ಬಿಜೆಪಿಯ ನೂಪುರ್ ಶರ್ಮಾ ಶಿರಚ್ಛೇದದ ಘೋಷಣೆ ಕೂಗಿದ ಆರೋಪ: ಧರ್ಮಗುರು ಸೇರಿ ಐವರ ಖುಲಾಸೆಗೊಳಿಸಿದ ರಾಜಸ್ಥಾನ ನ್ಯಾಯಾಲಯ

ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ರಿತು ಮೀನಾ ಅವರು ಎಲ್ಲಾ ಆರು ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದಾರೆ.
Nupur sharma
Nupur sharmaFacebook
Published on

ಎರಡು ವರ್ಷಗಳ ಹಿಂದೆ ಅಂದರೆ 2022ರ ಜೂನ್‌ನಲ್ಲಿ  ಬಿಜೆಪಿಯ ಮಾಜಿ ವಕ್ತಾರೆ ನೂಪುರ್‌ ಶರ್ಮಾ ಶಿರಚ್ಛೇದ ನಡೆಸುವ ಘೋಷಣೆ ಕೂಗಿದ್ದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾದ ಪ್ರಕರಣದಲ್ಲಿ ಅಜ್ಮೇರ್‌ ದರ್ಗಾದ ಧರ್ಮಗುರು ಸೈಯದ್ ಗೋಹರ್ ಹುಸೇನ್ ಚಿಸ್ತಿ ಮತ್ತು ಐವರನ್ನು ರಾಜಸ್ಥಾನ ನ್ಯಾಯಾಲಯ ಮಂಗಳವಾರ ದೋಷಮುಕ್ತಗೊಳಿಸಿದೆ.

ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ರಿತು ಮೀನಾ ಅವರು ಎಲ್ಲಾ ಆರು ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿ ವಾಹಿನಿಯ ಚರ್ಚೆಯಲ್ಲಿ ಪ್ರವಾದಿ ಮುಹಮ್ಮದ್‌ ಅವರ ವಿರುದ್ಧ ನೂಪುರ್ ನೀಡಿದ್ದ ವಿವಾದಾತ್ಮಕ ಹೇಳಿಕೆ ದೇಶದ ಹಲವೆಡೆ ಬಿಗುವಿನ ವಾತಾವರಣಕ್ಕೆ ಕಾರಣವಾಗಿದ್ದು ಪ್ರತಿಭಟನೆಗಳು ನಡೆದಿದ್ದವು. ನೂಪುರ್‌ ವಿರುದ್ಧ ಅಜ್ಮೇರ್‌ನಲ್ಲಿ ನಡೆದ ಸಾರ್ವಜನಿಕ ಪ್ರತಿಭಟನೆ ವೇಳೆ ಆಕೆಯ ಶಿರಚ್ಛೇದ ಮಾಡಬೇಕು ಎನ್ನುವ ಅರ್ಥದ ಘೋಷಣೆ ಕೂಗಿದ ಆರೋಪ ಈ ಆರು ಮಂದಿ ಮೇಲಿತ್ತು. ಈ ಘೋಷಣೆಗಳ ವಿಡಿಯೋ ದೇಶಾದ್ಯಂತ ವ್ಯಾಪಕವಾಗಿ ಪ್ರಸರಣಗೊಂಡಿತ್ತು.

ಘಟನೆ ಬಳಿಕ ಅಜ್ಮೇರ್ ತೊರೆದು ಹೈದರಾಬಾದ್‌ನಲ್ಲಿ ಆಶ್ರಯ ಪಡೆದಿದ್ದ ಚಿಸ್ತಿಯನ್ನು ಜುಲೈ 15 ರಂದು ಬಂಧಿಸಲಾಗಿತ್ತು. ಐಪಿಸಿ ಸೆಕ್ಷನ್‌ ಸೆಕ್ಷನ್ 115 (ಮರಣದಂಡನೆ ಇಲ್ಲವೇ ಜೀವಾವಧಿ ಶಿಕ್ಷೆಗೆ ಗುರಿಯಾಗಬಹುದಾದಂತಹ ಅಪರಾಧಕ್ಕೆ ಕುಮ್ಮಕ್ಕು) 117 (ಸಾರ್ವಜನಿಕರಿಂದ ಅಥವಾ ಹತ್ತಕ್ಕಿಂತ ಹೆಚ್ಚು ವ್ಯಕ್ತಿಗಳಿಂದ ಅಪರಾಧಕ್ಕೆ ಯೋಜನೆ), 143 (ಕಾನೂನುಬಾಹಿರ ಸಭೆಯ ಸದಸ್ಯರಾಗಿದ್ದಕ್ಕೆ ಶಿಕ್ಷೆ), 149 (ಸಾಮಾನ್ಯ ಉದ್ದೇಶದಿಂದ ಏರ್ಪಡಿಸಿದ್ದ ಸಭೆಯಲ್ಲಿ ಸೇರಿದ್ದವರೆಲ್ಲರೂ ತಪ್ಪಿತಸ್ಥರು), 188 (ಸಾರ್ವಜನಿಕ ಹುದ್ದೆಯಲ್ಲಿರುವವರಿಗೆ ತೋರಿದ ಅವಿಧೇಯತೆ), 302 (ಕೊಲೆ), 504 (ಶಾಂತಿ ಭಂಗ) ಹಾಗೂ 506ರ (ಕ್ರಿಮಿನಲ್ ಬೆದರಿಕೆ) ಅಡಿ ಪ್ರಕರಣ ದಾಖಲಿಸಲಾಗಿತ್ತು.

ಘೋಷಣೆಗಳ ವಿಡಿಯೋ ವ್ಯಾಪಕವಾಗಿ ಪ್ರಸಾರವಾದ ಪರಿಣಾಮ ಅಮರಾವತಿ ಮತ್ತು ಉದಯಪುರದಲ್ಲಿ ಶಿರಚ್ಛೇದನದ ಘಟನೆಗಳು ನಡೆದಿದ್ದರಿಂದ ಐಪಿಸಿ ಸೆಕ್ಷನ್‌ 155 (ಅಸಂಜ್ಞೇಯ ಅಪರಾಧ ಪ್ರಕರಣಗಳ ಮಾಹಿತಿ ಮತ್ತು ಅಂತಹ ಪ್ರಕರಣಗಳ ತನಿಖೆ) ಹಾಗೂ 302 (ಕೊಲೆ) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಸರ್ಕಾರ ವಾದಿಸಿತ್ತು.

Kannada Bar & Bench
kannada.barandbench.com