ರಾಜ್‌ಕೋಟ್‌ ಗೇಮ್ ಝೋನ್ ಅಗ್ನಿ ದುರಂತ: ನಿಷ್ಕ್ರಿಯ ಅಧಿಕಾರಿಗಳನ್ನು ಸುಮ್ಮನೆ ಬಿಡಬಾರದು ಎಂದ ಗುಜರಾತ್ ಹೈಕೋರ್ಟ್

ಈ ಅಗ್ನಿ ಆಕಸ್ಮಿಕ ಮಾತ್ರವಲ್ಲದೆ ಮೊರ್ಬಿ ಸೇತುವೆ ಕುಸಿತ ಮತ್ತು ಹರ್ನಿ ಕೆರೆ ದೋಣಿ ದುರಂತದಂತಹ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ನಗರ ಪಾಲಿಕೆಗಳ ಕಾರ್ಯನಿರ್ವಹಣೆ ಬಗ್ಗೆ ತನಿಖೆ ನಡೆಸುವಂತೆ ಅದಿ ನಿರ್ದೇಶಿಸಿದೆ.
Gujarat High Court
Gujarat High Court

ರಾಜ್‌ಕೋಟ್‌ನ ಗೇಮಿಂಗ್ ಝೋನ್‌ನಲ್ಲಿ ಮೇ 24 ರಂದು ಸಂಭವಿಸಿದ ಅಗ್ನಿ ಆಕಸ್ಮಿಕ ಮತ್ತು ಪ್ರಕರಣ ಕುರಿತಂತೆ ರಾಜ್‌ಕೋಟ್ ನಗರ ಪಾಲಿಕೆ ಹಿರಿಯ ಅಧಿಕಾರಿಗಳ ನಿಷ್ಕ್ರಿಯತೆ ಬಗ್ಗೆ ತನಿಖೆ ನಡೆಸಲು ಸತ್ಯಶೋಧನಾ ಸಮಿತಿ ರಚಿಸುವಂತೆ ಗುಜರಾತ್ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಾಗಿರುವ ಅಥವಾ ಬೇಜವಾಬ್ದಾರಿಯಿಂದ ನಡೆದುಕೊಂಡಿರುವ ಯಾವುದೇ ಅಧಿಕಾರಿಯನ್ನು ಸುಮ್ಮನೆ ಬಿಡಬಾರದು ಎಂದು ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ಮತ್ತು ನ್ಯಾಯಮೂರ್ತಿ ಪ್ರಣವ್ ತ್ರಿವೇದಿ ಅವರ ಪೀಠ ಸ್ಪಷ್ಟಪಡಿಸಿತು.

"ರಾಜ್‌ಕೋಟ್ ನಗರ ಪಾಲಿಕೆ ಅಧಿಕಾರಿಗಳ ಕರ್ತವ್ಯ ಲೋಪದ ಅಥವಾ ನಿಷ್ಕ್ರಿಯತೆಯ ಎಲ್ಲಾ ಅಂಶಗಳನ್ನು ಬೆಳಕಿಗೆ ತರಬೇಕು" ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಅಗ್ನಿ ಆಕಸ್ಮಿಕ ಮಾತ್ರವಲ್ಲದೆ ಮೊರ್ಬಿ ಸೇತುವೆ ಕುಸಿತ ಮತ್ತು ಹರ್ನಿ ಕೆರೆ ದೋಣಿ ದುರಂತದಂತಹ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ನಗರ ಪಾಲಿಕೆಗಳ ಕಾರ್ಯನಿರ್ವಹಣೆ ಬಗ್ಗೆ ತನಿಖೆ ನಡೆಸುವಂತೆ ಅದು ನಿರ್ದೇಶಿಸಿತು.

ಗಮನಾರ್ಹವಾಗಿ, ಅಗ್ನಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯೇ ಮತ್ತು ಕಟ್ಟಡ  ಅನುಮತಿ ಕ್ರಮಬದ್ಧವಾಗಿವೆಯೇ ಎನ್ನುವುದನ್ನು ಪರಿಶೀಲಿಸುವುದಕ್ಕಾಗಿ 3ರಿಂದ 14 ವರ್ಷ ವಯೋಮಾನದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಶಾಲೆಗಳ ಕಟ್ಟಡಗಳನ್ನು (ಸರ್ಕಾರಿ ಮತ್ತು ಖಾಸಗಿ ಎರಡೂ) ಭೌತಿಕವಾಗಿ ತಪಾಸಣೆ ನಡೆಸಲು ಪೀಠ ಸರ್ಕಾರಕ್ಕೆ ಆದೇಶಿಸಿದೆ. ಈ ಕುರಿತಂತೆ ಒಂದು ತಿಂಗಳೊಳಗೆ ವರದಿ ಸಲ್ಲಿಸುವಂತೆ ತಾಕೀತು ಮಾಡಿದ ಅದು 4.7.2024ಕ್ಕೆ ಪ್ರಕರಣದ ವಿಚಾರಣೆ ಮುಂದೂಡಿದೆ.

ತನಿಖಾ ವರದಿಯನ್ನು ದಾಖಲೆಯಲ್ಲಿ ಸಲ್ಲಿಸುವ ಸಂಬಂಧ ಖುದ್ದು ಅಫಿಡವಿಟ್ ಸಲ್ಲಿಸುವಂತೆ ರಾಜ್ಯ ನಗರಾಭಿವೃದ್ಧಿ ಮತ್ತು ನಗರ ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಆದೇಶಿಸಲಾಗಿದೆ.

ಮೇ 26 ರಂದು, ರಾಜ್‌ಕೋಟ್‌ನಲ್ಲಿ 27 ಜನರ ಸಾವಿಗೆ ಕಾರಣವಾದ ಅಗ್ನಿ ದುರಂತದ ಬಗ್ಗೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸುತ್ತಿದೆ. 

Kannada Bar & Bench
kannada.barandbench.com