
ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ ಅವರಿಗೆ ರಾಜ್ಯಸಭೆಯಲ್ಲಿ ಹಂಚಿಕೆಯಾಗಿರುವ ಸೀಟಿನ ಬಳಿ ನೋಟಿನ ಕಂತೆ ಪತ್ತೆಯಾಗಿದೆ ಎಂದು ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್ ಅವರು ಸದನದಲ್ಲಿ ಹೇಳಿದ್ದು ರಾಜ್ಯಸಭೆಯಲ್ಲಿ ಶುಕ್ರವಾರ ಕೋಲಾಹಲಕ್ಕೆ ಕಾರಣವಾಯಿತು.
ಗುರುವಾರ ಸದನ ಮುಂದೂಡಿಕೆಯಾದ ಹಿನ್ನೆಲೆಯಲ್ಲಿ ದೈನಂದಿನ ತಪಾಸಣೆಯ ಸಂದರ್ಭದಲ್ಲಿ ಸಿಂಘ್ವಿ ಅವರ ಆಸನದ ಬಳಿ ನೋಟಿನ ಕಂತೆ ಪತ್ತೆಯಾಗಿದೆ ಎಂದು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರು ಹೇಳಿದ್ದು, ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದರು.
“ಗುರುವಾರ ಸದನ ಮುಂದೂಡಿಕೆಯಾದ ಹಿನ್ನೆಲೆಯಲ್ಲಿ ಸಂಜೆ ಭದ್ರತಾ ಪರಿಶೀಲನೆಯ ಸಂದರ್ಭದಲ್ಲಿ ತೆಲಂಗಾಣದಿಂದ ಆಯ್ಕೆಯಾಗಿರುವ ರಾಜ್ಯಸಭಾ ಸದಸ್ಯ ಸಿಂಘ್ವಿ ಅವರಿಗೆ ಹಂಚಿಕೆ ಮಾಡಿರುವ 222ನೇ ಸೀಟಿನಲ್ಲಿ ಭದ್ರತಾ ಸಿಬ್ಬಂದಿಗೆ ನೋಟಿನ ಕಂತೆಗಳು ಪತ್ತೆಯಾಗಿವೆ. ಈ ವಿಚಾರವನ್ನು ನನ್ನ ಗಮನಕ್ಕೆ ತರಲಾಗಿದ್ದು, ಇದೊಂದು ಅನೈತಿಕ ವಿಚಾರ ಎಂದು ನನಗನ್ನಿಸಿದೆ. ಈ ಹಿನ್ನೆಲೆಯಲ್ಲಿ ಸದನದ ನಿಯಮದಂತೆ ಕಾನೂನಿನ ಅನ್ವಯ ತನಿಖೆ ನಡೆಸಲಾಗುತ್ತಿದೆ” ಎಂದರು.
ಘಟನೆಗೆ ಆಶ್ಚರ್ಯ ವ್ಯಕ್ತಪಡಿಸಿರುವ ಸಿಂಘ್ವಿ ಅವರು ಎಕ್ಸ್‌ನಲ್ಲಿ ವಿಡಿಯೊ ಹೇಳಿಕೆ ನೀಡಿದ್ದಾರೆ, “ಈ ವಿಚಾರವನ್ನು ಐದು ನಿಮಿಷದ ಹಿಂದೆ ಕೇಳಿ ನನಗೆ ಆಶ್ಚರ್ಯವಾಗಿದೆ. ಈ ವಿಚಾರವೇ ನನಗೆ ಗೊತ್ತಿಲ್ಲ. ಗುರುವಾರ ಮಧ್ಯಾಹ್ನ 12:57 ರ ವೇಳೆಗೆ ಸದನಕ್ಕೆ ಹಾಜರಾಗಿದ್ದೆ. ನಾನು ಸದನಕ್ಕೆ ಪ್ರವೇಶಿಸಿದ ಮೂರ್ನಾಲ್ಕು ನಿಮಿಷಗಳಲ್ಲಿ ಸದನ ಮುಂದೂಡಿಕೆಯಾಯಿತು. ಸಂಗಮ್‌ನಲ್ಲಿನ ಕ್ಯಾಂಟೀನ್‌ನಲ್ಲಿ ಅಯೋಧ್ಯಾ ರಾಮಿ ರೆಡ್ಡಿ ಜೊತೆಗೆ ಮಧ್ಯಾಹ್ನ 1 ರಿಂದ 1:30ರವರೆಗೆ ಇದ್ದೆ. 1:30ರ ವೇಳೆಗೆ ಊಟ ಮುಗಿಸಿ, ಸಂಸತ್‌ನಿಂದ ಹೊರಟಿದ್ದೇನೆ. ಸಂಸತ್‌ನಲ್ಲಿ ನಾನು ಗುರುವಾರ ಒಟ್ಟಾರೆ ಮೂರು ನಿಮಿಷ ಮಾತ್ರ ಇದ್ದೆ. ಕ್ಯಾಂಟೀನ್‌ನಲ್ಲಿ 30 ನಿಮಿಷ ಮಾತ್ರ ಇದ್ದೆ” ಎಂದು ಹೇಳಿಕೆಯಲ್ಲಿ ವಿವರಿಸಿದ್ದಾರೆ.
“ಇಂಥ ವಿಚಾರಗಳು ವಿಚಿತ್ರ ಎಂದು ನನಗನ್ನಿಸುತ್ತವೆ. ಈ ವಿಚಾರಗಳ ಮೇಲೆ ರಾಜಕೀಯ ಮಾಡಲಾಗುತ್ತಿದೆ. ಹೇಗೆ ಯಾರಾದರೂ ಸದನದ ಒಳಕ್ಕೆ ನುಗ್ಗಿ ಯಾವುದೋ ಆಸನದಲ್ಲಿ ಏನನ್ನೋ ಇಡುತ್ತಾರೆ ಎಂಬುದರ ಬಗ್ಗೆ ಕಡ್ಡಾಯವಾಗಿ ತನಿಖೆಯಾಗಬೇಕು. ಇದರರ್ಥ ಪ್ರತಿಯೊಬ್ಬರ ಆಸನವನ್ನೂ ಬೀಗ ಹಾಕುವಂತಹ ಹಾಗೂ ಅದನ್ನು ಸಂಸದರು ತಮ್ಮ ಜೊತೆ ಮನೆಗೆ ಕೊಂಡೊಯ್ಯುವಂತಹ ವ್ಯವಸ್ಥೆಯಾಗಬೇಕು. ಇಲ್ಲವಾದಲ್ಲಿ ಯಾರು ಬೇಕಾದರೂ ಏನನ್ನೋ ಮಾಡಿ ಆರೋಪ ಮಾಡಬಹುದು. ಇದು ದುರಂತ ಮತ್ತು ಗಂಭೀರ ಎನಿಸದಿದ್ದರೆ ನಗೆಪಾಟಲಾಗುತ್ತದೆ. ಈ ವಿಚಾರದ ಮೂಲ ಭೇದಿಸಲು ಎಲ್ಲರೂ ಸಹಕರಿಸಬೇಕು. ಭದ್ರತಾ ಪಡೆಯ ವಿಫಲತೆಯಿದ್ದರೂ ಅದನ್ನು ಬೆತ್ತಲೆಗೊಳಿಸಬೇಕು” ಎಂದು ಸಿಂಘ್ವಿ ಆಗ್ರಹಿಸಿದ್ದಾರೆ.