Trees
Trees

ರಾಜ್ಯದ ಯೋಜನೆಯೊಂದಕ್ಕೆ 1.19 ಲಕ್ಷ ಮರಗಳ ಹನನ: ಸ್ವಯಂಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಂಡ ರಾಜಸ್ಥಾನ ಹೈಕೋರ್ಟ್

"ಹಸಿರು ಮತ್ತು ಆರೋಗ್ಯಕರ ಪರಿಸರದ ಹಕ್ಕು ಜೀವಿಸುವ ಹಕ್ಕಿನ ಒಂದುಭಾಗ ಎಂದು ಪರಿಗಣಿಸಲಾಗುತ್ತದೆ" ಎಂದಿರುವ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳ ಪ್ರತಿಕ್ರಿಯೆ ಹೇಳಿದೆ.
Published on

ರಾಜಸ್ಥಾನದ ಬರಾನ್‌ನಲ್ಲಿ ವಿದ್ಯುತ್‌ ಉತ್ಪಾದನೆಗಾಗಿ ಬಳಸಿದ ನೀರನ್ನು ಮರಳಿ ಪಂಪ್‌ಗಳ ಮೂಲಕ ಹಿಂದೆ ಕೊಂಡೊಯ್ದು ಮರುಬಳಕೆ ಮಾಡುವ ಪಂಪ್ಡ್ ಸ್ಟೋರೇಜ್ ಯೋಜನೆಗಾಗಿ  ರಾಜ್ಯದಲ್ಲಿ 1.19 ಲಕ್ಷ ಮರಗಳನ್ನು ಕಡಿಯಲು ಪ್ರಸ್ತಾಪಿಸಲಾಗಿದೆ ಎಂಬ ಪತ್ರಿಕಾ ವರದಿಗಳನ್ನು ಆಧರಿಸಿ ರಾಜಸ್ಥಾನ ಹೈಕೋರ್ಟ್ ಈಚೆಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ [ಕಡಿಯಲು ಉದ್ದೇಶಿಸಿರುವ  1.19 ಲಕ್ಷ ಮರಗಳಿಗೆ ಸಂಬಂಧಿಸಿದ ಪ್ರಕರಣ].

ಈ ಬಗ್ಗೆ ನ್ಯಾಯಾಲಯ ತುಂಬಾ ಚಿಂತಿತವಾಗಿದೆ ಎಂದಿರುವ ನ್ಯಾಯಮೂರ್ತಿಗಳಾದ ಮುನ್ನೂರಿ ಲಕ್ಷ್ಮಣ್ ಮತ್ತು ನ್ಯಾಯಮೂರ್ತಿ ಪುಷ್ಪೇಂದ್ರ ಸಿಂಗ್ ಭಾಟಿ ಅವರಿದ್ದ ಪೀಠ ಮರಗಳನ್ನು ಕಡಿಯದಂತೆ ಉಳಿಸಲು ಏನಾದರೂ ಮಾರ್ಗವಿದೆಯೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. 

ಹಸಿರು ಮತ್ತು ಆರೋಗ್ಯಕರ ಪರಿಸರದ ಹಕ್ಕು ಜೀವಿಸುವ ಹಕ್ಕಿನ ಒಂದು ಭಾಗ
ರಾಜಸ್ಥಾನ ಹೈಕೋರ್ಟ್

ಹಸಿರು ಮತ್ತು ಆರೋಗ್ಯಕರ ಪರಿಸರದ ಹಕ್ಕು  ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಜೀವಿಸುವ ಹಕ್ಕಿನ ಒಂದು ಭಾಗ ಎಂದು ಪರಿಗಣಿಸಲಾಗುತ್ತದೆ. ಪರಿಸರವನ್ನು ಸಂಭಾವ್ಯ ಅವನತಿಯಿಂದ ರಕ್ಷಿಸುವುದು ಮಾತ್ರವಲ್ಲದೆ ಅದರ ಸಂರಕ್ಷಣೆ ಮತ್ತು ಪುನರುಜ್ಜೀವನದ ಹೊಣೆಯನ್ನೂ ಅದು ಸರ್ಕಾರ ಮತ್ತು ಅದರ ಅಂಗಗಳಿಗೆ ವಹಿಸುತ್ತದೆ. ಆ ಮೂಲಕ ಸಂವಿಧಾನ ತನ್ನ ನಾಗರಿಕರಿಗೆ ನೈಜ ಅರ್ಥ ಪೂರ್ಣ ಜೀವನ ದೊರೆಯುವಂತೆ ನೋಡಿಕೊಳ್ಳುತ್ತದೆ ಎಂದು ನ್ಯಾಯಾಲಯ ನುಡಿದಿದೆ.

ಇಷ್ಟು ಮರಗಳನ್ನು ಕಡಿಯುವುದನ್ನು ತಪ್ಪಿಸಲು ಯಾವುದೇ ಪರ್ಯಾಯ ಅವಕಾಶ ಇದೆಯೇ ಮತ್ತು ಮರಗಳನ್ನು ಕಡಿದರೆ ಪರಿಸರ ಸಮತೋಲನವನ್ನು ತಪ್ಪಿಸಲು ಅದೇ ಪ್ರದೇಶದಲ್ಲಿ ಅರಣ್ಯೀಕರಣ ಸಾಧ್ಯವೇ ಎಂಬ ಬಗ್ಗೆ ಉತ್ತರಿಸುವಂತೆ  ಕೇಂದ್ರ ಪರಿಸರ ಸಚಿವಾಲಯ ಮತ್ತು ರಾಜಸ್ಥಾನದ ಪರಿಸರ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ.

Also Read
ಪರಿಸರ ಹೋರಾಟಗಾರ ಸೋನಮ್ ವಾಂಗ್‌ಚುಕ್‌ ಬಂಧನ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ಮುಂದಿನ 15 ದಿನಗಳಲ್ಲಿ ಯಾವುದೇ ಮರ ಕಡಿಯುವುದಿಲ್ಲ ಎಂದು ಸರ್ಕಾರಿ ವಕೀಲರು ಭರವಸೆ ನೀಡಿರುವುದರಿಂದ ಉದ್ದೇಶಿತ ಮರ ಕಡಿಯುವುದನ್ನು ನಿಲ್ಲಿಸಲು ಯಾವುದೇ ಮಧ್ಯಂತರ ಆದೇಶ ನೀಡುವ ಅಗತ್ಯವಿಲ್ಲ ಎಂದು ಅದು ತಿಳಿಸಿತು. ತನ್ನ ಮುಂದಿನ ಆದೇಶದವರೆಗೂ ಮರ ಕಡಿಯದಂತೆ ಅದು ತಾಕೀತು ಮಾಡಿದೆ.

ಕುನೋ ರಾಷ್ಟ್ರೀಯ ಉದ್ಯಾನವನದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಅಪಾರ ಪ್ರಮಾಣದ ಅರಣ್ಯ ಭೂಮಿಯ ಮೇಲೆ ಪಂಪ್ಡ್‌ ಸ್ಟೋರೇಜ್‌ ಯೋಜನೆಯು ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ರಾಜಸ್ಥಾನ್‌ ಪತ್ರಿಕಾ ಮತ್ತು ದೈನಿಕ್ ಭಾಸ್ಕರ್ ಪತ್ರಿಕೆಗಳು ವರದಿ ಪ್ರಕಟಿಸಿದ್ದವು.

Kannada Bar & Bench
kannada.barandbench.com