ದೆಹಲಿ ಪೊಲೀಸ್ ಕಮಿಷನರ್ ಹುದ್ದೆಗೆ ರಾಕೇಶ್ ಆಸ್ಥಾನಾ ನೇಮಕಾತಿ ಪ್ರಶ್ನಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಸೋಮವಾರ ಆದೇಶ ಕಾಯ್ದಿರಿಸಿದೆ. ವಾದಗಳನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ಪೀಠ ಸೋಮವಾರ ಆದೇಶ ಕಾಯ್ದಿರಿಸಿತು.
ಆಸ್ಥಾನಾ ಅವರನ್ನು ಕೇಂದ್ರ ಸರ್ಕಾರ ನೇಮಿಸಿರುವುದು ಪ್ರಕಾಶ್ ಸಿಂಗ್ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರ ಪರ ವಕೀಲ ಬಿ ಎಸ್ ಬಗ್ಗಾ ವಾದಿಸಿದರು. ಕನಿಷ್ಠ ಆರು ತಿಂಗಳ ಅಧಿಕಾರಾವಧಿ ಇರುವಂತೆ ನೇಮಕಾತಿ ನಡೆಯಬೇಕು ಎನ್ನುತ್ತದೆ ಸುಪ್ರೀಂಕೋರ್ಟ್ ತೀರ್ಪು ಆದರೆ ಈ ಪ್ರಕರಣದಲ್ಲಿ ಆಸ್ಥಾನಾ ಅವರ ನಿವೃತ್ತಿಗೆ ನಾಲ್ಕು ದಿನಗಳು ಉಳಿದಿರುವಂತೆ ನೇಮಕಾತಿ ಮಾಡಲಾಗಿದೆ. ಇದು ಕಾನೂನಿನ ಪ್ರಕಾರ ಕೆಟ್ಟ ನಡೆ ಎಂದು ಅವರು ಹೇಳಿದರು.
ಪ್ರಕರಣದಲ್ಲಿ ಮಧ್ಯಪ್ರವೇಶ ಕೋರಿ ಅರ್ಜಿ ಸಲ್ಲಿಸಿರುವ ಸರ್ಕಾರೇತರ ಸಂಸ್ಥೆ ಸಿಪಿಐಎಲ್ ಪರ ಹಾಜರಾದ ವಕೀಲ ಪ್ರಶಾಂತ್ ಭೂಷಣ್ ದಂಡದೊಂದಿಗೆ ಅರ್ಜಿ ವಜಾಗೊಳಿಸಿದರೂ ಪರವಾಗಿಲ್ಲ ಅದರ ಪ್ರಯೋಜನ ಪ್ರಕರಣದಲ್ಲಿ ಮಧ್ಯಪ್ರವೇಶ ಕೋರಿರುವವರಿಗೆ ಲಭಿಸಬಾರದು ಎಂದು ಕೇಂದ್ರ ತನ್ನ ಅಫಿಡವಿಟ್‌ನಲ್ಲಿ ಉಲ್ಲೇಖಿಸಿರುವುದಾಗಿ ಹೇಳಿದರು.
ಕೇಂದ್ರಕ್ಕೆ ಹೆಸರುಗಳನ್ನು ಶಿಫಾರಸು ಮಾಡಬೇಕಿದ್ದ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಆಸ್ಥಾನಾ ನೇಮಕದಲ್ಲಿ ಯಾವುದೇ ಪಾತ್ರ ವಹಿಸಿಲ್ಲ. ಪ್ರಕಾಶ್ ಸಿಂಗ್ ತೀರ್ಪು ದೆಹಲಿಯಂತಹ ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯಿಸುವುದಿಲ್ಲ ಎಂಬ ಕೇಂದ್ರದ ವಾದಕ್ಕೂ ಅವರು ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ, ಪೊಲೀಸ್ ಕಮಿಷನರ್ ಹುದ್ದೆಯ ಅವಧಿ ಎರಡು ವರ್ಷಗಳಿರಬೇಕು ಎಂದು ಸುಪ್ರೀಂಕೋರ್ಟ್ ಹೇಳಿದ್ದರೂ ಒಂದು ವರ್ಷದ ಅವಧಿಗೆ ಅವರನ್ನು ನೇಮಕ ಮಾಡಲಾಗಿದೆ. ನಿವೃತ್ತರಾಗಲು ಆರು ತಿಂಗಳ ಮೊದಲು ಹುದ್ದೆಗೆ ನೇಮಕಗೊಂಡಿರಬೇಕೆಂಬ ನಿಯಮವನ್ನೂ ಪಾಲಿಸಿಲ್ಲ ಎಂದರು.
ಕೇಂದ್ರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕೃತಿಚೌರ್ಯದ ಅರ್ಜಿಯು ಕಾನೂನಿನ ಪ್ರಕ್ರಿಯೆಯ ದುರ್ಬಳಕೆಯಾಗಿದ್ದು ವೈಯಕ್ತಿಕ ಪ್ರತೀಕಾರದ ಸ್ಪಷ್ಟ ಫಲಿತಾಂಶ ಎಂದು ವಾದಿಸಿದರು.
"ಮಧ್ಯಪ್ರವೇಶಕಾರರು ಮತ್ತು ಅರ್ಜಿದಾರರು ಮೂಗುತೂರಿಸುವಂತಹವರು. ಅರ್ಥವಿಲ್ಲದ ಕಾರಣಗಳಿಗಾಗಿ ಮಧ್ಯವರ್ತಿ ಆಯ್ದ ಅರ್ಜಿಗಳನ್ನು ಸಲ್ಲಿಸುತ್ತಾರೆ. ಇಂತಹ ಮೂಗುತೂರಿಸುವವರ ಪಾತ್ರ ಕೊನೆಗೊಳ್ಳಬೇಕು" ಎಂದು ಅವರು ಹೇಳಿದರು.
ಅಲ್ಲದೆ, “ಪಿಐಎಲ್ ಎನ್ನುವುದು ಒಂದು ಉದ್ಯಮವಾಗಿದೆ. ಇದು ಒಂದು ವೃತ್ತಿಯಾಗಿದೆ. ಈ ಬಗ್ಗೆ ಸಂವಿದಾನದಲ್ಲಿ ಊಹಿಸಿರಲಿಲ್ಲ. ಸೇವೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಪಿಐಎಲ್ ಅರ್ಜಿ ನಿರ್ವಹಣೆಗೆ ಅರ್ಹವಲ್ಲ ಎಂದು ಸುಪ್ರೀಂಕೋರ್ಟ್ ಮತ್ತೆ ಮತ್ತೆ ಹೇಳಿದೆ. ಈ ದೇಶದ ಕೆಲವು ಪ್ರಜೆಗಳಿಗೆ ಸರ್ಕಾರವನ್ನು ನಡೆಸುವ ಬಯಕೆ ಇದೆ. ಇಂತಹ ಪಿಐಎಲ್‌ಗಳ ಮೂಲಕ ಅವರು ತಮ್ಮ ಈಡೇರದ ಆಸೆ ಪೂರೈಸಿಕೊಳ್ಳುತ್ತಾರೆ" ಎಂದರು.
ಅರ್ಜಿದಾರರು ಮತ್ತು ಮಧ್ಯಪ್ರವೇಶ ಕೋರಿರುವ ಸಂಸ್ಥೆಯ ಪಾತ್ರವನ್ನು ಅವರು ಪ್ರಶ್ನಿಸಿದರು. ಮತ್ತೊಂದೆಡೆ ಪ್ರಕಾಶ್ ಸಿಂಗ್ ತೀರ್ಪು ರಾಜ್ಯಗಳ ಡಿಜಿಪಿಗಳಿಗೆ ಮಾತ್ರ ಅನ್ವಯವಾಗುತ್ತದೆ ವಿನಾ ದೆಹಲಿ ಪೊಲೀಸ್ ಕಮಿಷನರ್ ಅವರಿಗೆ ಅಲ್ಲ ಎಂದ ಅವರು ಅದೇ ಕಾರಣಕ್ಕಾಗಿ ಕೇಂದ್ರ ಸರ್ಕಾರ ನೇಮಕಾತಿ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಹೇಳುವ ಗೋಜಿಗೆ ಯುಪಿಎಸ್‌ಸಿ ಹೋಗಲಿಲ್ಲ ಎಂದರು.
ಆಸ್ಥಾನಾ ಪರವಾಗಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಮುಕುಲ್ ರೋಹಟ್ಗಿ "ಸೇವಾ ಪ್ರಕರಣಗಳಲ್ಲಿ ಪಿಐಎಲ್ ಅರ್ಜಿ ಹಾಕಲು ಬರುವುದಿಲ್ಲ ಎಂಬುದರ ಹೊರತಾಗಿಯೂ ಆಲಂ ಸಲ್ಲಿಸಿರುವ ಅರ್ಜಿ ನಿಜವಾದ ಪಿಐಎಲ್ ಅಲ್ಲ. ಇದು ತಾವಾಗಿಯೇ ಮುಂದೆ ಬರಲು ಇಚ್ಛಿಸದವರ ಪರವಾಗಿ ಸಲ್ಲಿಸಿದ ಪಿಐಎಲ್” ಎಂದರು. "ಸಿಪಿಐಎಲ್ ಸಲ್ಲಿಸಿರುವ ಮಧ್ಯಪ್ರವೇಶ ಅರ್ಜಿ ಕೂಡ ಪ್ರಚೋದಿತವಾಗಿದ್ದು ದುರುದ್ದೇಶದಿಂದ ಕೂಡಿದೆ" ಎಂದು ವಾದಿಸಿದರು.