ನಕಲಿ ಅಂಕಪಟ್ಟಿ: ಬಿಜೆಪಿ ಶಾಸಕನ ವಿರುದ್ಧದ ಪ್ರಕರಣ ಹಿಂಪಡೆಯಲು ರಾಜಸ್ಥಾನ ಹೈಕೋರ್ಟ್ ನಕಾರ

ಸಾರ್ವಜನಿಕ ಹುದ್ದೆ ಮತ್ತು ಸಾರ್ವಜನಿಕ ಬೊಕ್ಕಸ ದುರುಪಯೋಗ ಒಳಗೊಂಡಿರುವ ಇಂತಹ ಪ್ರಕರಣಗಳಲ್ಲಿ ವ್ಯಕ್ತಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಎಂಬ ಕಾರಣಕ್ಕೆ ಮೊಕದ್ದಮೆ ಹಿಂಪಡೆಯುವುದು ಸಮರ್ಥನೀಯವಾಗದು ಎಂದು ನ್ಯಾಯಾಲಯ ತೀರ್ಪು ನೀಡಿದೆ.
MLA Harlal Saharan, Rajasthan High Court
MLA Harlal Saharan, Rajasthan High Court
Published on

ಬಿಜೆಪಿ ಶಾಸಕ ಹರ್ಲಾಲ್ ಸಹರಾನ್ ಅಲಿಯಾಸ್ ಹರ್ಲಾಲ್ ಸಿಂಗ್‌ ಅವರು 10ನೇ ತರಗತಿ ನಕಲಿ ಅಂಕಪಟ್ಟಿ ನೀಡಿದ್ದಾರೆ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆ ಹಿಂಪಡೆಯಲು ಅನುಮತಿ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ [ರಾಜಸ್ಥಾನ ಸರ್ಕಾರ ಮತ್ತು ಚಿಮ್ನಾ ರಾಮ್ ನಡುವಣ ಪ್ರಕರಣ].

ರಾಜ್ಯ ಸರ್ಕಾರ ಪ್ರಕರಣ ಹಿಂಪಡೆದಿದ್ದಕ್ಕೆ ತೃಪ್ತಿಕರವಾದ ಪಬ್ಲಿಕ್ ಪ್ರಾಸಿಕ್ಯೂಟರ್ ವರದಿಯನ್ನು ಸಲ್ಲಿಸಿಲ್ಲ ಅಥವಾ ನಿರ್ಧಾರಕ್ಕೆ ಯಾವುದೇ ಕಾರಣಗಳನ್ನು ಒದಗಿಸಿಲ್ಲ ಎಂದು ನ್ಯಾಯಮೂರ್ತಿಗಳಾದ ಇಂದರ್‌ಜೀತ್ ಸಿಂಗ್ ಮತ್ತು ಭುವನ್ ಗೋಯಲ್ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

Also Read
ಬಿಜೆಪಿ ವಿರುದ್ಧ ಶೇ.40 ಕಮಿಷನ್ ಆರೋಪ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

ಸಾರ್ವಜನಿಕ ಕಹುದ್ದೆ ಮತ್ತು ಸಾರ್ವಜನಿಕ ಬೊಕ್ಕಸ ದುರುಪಯೋಗ  ಒಳಗೊಂಡಿರುವ ಇಂತಹ ಪ್ರಕರಣಗಳಲ್ಲಿ ವ್ಯಕ್ತಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಎಂಬ ಕಾರಣಕ್ಕೆ ಮೊಕದ್ದಮೆ ಹಿಂಪಡೆಯುವುದು ಸಮರ್ಥನೀಯವಾಗದು ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಆರೋಪಿ ಹತ್ತನೇ ತರಗತಿಯ ಅಂಕಪಟ್ಟಿಯನ್ನು ನಕಲಿಯಾಗಿ ಸೃಷ್ಟಿಸಿದ್ದು ಅದರ ಆಧಾರದ ಮೇಲೆ, ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ನಾಮಪತ್ರ ಸಲ್ಲಿಸಿ ಚುನಾವಣೆಯಲ್ಲಿ ಆಯ್ಕೆಯಾದರು. ಆರೋಪಿಗೆ ಉತ್ತಮ ಸಾರ್ವಜನಿಕ ವರ್ಚಸ್ಸು ಇದೆ ಅಥವಾ ಅವರು ಶಾಸಕಾಂಗ ಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂಬ ಆಧಾರದ ಮೇಲೆ ಸಾರ್ವಜನಿಕ ಹುದ್ದೆ ಮತ್ತು ಹಣ ದುರುಪಯೋಗಕ್ಕೆ ಸಂಬಂಧಿಸಿದಂತಹ ಇಂತಹ ಘೋರ ಅಪರಾಧ ಕೃತ್ಯಗಳನ್ನು ಹಿಂಪಡೆಯಬೇಕೆಂಬುದು ಸಮರ್ಥನೀಯವಲ್ಲ ಎಂಬುದಾಗಿ ನ್ಯಾಯಾಲಯ ವಿವರಿಸಿದೆ. 

Also Read
ಬಿಜೆಪಿ ನಾಯಕ ಬಿ ಎಲ್‌ ಸಂತೋಷ್‌ ಅವಹೇಳನ ಪ್ರಕರಣ: ಮಹೇಶ್‌ ತಿಮರೋಡಿ 14 ದಿನ ನ್ಯಾಯಾಂಗ ಬಂಧನಕ್ಕೆ

ಇದಲ್ಲದೆ ವಿಚಾರಣಾ ನ್ಯಾಯಾಲಯ ಸಹರಾನ್‌ ಅವರ ವಿರುದ್ಧದ ಅಪರಾಧಗಳನ್ನು ಪರಿಗಣಿಸಿದ್ದು ಅವರ ವಿರುದ್ಧ ಆರೋಪ ನಿಗದಿಪಡಿಸಿದೆ. ಸಂಜ್ಞೇಯ ಅಪರಾಧ ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿಯನ್ನು ಹೈಕೋರ್ಟ್‌ ಈಗಾಗಲೇ  2023ರಲ್ಲಿ ವಜಾಗೊಳಿಸಿದೆ ಎಂಬುದನ್ನು ಪೀಠ ಗಣನೆಗೆ ತೆಗೆದುಕೊಂಡಿತು.

ಸಹರಾನ್ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದ್ದರೂ,  ಸಾಕಷ್ಟು ದಾಖಲೆಗಳು ಲಭ್ಯವಿಲ್ಲ. ಅವರ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ಅಡ್ವೊಕೇಟ್ ಜನರಲ್ ರಾಜೇಂದ್ರ ಪ್ರಸಾದ್ ಈ ಹಿಂದೆ ವಾದಿಸಿದ್ದರು.

ಆದರೆ ಮೊಕದ್ದಮೆ ಹಿಂಪಡೆಯಲು ಯಾಂತ್ರಿಕವಾಗಿ ಅನುಮತಿ ನೀಡಲಾಗದು ಎಂದ ನ್ಯಾಯಾಲಯ ಅರ್ಜಿ ವಜಾಗೊಳಿಸಿತು.

Kannada Bar & Bench
kannada.barandbench.com