ಬಾಲಿವುಡ್ ನಟ ಮನೋಜ್ ಬಾಜಪೇಯಿ ಅಭಿನಯದ ʼಸಿರ್ಫ್ ಏಕ್ ಬಂದಾ ಕಾಫಿ ಹೈʼ ಚಿತ್ರವನ್ನು ಥಿಯೇಟರ್‌ಗಳಲ್ಲಿ ಹಾಗೂ ಒಟಿಟಿ ವೇದಿಕೆಗಳಲ್ಲಿ ಬಿಡುಗಡೆ ಮಾಡದಂತೆ ಕೋರಿ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಸಲ್ಲಿಸಿದ್ದ ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ [ಓಂ ಪ್ರಕಾಶ್ ಲಖ್ಯಾನಿ ಟ್ರಸ್ಟಿ ಮತ್ತಿತರರು ಹಾಗೂ ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಜೀ 5 ಸ್ಟುಡಿಯೋ ನಿರ್ಮಿಸಿ ನಿರ್ದೇಶಿಸಿರುವ ಚಿತ್ರಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿದ್ದ ಪ್ರಸ್ತುತ ಜೈಲಿನಲ್ಲಿರುವ ಅಸಾರಾಂ ಹಾಗೂ ಆತನ ಸಹಚರ ಓಂ ಪ್ರಕಾಶ್ ಲಖ್ಯಾನಿ ಚಿತ್ರ ನಿರ್ಮಾಣಕ್ಕೆ ತಮ್ಮ ಅನುಮತಿ ಪಡೆದಿಲ್ಲ ಹಾಗೂ ತಮ್ಮನ್ನು ನಕಾರಾತ್ಮಕವಾಗಿ ಚಿತ್ರಿಸಲಾಗಿದೆ ಎಂದಿದ್ದರು.
ಆದರೆ ಅರ್ಜಿ ವಜಾಗೊಳಿಸಿದ ನ್ಯಾ. ಪುಷ್ಪೇಂದ್ರ ಸಿಂಗ್ ಭಾಟಿ “ಟ್ರೇಲರ್‌ನಲ್ಲಿರುವ ಯಾವುದೂ ಅಸಾರಾಂ ಬಾಪು ಅವರ ಬದುಕಿಗೆ ಸಂಬಂಧಿಸಿಲ್ಲ. ಅಲ್ಲದೆ ತಡೆ ನೀಡುವುದರಿಂದ ಚಿತ್ರದ ನಿರ್ಮಾಪಕರಿಗೆ ಭಾರಿ ಆರ್ಥಿಕ ನಷ್ಟ ಉಂಟಾಗುತ್ತದೆ” ಎಂದು ತಿಳಿಸಿದರು.
ಅರ್ಜಿದಾರರು ತಮ್ಮ ಮೊಕದ್ದಮೆಯನ್ನು ಸಕಾಲದಲ್ಲಿ ಸಲ್ಲಿಸಿಲ್ಲ. ಚಿತ್ರ ಈಗಾಗಲೇ ಬಿಡುಗಡೆಯಾಗಿರುವುದರಿಂದ ಈಗ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಕೂಡ ಪೀಠ ಹೇಳಿದೆ.
ಪ್ರತಿವಾದಿಗಳ ಕಡೆಯಿಂದ ಅರ್ಜಿದಾರರ ಖ್ಯಾತಿ ಮತ್ತು ಘನತೆಗೆ ಯಾವುದೇ ಧಕ್ಕೆಯಿದ್ದರೆ, ಅರ್ಜಿದಾರರು ಮಾನನಷ್ಟ ಮೊಕದ್ದಮೆ ಮೂಲಕ ಪರಿಹಾರವನ್ನು ಪಡೆಯಬಹುದು; ಆದರೂ ಈ ನ್ಯಾಯಾಲಯದ ಪರಿಶೀಲನೆ ಪ್ರಕಾರ ಯಾವುದೇ ಸರಿಪಡಿಸಲಾಗದ ನಷ್ಟ ಉಂಟಾಗಿದೆ ಎನ್ನಲಾಗದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.