ತಮಗೆ ವಿಧಿಸಿದ ಶಿಕ್ಷೆ ಮನ್ನಾ ಮಾಡಲು ಕೋರಿ ರಾಜೀವ್ ಗಾಂಧಿ ಹತ್ಯೆಯ ಅಪರಾಧಿ ಎ ಜಿ ಪೆರಾರಿವಾಲನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮತ್ತೆ ಮುಂದೂಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ಬೇರೊಂದು ಪ್ರಕರಣದ ವಿಚಾರಣೆಯಲ್ಲಿ ಭಾಗಿಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಪ್ರಕರಣವನ್ನು ಪಟ್ಟಿ ಮಾಡುವಂತೆ ಕೇಂದ್ರದ ಪರ ವಾದ ಮಂಡಿಸುತ್ತಿರುವ ಎಸ್‌ಜಿ ತುಷಾರ್ ಮೆಹ್ತಾ ವಿನಂತಿಸಿದರು. ಆಗ ಈ ವಿಚಾರ ಮೊದಲೇ ತಿಳಿಸಬೇಕಿತ್ತು ಎಂದು ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರರಾವ್, ಬಿ ಆರ್ ಗವಾಯಿ ಹಾಗೂ ಬಿ ವಿ ನಾಗರತ್ನ ಅವರಿದ್ದ ಪೀಠ ಹೇಳಿತು.
ಪೆರಾರಿವಾಲನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣ ಅವರು, ಅಪರಾಧಿ 30 ವರ್ಷಗಳಿಂದ ಬಂಧನದಲ್ಲಿರುವುದರಿಂದ ಈ ವಿಚಾರದಲ್ಲಿ ಸ್ವಲ್ಪ ಪರಿಹಾರ ನೀಡಬೇಕು ಎಂದು ಕೋರಿದರು. ಇದೇ ವೇಳೆ ನ್ಯಾಯಾಲಯ ಪ್ರಕರಣವನ್ನು ಜನವರಿಯಲ್ಲಿ ಕೈಗೆತ್ತಿಕೊಳ್ಳಲಾಗುವುದು. ಆದರೆ ಮತ್ತೆ ಪ್ರಕರಣವನ್ನು ಮುಂದೂಡದಿರಿ ಎಂದು ಎಸ್‌ಜಿ ಅವರಿಗೆ ಹೇಳಿತು. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಗೆ ಬಾಂಬ್ ತಯಾರಿಗೆ ಸಹಾಯ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಪೆರಾರಿವಾಲನ್‌ಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಕ್ಷಮಾದಾನದ ಅರ್ಜಿಯನ್ನು ನಿರ್ಧರಿಸುವಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ 2014ರಲ್ಲಿ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತ್ತು.
ಕ್ಷಮೆ ನೀಡಬಹುದಾದ ಸೂಕ್ತ ಅಧಿಕಾರ ಯಾರಿಗಿದೆ ಎಂಬ ಪ್ರಶ್ನೆ ಉದ್ಭವಿಸಿ ವಿಚಾರಣೆ ಸುದೀರ್ಘ ಕಾಲದಿಂದ ನಡೆಯುತ್ತಿದೆ. ಕ್ಷಮಾದಾನಕ್ಕಾಗಿ 2015ರಲ್ಲಿ ಪೆರಾರಿವಾಲನ್ ರಾಜ್ಯಪಾಲರಿಗೆ ಮನವಿ ಮಾಡಿದ್ದರು. 2018 ರಲ್ಲಿ, ಸುಪ್ರೀಂಕೋರ್ಟ್ ಈ ಕುರಿತು ನಿರ್ಣಯ ತೆಗೆದುಕೊಳ್ಳುವಂತೆ ರಾಜ್ಯಪಾಲರಿಗೆ ಸೂಚಿಸಿತ್ತು. ಶಿಕ್ಷೆ ಹಿಂಪಡೆದು ಪೆರಾರಿವಾಲನ್ ಅವರನ್ನು ಬಿಡುಗಡೆ ಮಾಡಬೇಕೆಂದು ತಮಿಳುನಾಡು ಸಚಿವ ಸಂಪುಟ ರಾಜ್ಯಪಾಲರನ್ನು ಕೋರಿತ್ತು. ಆದರೆ ರಾಜ್ಯಪಾಲರು ಆ ಕುರಿತು ಇನ್ನೂ ತೀರ್ಮಾನ ಕೈಗೊಂಡಿಲ್ಲ.
ಎರಡು ದಶಕಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಪೆರಾರಿವಾಲನ್ ಅವರ ಕ್ಷಮಾದಾನದ ಬಗ್ಗೆ ರಾಜ್ಯಪಾಲರು ನಿರ್ಣಯ ಕೈಗೊಳ್ಳುವುದನ್ನು ಪ್ರಕರಣದ ತನಿಖೆಯು ತಡೆಯಬಾರದು ಎಂದು ಸುಪ್ರೀಂಕೋರ್ಟ್ 2020ರಲ್ಲಿ ಹೇಳಿತು. ಕ್ಷಮಾದಾನದ ಬಗ್ಗೆ ನಿರ್ಣಯ ಕೈಗೊಳ್ಳುವ ಸೂಕ್ತ ಅಧಿಕಾರ ರಾಜ್ಯಪಾಲರಿಗೆ ಇದೆ ಎಂದು ಸಿಬಿಐ ಕೂಡ ತಿಳಿಸಿತು. ಆದರೆ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸೂಕ್ತ ಅಧಿಕಾರ ರಾಷ್ಟ್ರಪತಿಗಳಿಗೆ ಇದೆ ಎಂದು ರಾಜ್ಯಪಾಲರು ಹೇಳಿದ್ದರು.