ಸುಪ್ರೀಂನ ʼಸೂಕ್ತ ʼಪೀಠದಿಂದ ದೆಹಲಿ ಪೊಲೀಸ್‌ ಆಯುಕ್ತ ರಾಕೇಶ್‌ ಆಸ್ಥಾನಾ ನೇಮಕಾತಿ ವಜಾ ಕೋರಿರುವ ಮನವಿ ವಿಚಾರಣೆ

ಆಸ್ಥಾನಾರನ್ನು ಸಿಬಿಐ ನಿರ್ದೇಶಕರನ್ನಾಗಿ ನೇಮಿಸುವ ಸಂಬಂಧ ಕೇಂದ್ರ ಸಲ್ಲಿಸಿದ್ದ ಪ್ರಸ್ತಾವವನ್ನು ತಿರಸ್ಕರಿಸಿದ್ದ ಪರಮಾಧಿಕಾರ ಸಮಿತಿಯ ಭಾಗವಾಗಿದ್ದರಿಂದ ಸದರಿ ಪ್ರಕರಣದ ವಿಚಾರಣೆ ನಡೆಸುವುದಿಲ್ಲ ಎಂದು ಸಿಜೆಐ ಅಂತರ ಕಾಯ್ದುಕೊಂಡಿದ್ದಾರೆ.
CJI N V Ramana
CJI N V Ramana
Published on

ದೆಹಲಿ ಪೊಲೀಸ್‌ ಆಯುಕ್ತರನ್ನಾಗಿ ರಾಕೇಶ್‌ ಆಸ್ಥಾನಾ ಅವರನ್ನು ನೇಮಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ಬೇರೊಂದು ಪೀಠ ನಡೆಸಲಿದೆ.

ರಾಕೇಶ್‌ ಅಸ್ಥಾನಾ ಅವರನ್ನು ಕೇಂದ್ರೀಯ ತನಿಖಾ ಸಂಸ್ಥೆಯ (ಸಿಬಿಐ) ನಿರ್ದೇಶಕರನ್ನಾಗಿ ನೇಮಿಸುವ ಸಂಬಂಧ ಕೇಂದ್ರ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವವನ್ನು ತಿರಸ್ಕರಿಸಿದ್ದ ಪರಮಾಧಿಕಾರ ಸಮಿತಿಯ ಭಾಗವಾಗಿದ್ದರಿಂದ ಸದರಿ ಪ್ರಕರಣದ ವಿಚಾರಣೆ ನಡೆಸುವುದಿಲ್ಲ ಎಂದು ಬುಧವಾರ ಮನವಿಯು ತಮ್ಮ ಮುಂದೆ ವಿಚಾರಣೆಗೆ ಬಂದಾಗ ಸಿಜೆಐ ಎನ್‌ ವಿ ರಮಣ ಅವರು ಹೇಳಿದ್ದು, ಪ್ರಕರಣದಿಂದ ಅಂತರ ಕಾಯ್ದುಕೊಂಡಿದ್ದಾರೆ.

“ಇದರಲ್ಲಿ ಎರಡು ವಿಚಾರಗಳಿವೆ. ಮೊದಲನೆಯದು ಈ ಪ್ರಕರಣದಲ್ಲಿ ನಾನು ಭಾಗಿಯಾಗುವುದು. ನೀವು ಹೇಳಿರುವಂತೆ ಸಿಬಿಐಗೆ ನೇಮಕಾತಿ ವಿಚಾರದಲ್ಲಿ ಈ ವ್ಯಕ್ತಿಯ (ಆಸ್ಥಾನಾ) ಬಗ್ಗೆ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇನೆ” ಎಂದು ಸಿಜೆಐ ಹೇಳಿದರು.

ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಆದೇಶದಲ್ಲಿ ಸದರಿ ಪ್ರಕರಣದ ವಿಚಾರಣೆಯನ್ನು ಸೂಕ್ತ ಪೀಠವು ನಡೆಸಲಿದೆ ಎಂದು ಎಂಬುದನ್ನು ಖಾತರಿಪಡಿಸಲಾಗಿದೆ. “ಸೂಕ್ತ ಪೀಠದ ಮುಂದೆ ಎರಡು ವಾರಗಳ ನಂತರ ಪ್ರಕರಣವನ್ನು ವಿಚಾರಣೆಗೆ ನಿಗದಿಗೊಳಿಸುವಂತೆ ರಿಜಿಸ್ಟ್ರಿಗೆ ನಿರ್ದೇಶಿಸಲಾಗಿದೆ” ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಆಸ್ಥಾನಾ ನಿವೃತ್ತಿಗೆ ನಾಲ್ಕು ದಿನಗಳು ಬಾಕಿ ಇರುವಾಗ ಅವರಿಗೆ ನಿಯೋಜನೆ ನೀಡಿ, ಸೇವಾವಧಿಯನ್ನು ವಿಸ್ತರಿಸಿರುವುದಲ್ಲದೇ ದೆಹಲಿ ಪೊಲೀಸ್‌ ಆಯುಕ್ತರನ್ನಾಗಿ ನೇಮಿಸಿರುವ ಕೇಂದ್ರ ಗೃಹ ಇಲಾಖೆಯ ಆದೇಶವನ್ನು ಪ್ರಶ್ನಿಸಿ ಸರ್ಕಾರೇತರ ಸಂಸ್ಥೆಯಾದ ಸಾರ್ವಜನಿಕ ಹಿತಾಸಕ್ತಿ ಮನವಿ ಕೇಂದ್ರವು (ಸಿಪಿಐಎಲ್‌) ಅರ್ಜಿ ಸಲ್ಲಿಸಿದೆ. ಹಲವು ರೀತಿಯಲ್ಲಿ ಕೇಂದ್ರ ಸರ್ಕಾರದ ಆದೇಶವು ಕಾನೂನುಬಾಹಿರವಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಪ್ರಕಾಶ್‌ ಸಿಂಗ್‌ ವರ್ಸಸ್‌ ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿಗೆ ವಿರುದ್ಧವಾಗಿ ಆಕ್ಷೇಪಾರ್ಹವಾದ ಆದೇಶ ಮಾಡಲಾಗಿದೆ. ಆಸ್ಥಾನಾ ಅವರಿಗೆ ಕನಿಷ್ಠ ಆರು ತಿಂಗಳ ಸೇವಾವಧಿ ಬಾಕಿ ಇರಲಿಲ್ಲ. ಆಸ್ಥಾನಾ ನೇಮಕಾತಿಗೆ ಸಂಬಂಧಿಸಿದಂತೆ ಯುಪಿಎಸ್‌ಸಿ ತಂಡ ರಚಿಸಲಾಗಿಲ್ಲ. ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ನಿರ್ದೇಶಿಸಿದಂತೆ ಕನಿಷ್ಠ ಎರಡು ವರ್ಷಗಳ ಅವಧಿಯ ಮಾನದಂಡಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಅರ್ಜಿಯಲ್ಲಿ ತಗಾದೆ ಎತ್ತಲಾಗಿದೆ.

Also Read
ಪೊಲೀಸ್‌ ಠಾಣೆ, ತನಿಖಾ ಸಂಸ್ಥೆಗಳಲ್ಲಿ ಸಿಸಿಟಿವಿ ಅಳವಡಿಕೆ; ಸುಪ್ರೀಂ ಕೋರ್ಟ್‌ ಹೇಳಿದ್ದೇನು?

ಕಳೆದ ಮೇನಲ್ಲಿ ಪ್ರಧಾನ ಮಂತ್ರಿ, ಪ್ರತಿಪಕ್ಷ ನಾಯಕ ಮತ್ತು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರನ್ನು ಒಳಗೊಂಡ ಪರಮಾಧಿಕಾರ ಸಮಿತಿಯ ಸಭೆಯಲ್ಲಿ ರಾಕೇಶ್‌ ಆಸ್ಥಾನಾ ಅವರನ್ನು ಸಿಬಿಐ ನಿರ್ದೇಶಕರನ್ನಾಗಿ ನೇಮಿಸುವ ಸಂಬಂಧ ಕೇಂದ್ರ ಸರ್ಕಾರ ಪ್ರಯತ್ನ ನಡೆಸಿತ್ತು. ಆದರೆ, ಪ್ರಕಾಶ್‌ ಸಿಂಗ್‌ ಪ್ರಕರಣದ ತೀರ್ಪಿನ ಪ್ರಕಾರ ʼಆರು ತಿಂಗಳ ನಿಯಮʼ ಉಲ್ಲೇಖಿಸಿ ಅಸ್ಥಾನಾ ನೇಮಕಾತಿ ಪ್ರಸ್ತಾವನ್ನು ಸಿಜೆಐ ರಮಣ ತಿರಸ್ಕರಿಸಿದ್ದರು ಎಂದು ವರದಿಯಾಗಿದ್ದಾಗಿ ಸಿಪಿಐಎಲ್‌ ಮನವಿಯಲ್ಲಿ ವಿವರಿಸಲಾಗಿದೆ.

ಇದೇ ತೆರನಾದ ಮನವಿಯನ್ನು ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿರುವುದರಿಂದ ಪ್ರಕರಣದ ಕುರಿತು ಎರಡು ವಾರಗಳಲ್ಲಿ ನಿರ್ಧರಿಸುವಂತೆ ದೆಹಲಿ ಹೈಕೋರ್ಟ್‌ಗೆ ಆದೇಶ ಮಾಡಿರುವ ಸುಪ್ರೀಂ ಕೋರ್ಟ್‌ ವಿಚಾರಣೆಯನ್ನು ಮುಂದೂಡಿದೆ. ಹೈಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣದಲ್ಲಿ ಮಧ್ಯಪ್ರವೇಶ ಮನವಿ ಸಲ್ಲಿಸುವ ಸ್ವಾತಂತ್ರ್ಯವನ್ನು ಎನ್‌ಜಿಒಗೆ ಸುಪ್ರೀಂ ಕೋರ್ಟ್‌ ಕಲ್ಪಿಸಿದೆ.

Kannada Bar & Bench
kannada.barandbench.com