್ಲಿ ಅವರನ್ನೂ ನಾಪತ್ತೆಯಾಗಿರುವ ಆರೋಪಿ ಎಂದು ಹೆಸರಿಸಲಾಗಿದೆ.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 354ಸಿ (ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವವರ ವೀಕ್ಷಣೆ/ಬೆತ್ತಲು ದೃಶ್ಯಗಳ ವೀಕ್ಷಣೆ), 292, 293 (ಅಶ್ಲೀಲ ವಸ್ತುವಿಷಯದ ಮಾರಾಟ), 420 (ವಂಚನೆ), 201 (ಸಾಕ್ಷ್ಯ ನಾಪತ್ತೆಗೆ ನೆರವು); ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 67, 67ಎ (ಲೈಂಗಿಕ ಉದ್ರೇಕಕಾರಿ ವಸ್ತುವಿಷಯದ ವರ್ಗಾವಣೆ), ಮಹಿಳೆಯರನ್ನು ಅಸಭ್ಯವಾಗಿ ಬಿಂಬಿಸುವುದರ ನಿಯಂತ್ರಣ ಕಾಯಿದೆ ಸೆಕ್ಷನ್‌ಗಳಾದ 3, 4, 6 ಮತ್ತು 7 ರ ಅಡಿ ಎಫ್‌ಐಆರ್ ದಾಖಲಿಸಿರುವುದರ ಸಂಬಂಧ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ.
ಕುಂದ್ರಾ ಪತ್ನಿ ಶಿಲ್ಪಾ ಶೆಟ್ಟಿ ಮತ್ತು ನಟಿ ಶೆರ್ಲಿನ್ ಚೋಪ್ರಾ ಸೇರಿದಂತೆ 58 ಸಾಕ್ಷಿಗಳನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ವಿಆನ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪೆನಿಯ ಬಗ್ಗೆ ನನಗೆ ತಿಳಿದಿದೆ ಎಂದು ಶಿಲ್ಪಾ ಶೆಟ್ಟಿ ಪೊಲೀಸರ ಮುಂದೆ ಹೇಳಿಕೆ ನೀಡಿರುವುದನ್ನೂ ದಾಖಲಿಸಲಾಗಿದೆ. ಈ ಕಂಪೆನಿಯನ್ನು 2015ರಲ್ಲಿ ಕುಂದ್ರಾ ಆರಂಭಿಸಿದ್ದರು. ಈ ಕಂಪೆನಿಯಲ್ಲಿ ತಾನು ಶೇ. 24.5ರಷ್ಟು ಷೇರು ಹೊಂದಿದ್ದು, ಕಂಪೆನಿ ಯಾವ ಕೆಲಸ ಮಾಡುತ್ತಿದೆ ಎಂದು ತಿಳಿದಿರಲಿಲ್ಲ. ಹಾಟ್‌ಸ್ಪಾಟ್ ಮತ್ತು ಬಾಲಿ ಫೇಮ್ ಎಂಬ ಮೊಬೈಲ್ ಅಪ್ಲಿಕೇಶನ್‌ಗಳು ಸೇರಿದಂತೆ ತಮ್ಮದೇ ಕೆಲಸದಲ್ಲಿ ನಿರತವಾಗಿದ್ದರಿಂದ ಆ ಕಂಪೆನಿಯ ಬಗ್ಗೆ ತಿಳಿದಿರಲಿಲ್ಲ ಎಂದು ಶಿಲ್ಪಾ ಶೆಟ್ಟಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಮುಂಬೈ ಪೊಲೀಸರು ಕುಂದ್ರಾ ಅವರನ್ನು ಬಂಧಿಸಿ ಎಸ್ಪ್ಲೆನೇಡ್‌ನಲ್ಲಿರುವ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದಾಗ ಅವರು ಕುಂದ್ರಾ ಅವರನ್ನು ಜುಲೈ 23ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಿದ್ದರು. ಬಳಿಕ ಕಸ್ಟಡಿ ಅವಧಿಯನ್ನು ಜುಲೈ 27ರ ವರಗೆ ವಿಸ್ತರಿಸಲಾಗಿತ್ತು. ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕುಂದ್ರಾ ಜಾಮೀನು ಮನವಿಯನ್ನು ಜುಲೈ 28ರಂದು ವಜಾ ಮಾಡಿತ್ತು.
ಕುಂದ್ರಾ ಅವರು ತಮ್ಮ ಕಸ್ಟಡಿಯನ್ನು ಮತ್ತು ನ್ಯಾಯಾಲಯದ ಆದೇಶಗಳನ್ನು ಪ್ರಶ್ನಿಸಿದ್ದ ಮನವಿಗಳನ್ನು ಆಗಸ್ಟ್ 7ರಂದು ಬಾಂಬೆ ಹೈಕೋರ್ಟ್ ವಜಾ ಮಾಡಿತ್ತು. ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ಮನವಿ ವಜಾ ಮಾಡಿದ್ದ ಹಿನ್ನೆಲೆಯಲ್ಲಿ ಕುಂದ್ರಾ ಮುಂಬೈ ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನಿಗೆ ಮನವಿ ಸಲ್ಲಿಸಿದ್ದರು. ಈ ಸಂಬಂಧ ಸೆಷನ್ಸ್ ನ್ಯಾಯಾಲಯ ನೋಟಿಸ್ ಜಾರಿ ಮಾಡಿದ್ದು, ಪೊಲೀಸರು ಜಾಮೀನಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮನವಿಯು ವಿಚಾರಣೆಗೆ ಬಾಕಿ ಇದೆ.