ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಕೇಂದ್ರ ಆಡಳಿತ ನ್ಯಾಯಮಂಡಳಿಯ (ಸಿಎಟಿ) ಪ್ರಧಾನ ಪೀಠಕ್ಕೆ ಜನವರಿ 22ರಂದು ರಜೆ ನೀಡಲಾಗಿದೆ. ಇತ್ತ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಎಲ್ಲಾ ಪೀಠಗಳು ಅಂದು ಅರ್ಧ ದಿನ ಮಾತ್ರ ಕಾರ್ಯ ನಿರ್ವಹಿಸಲಿವೆ.
ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯ ಹೊರಡಿಸಿದ ಜ್ಞಾಪನಾ ಪತ್ರದ ಪ್ರಕಾರ ದೇಶಾದ್ಯಂತ ಕೇಂದ್ರ ಸರ್ಕಾರಿ ಕಚೇರಿಗಳನ್ನು ಜ. 22ರಂದು ಮಧ್ಯಾಹ್ನ 2: 30ರವರೆಗೆ ಮುಚ್ಚುವಂತೆ ಸೂಚಿಸಲಾಗಿದೆ.
ಈ ಹಿಂದೆ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಕೂಡ ಜನವರಿ 22ರಂದು ಅರ್ಧ ದಿನ ರಜೆ ಘೋಷಿಸಿತ್ತು.
ಜನವರಿ 19ರಂದು ಹೊರಡಿಸಿದ ಅಧಿಸೂಚನೆಯಲ್ಲಿ, ಸಿಎಟಿ "... ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಪ್ರಾಣ ಪ್ರತಿಷ್ಠಾಪನಾ ಸಮರಾಂಭ ಆಚರಿಸಲು ನವದೆಹಲಿಯ ಪ್ರಧಾನ ಪೀಠ ಮತ್ತು ಎಲ್ಲಾ ಹೊರಗಿನ ನ್ಯಾಯಪೀಠಗಳು 14.30 ಗಂಟೆಗಳವರೆಗೆ ಅರ್ಧ ದಿನ ಮುಚ್ಚಲ್ಪಡುತ್ತವೆ" ಎಂದಿತ್ತು. ಅದೇ ದಿನ ಹೊರಡಿಸಲಾದ ಮತ್ತೊಂದು ಅಧಿಸೂಚನೆಯಲ್ಲಿ ಪ್ರಧಾನ ಪೀಠ ಇಡೀ ದಿನ ಕೆಲಸ ನಿರ್ವಹಿಸುವುದಿಲ್ಲ ಎಂದು ನಂತರ ತಿಳಿಸಿತು.
ಈ ಮಧ್ಯೆ, ನ್ಯಾಯಮಂಡಳಿಯ ಶ್ರೀನಗರ ಪೀಠ ಪ್ರತ್ಯೇಕ ಅಧಿಸೂಚನೆ ಹೊರಡಿಸಿದ್ದು, "ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಪ್ರಾಣ್ ಪ್ರತಿಷ್ಠಾನದ ಆಚರಣೆಯಲ್ಲಿ ಭಾಗವಹಿಸಲು ನೌಕರರಿಗೆ ಅನುವು ಮಾಡಿಕೊಡಲು" ಜನವರಿ 22ರಂದು ಮಧ್ಯಾಹ್ನ 2:30ರವರೆಗೆ ಮುಚ್ಚಲಾಗುವುದು ಎಂದು ಹೇಳಿದೆ.
"ಆ ಪ್ರಕಾರ ಈ ಹಿಂದೆ ಸೂಚಿಸಿದಂತೆ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 01:30ರ ಬದಲು ತುರ್ತು ಸ್ವರೂಪದ ಅರ್ಜಿಗಳನ್ನು ಸ್ವೀಕರಿಸಲು 2024ರ ಜನವರಿ 22ರಂದು ಮಧ್ಯಾಹ್ನ 02:30 ರಿಂದ 05:30 ರವರೆಗೆ ಮಾತ್ರ ರಿಜಿಸ್ಟ್ರಿ ತೆರೆದಿರುತ್ತದೆ" ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಇತ್ತ ಎನ್‌ಸಿಎಲ್‌ಟಿಯ ದೇಶದ ಎಲ್ಲಾ ಪೀಠಗಳು ಅಂದು ಕೇವಲ ಅರ್ಧ ದಿನ ಮಾತ್ರ ಕಾರ್ಯ ನಿರ್ವಹಿಸಲಿವೆ.
ಎನ್‌ಸಿಎಲ್‌ಟಿ ರಿಜಿಸ್ಟ್ರಾರ್ ನವೀನ್ ಕುಮಾರ್ ಕಶ್ಯಪ್ ಜನವರಿ 19 ರಂದು ಹೊರಡಿಸಿದ ಕಚೇರಿ ಆದೇಶದ ಪ್ರಕಾರ, ಎಲ್ಲಾ 15 ಎನ್‌ಸಿಎಲ್‌ಟಿ ಪೀಠಗಳ ಆಡಳಿತ ಕಚೇರಿಗಳು ಮತ್ತು ರಿಜಿಸ್ಟ್ರಿಗಳು ಜನವರಿ 22ರಂದು ಮಧ್ಯಾಹ್ನ 3 ಗಂಟೆಯಿಂದ ಮಾತ್ರ ತಮ್ಮ ಕಾರ್ಯಾರಂಭ ಮಾಡಲಿವೆ.
ಎನ್‌ಸಿಎಲ್‌ಟಿಯ ನ್ಯಾಯಾಂಗ ವಿಭಾಗ ಕೂಡ ಮಧ್ಯಾಹ್ನ 3 ಗಂಟೆಯಿಂದ ವಿಚಾರಣೆ ನಡೆಸಿಲಿದ್ದು ಮಧ್ಯಾಹ್ನ 3 ರಿಂದ 4:30 ರವರೆಗೆ ತುರ್ತು ಪ್ರಕರಣಗಳನ್ನು ಆಲಿಸಲಿದೆ.
[ಅಧಿಸೂಚನೆಯ ಪ್ರತಿಗಳನ್ನು ಇಲ್ಲಿ ಓದಿ]