ರಾಮ ಮಂದಿರ ಉದ್ಘಾಟನೆ ಸಮಾರಂಭ: ಇಲ್ಲಿದೆ ಆಕ್ಷೇಪ, ಕೋರಿಕೆಗಳನ್ನು ನ್ಯಾಯಾಲಯಗಳು ನಿರ್ವಹಿಸಿದ ಮಾಹಿತಿ

ಸಮಾರಂಭ ನಿಷೇಧಿಸಬೇಕೆಂಬ ಮನವಿಯಿಂದ ಹಿಡಿದು ಕಾರ್ಯಕ್ರಮದ ಮಹತ್ವದ ಹಿನ್ನೆಲೆಯಲ್ಲಿ ನ್ಯಾಯಾಲಯಗಳಿಗೆ ರಜೆ ನೀಡಬೇಕೆಂದು ವಕೀಲರು ಮಾಡಿದ ಮನವಿಗಳವರೆಗೆ, ರಾಮ ಮಂದಿರದ ಉದ್ಘಾಟನೆ ವಿಚಾರ ನ್ಯಾಯಾಲಯಗಳನ್ನು ಬಿಡುವಿಲ್ಲದಂತೆ ಮಾಡಿತು.
ಅಯೋಧ್ಯೆ ರಾಮ ಮಂದಿರ
ಅಯೋಧ್ಯೆ ರಾಮ ಮಂದಿರ

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ವಿಚಾರ ನ್ಯಾಯಾಲಯಗಳಲ್ಲಿ ದಾವೆಗಳ ಹೆಚ್ಚಳಕ್ಕೆ ಕಾರಣವಾಗಿದ್ದು ಜನವರಿ 22ರಂದು ನ್ಯಾಯಾಲಯಗಳಿಗೆ ರಜೆ ಘೋಷಿಸುವಂತೆ ವಿವಿಧ ವಕೀಲರ ಸಂಘಗಳು ವಿನಂತಿಸಿವೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ 8,000 ಕ್ಕೂ ಹೆಚ್ಚು ಅತಿಥಿಗಳು ಭಾಗವಹಿಸುವ ನಿರೀಕ್ಷೆಯಿದೆ.

ವಿಶೇಷವೆಂದರೆ, ಸುಪ್ರೀಂ ಕೋರ್ಟ್‌ 2019 ರಲ್ಲಿ ನೀಡಿದ ತೀರ್ಪು ರಾಮ ಮಂದಿರ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತು. ತೀರ್ಪಿನಲ್ಲಿ, ಅಯೋಧ್ಯೆಯ ವಿವಾದಿತ ಸ್ಥಳ ಭಗವಾನ್ ಶ್ರೀ ರಾಮನಿಗೆ ಸೇರಿದೆ ಎಂದು ತ್ರಿಸದಸ್ಯ ಪೀಠ ಘೋಷಿಸಿತ್ತು.

ಪ್ರಸ್ತುತ ವರದಿಯಲ್ಲಿ ದೇಗುಲ ಉದ್ಘಾಟನೆ ಸಮಾರಂಭಕ್ಕೆ ಸಂಬಂಧಿಸಿದಂತೆ ವಿವಿಧ ನ್ಯಾಯಾಲಯಗಳಲ್ಲಿ ದಾಖಲಾದ ಪ್ರಕರಣಗಳನ್ನು ಸಂಕ್ಷಿಪ್ತವಾಗಿ ಇಲ್ಲಿ ನೀಡಲಾಗಿದೆ.

ಸಮಾರಂಭ ನಿಷೇಧಿಸುವಂತೆ ಅಲಹಾಬಾದ್ ಹೈಕೋರ್ಟ್ ನಲ್ಲಿ ಅರ್ಜಿ

ರಾಮ ಮಂದಿರದಲ್ಲಿ ಜನವರಿ 22 ರಂದು ರಾಮಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ನಿಷೇಧಿಸುವಂತೆ ಕೋರಿ ಉತ್ತರ ಪ್ರದೇಶದ ಗಾಜಿಯಾಬಾದ್ ನಿವಾಸಿ ಭೋಲಾ ದಾಸ್ ಎಂಬುವವರು ಅಲಾಹಾಬಾದ್ ಹೈಕೋರ್ಟ್‌ನಲ್ಲಿ ಕೆಲ ದಿನಗಳ ಹಿಂದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಹಿಂದೂ ಪಂಚಾಂಗದ ಪ್ರಕಾರ, ಪುಷ್ಯ ಮಾಸದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮ ಆಯೋಜಿಸಬಾರದು. ಅಲ್ಲದೆ ದೇವಾಲಯ ಇನ್ನೂ ನಿರ್ಮಾಣ ಹಂತದಲ್ಲಿದ್ದು ಉದ್ಘಾಟನೆ ಸನಾತನ ಸಂಪ್ರದಾಯಕ್ಕೆ ವ್ಯತಿರಿಕ್ತವಾಗಿರುವುದರಿಂದ ದೇವರ ಪ್ರತಿಷ್ಠಾಪನೆ ಕೂಡದು ಎಂದು ಅರ್ಜಿದಾರರು ವಾದಿಸಿದ್ದರು.

ಇದಲ್ಲದೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಲಾಭಕ್ಕಾಗಿ ಬಿಜೆಪಿ ಈ ಸಮಾರಂಭ ಹಮ್ಮಿಕೊಂಡಿದೆ ಎಂದು ಅರ್ಜಿ ಆರೋಪಿಸಿತ್ತು. ಆದರೆ ಇನ್ನೂ ಪಿಐಎಲ್‌ ವಿಚಾರಣೆ ಆರಂಭವಾಗಿಲ್ಲ.

ಮದ್ಯರಹಿತ ದಿನ ಘೋಷಿಸಲು ಕಲ್ಕತ್ತಾ ಹೈಕೋರ್ಟ್ ನಕಾರ

ರಾಮಮಂದಿರ ಉದ್ಘಾಟನೆಯಾಗಲಿರುವ ದಿನ ಮದ್ಯ ಮಾರಾಟ ನಿಷೇಧಿಸಿ ಡ್ರೈ ಡೇ ಎಂಬುದಾಗಿ ಘೋಷಿಸಬೇಕೆಂದು ಸಲ್ಲಿಸಲಾಗಿದ್ದ ಪಿಐಎಲ್‌ ಅನ್ನು ಕಲ್ಕತ್ತಾ ಹೈಕೋರ್ಟ್‌ ಕಳೆದ ಗುರುವಾರ ತಿರಸ್ಕರಿಸಿತು.

ಹಾಗೆ ಘೋಷಣೆ ಮಾಡುವುದು ನೀತಿ ನಿರ್ಧಾರದ ವ್ಯಾಪ್ತಿಯಲ್ಲಿ ಬರುತ್ತದೆ, ಅದನ್ನು ನ್ಯಾಯಾಲಯ ನಿರ್ಧರಿಸಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಟಿ ಎಸ್ ಶಿವಜ್ಞಾನಂ ಮತ್ತು ನ್ಯಾಯಮೂರ್ತಿ  ಹಿರಣ್ಮಯ್ ಭಟ್ಟಾಚಾರ್ಯ ಅವರಿದ್ದ ಪೀಠ ತಿಳಿಸಿತು.

ಧಾರ್ಮಿಕ ಸೌಹಾರ್ದ ಸಮಾವೇಶ ತಡೆಯಲು ಒಪ್ಪದ ಕಲ್ಕತ್ತಾ ಹೈಕೋರ್ಟ್‌

ಜನವರಿ 22ರಂದು ಟಿಎಂಸಿ ಹಮ್ಮಿಕೊಂಡಿರುವ "ಸಂಪ್ರೀತಿ" ಸಮಾವೇಶ (ಎಲ್ಲಾ ಧರ್ಮಗಳ ಸಾಮರಸ್ಯ ಸಮಾವೇಶ) ನಡೆಸುವುದನ್ನು ನಿಲ್ಲಿಸುವಂತೆ ಕೋರಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಸಲ್ಲಿಸಿದ್ದ ಮನವಿಯನ್ನು ಕಲ್ಕತ್ತಾ ಹೈಕೋರ್ಟ್‌ ಈಚೆಗೆ ತಿರಸ್ಕರಿಸಿತು.

ರಾಮ ಮಂದಿರ ಉದ್ಘಾಟನೆಯಾಗಲಿರುವ ಜನವರಿ 22 ರಂದು ಟಿಎಂಸಿ ಸಮಾವೇಶ ನಡೆಸಿದರೆ ದೊಡ್ಡ ಪ್ರಮಾಣದ ಹಿಂಸಾಚಾರ ಸಂಭವಿಸಬಹುದು ಎಂದು ಸುವೇಂದು ಕಳವಳ ವ್ಯಕ್ತಪಡಿಸಿದ್ದರು. ಜನವರಿ 22ರಂದು ಅಂತಹ ಯಾವುದೇ ಸಮಾವೇಶ ನಡೆಸಬಾರದು. ಬದಲಿಗೆ ಹಿಂಸೆ ತಡೆಗಟ್ಟಲು ಸೇನೆ ನಿಯೋಜಿಸಬೇಕು ಎಂದು ಅವರು ಕೋರಿದ್ದರು.

ಆದರೆ ರಾಮ ಮಂದಿರದ ಉದ್ಘಾಟನೆ ಮೇಲೆ ಸಮಾವೇಶ ಹೇಗೆ ಪರಿಣಾಮ ಬೀರುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಟಿ ಎಸ್ ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ ಅವರಿದ್ದ ಪೀಠ ಪ್ರಶ್ನಿಸಿತು. ಇದೇ ವೇಳೆ ಸಮಾವೇಶದಿಂದ ಶಾಂತಿ ಭಂಗ ಉಂಟಾಗದಂತೆ ನೋಡಿಕೊಳ್ಳಬೇಕು ಸರ್ಕಾರಕ್ಕೆ ಸೂಚಿಸಿತು.

ದಕ್ಷಿಣ ಕೋಲ್ಕತಾದಲ್ಲಿ ಸಮಾರಂಭದ ನೇರ ಪ್ರಸಾರಕ್ಕೆ ಅನುಮತಿ

ಆದರೆ ಜನವರಿ 18 ರಂದು ಹೊರಡಿಸಿದ ಮತ್ತೊಂದು ಆದೇಶದಲ್ಲಿ, ಅಯೋಧ್ಯೆ ರಾಮ ಮಂದಿರದ ಉದ್ಘಾಟನೆ ಪ್ರಸಾರ ಮಾಡಲು ದಕ್ಷಿಣ ಕೋಲ್ಕತ್ತಾದ ದೇಶಪ್ರಾಣ್‌ ಸಸ್‌ಮಲ್‌ ಉದ್ಯಾನದಲ್ಲಿ ಪೂಜೆ ಮತ್ತು ಕೀರ್ತನೆ ನಡೆಸಲು ಅನುಮತಿ ನೀಡಿತು.

ದಕ್ಷಿಣ ಕೋಲ್ಕತ್ತಾದ ಮತ್ತೊಂದು ಸ್ಥಳದಲ್ಲಿ ಇಂತಹ ಕಾರ್ಯಕ್ರಮ ನಡೆಸಲು ಸರ್ಕಾರಿ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಮಿತಿ ಸಲ್ಲಿಸಿದ ಅರ್ಜಿಯ ಮೇರೆಗೆ ನ್ಯಾಯಮೂರ್ತಿ ಜಯ್ ಸೇನ್ ಗುಪ್ತಾ ಈ ಆದೇಶ ಹೊರಡಿಸಿದರು

ಪಾಂಡಿಚೆರಿ ಸಂಸ್ಥೆಗೆ ಅರ್ಧ ದಿನ ರಜೆ ಪ್ರಶ್ನಿಸಿದ್ದ ಅರ್ಜಿ ತಿರಸ್ಕಾರ

ಪಾಂಡಿಚೆರಿಯ ಜವಾಹರಲಾಲ್ ವೈದ್ಯಕೀಯ ಶಿಕ್ಷಣ ಸ್ನಾತಕೋತ್ತರ ಮತ್ತು ಸಂಶೋಧನಾ ಸಂಸ್ಥೆಗೆ (ಜೆಐಪಿಎಂಇಆರ್‌) ಅಲ್ಲಿನ ಸರ್ಕಾರ ಜನವರಿ 22ರಂದು ಅರ್ಧ ದಿನ ರಜೆ ನೀಡಿದ್ದನ್ನು ಪ್ರಶ್ನಿಸಿದ್ದ ಪಿಐಎಲ್‌ ಅನ್ನು ಮದ್ರಾಸ್ ಹೈಕೋರ್ಟ್ ಇಂದು (ಭಾನುವಾರ) ಬೆಳಿಗ್ಗೆ ತಿರಸ್ಕರಿಸಿತು.

ರಜೆ ನೀಡಿದ್ದರೂ ವೈದ್ಯಕೀಯ ಸಂಸ್ಥೆಯಲ್ಲಿ ತುರ್ತು ಸೇವೆ ಮುಂದುವರೆಯುವುದಾಗಿ ಜೆಐಪಿಎಂಇಆರ್‌ ತಿಳಿಸಿದ ಹಿನ್ನೆಲೆಯಲ್ಲಿ ಅರ್ಜಿದಾರರ ಕಳವಳಕ್ಕೆ ಆಧಾರವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್ ವಿ ಗಂಗಾಪುರ್‌ವಾಲಾ ಮತ್ತು ನ್ಯಾಯಮೂರ್ತಿ ಭರತ ಚಕ್ರವರ್ತಿ ಅವರು ತಿಳಿಸಿದರು.

ಕಾನೂನು ವಿದ್ಯಾರ್ಥಿಗಳ ಅರ್ಜಿ ಪುರಸ್ಕರಿಸದ ಬಾಂಬೆ ಹೈಕೋರ್ಟ್‌

ಮತ್ತೊಂದೆಡೆ ಇಂದು ನಡೆದ ವಿಶೇಷ ಕಲಾಪದಲ್ಲಿ ಜನವರಿ 22 ರಂದು ರಜೆ ಘೋಷಿಸುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ನಾಲ್ವರು ಕಾನೂನು ವಿದ್ಯಾರ್ಥಗಳು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ತಿರಸ್ಕರಿಸಿತು.

ಪಿಐಎಲ್‌ ಪ್ರಚಾರದ ಉದ್ದೇಶದ ಅರ್ಜಿಯಾಗಿದ್ದು ರಜೆ ದಿನಗಳನ್ನು ಘೋಷಿಸುವುದು ಕಾರ್ಯಾಂಗದ ವ್ಯಾಪ್ತಿಗೆ ಸೇರಿದ್ದು ಎಂದು ನ್ಯಾಯಮೂರ್ತಿಗಳಾದ ಜಿ.ಎಸ್.ಕುಲಕರ್ಣಿ ಮತ್ತು ನೀಲಾ ಗೋಖಲೆ ಅವರ ವಿಭಾಗೀಯ ಪೀಠ ತಿಳಿಸಿತು.

ಅಲ್ಲದೆ ಅಯೋಧ್ಯೆ ವಿಚಾರವಾಗಿ 2019ರಲ್ಲಿ ನೀಡಿದ್ದ ತೀರ್ಪಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ವಿವೇಚನೆಯನ್ನು ಪ್ರಶ್ನಿಸಿದ್ದ ಅರ್ಜಿದಾರರಾದ ಮಹಾರಾಷ್ಟ್ರದ ನಾಲ್ವರು ಕಾನೂನು ವಿದ್ಯಾರ್ಥಿಗಳನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು.

ಇಂತಹ ರಜಾದಿನಗಳನ್ನು ಘೋಷಿಸಲು ಸರ್ಕಾರಗಳಿಗೆ ಅಧಿಕಾರವನ್ನು ನೀಡುವ 1968ರ ಕೇಂದ್ರ ಸರ್ಕಾರದ ಅಧಿಸೂಚನೆಯನ್ನು ಅರ್ಜಿದಾರರು ಪ್ರಶ್ನಿಸುತ್ತಿದ್ದರೂ, ಈ ಅಧಿಸೂಚನೆಯನ್ನು ಅರ್ಜಿಗೆ ಸೇರಿಸಿಲ್ಲ ಎಂದು ನ್ಯಾಯಾಲಯ ಆಕ್ಷೇಪಿಸಿತು.

ಪಿಐಎಲ್ ಮೂಲಕ ಇಂತಹ ಸಮಸ್ಯೆಗಳನ್ನು ಮುಂದುವರೆಸದಂತೆ ನ್ಯಾಯಾಲಯ ಎಚ್ಚರಿಕೆ ನೀಡಿತಾದರೂ ದಂಡ ವಿಧಿಸಲು ಮುಂದಾಗಲಿಲ್ಲ.

ನ್ಯಾಯಮಂಡಳಿಗಳಲ್ಲಿ ರಜೆ, ಅರ್ಧ ದಿನ ಕಾರ್ಯ ನಿರ್ವಹಣೆ

ಈ ಮಧ್ಯೆ ಸಮಾರಂಭದ ಅಂಗವಾಗಿ ದೇಶದ ಕೆಲವು ನ್ಯಾಯಮಂಡಳಿಗಳು ಜ. 22 ರಂದು ರಜೆ ಘೋಷಿಸಿದರೆ ಇನ್ನೂ ಕೆಲವು ಅರ್ಧ ದಿನ ರಜೆ ಘೋಷಿಸಿವೆ.

ಕೇಂದ್ರ ಆಡಳಿತ ನ್ಯಾಯಮಂಡಳಿಯ (ಸಿಎಟಿ) ಪ್ರಧಾನ ಪೀಠಕ್ಕೆ ಜನವರಿ 22ರಂದು ರಜೆ ನೀಡಲಾಗಿದೆ. ಇತ್ತ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಎಲ್ಲಾ ಪೀಠಗಳು ಅಂದು ಅರ್ಧ ದಿನ ಮಾತ್ರ ಕಾರ್ಯ ನಿರ್ವಹಿಸಲಿವೆ.

ಎನ್‌ಜಿಟಿ
ಎನ್‌ಜಿಟಿ

ಅಂದು ಮಧ್ಯಾಹ್ನ 2: 30 ರವರೆಗೆ ದೇಶದ ತನ್ನೆಲ್ಲಾ ಪೀಠಗಳು ಕೆಲಸ ನಿರ್ವಹಿಸುವುದಿಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ತಿಳಿಸಿದೆ.

ದೇಶಾದ್ಯಂತ ಕೇಂದ್ರ ಸರ್ಕಾರಿ ಕಚೇರಿಗಳನ್ನು ಜ. 22ರಂದು ಮಧ್ಯಾಹ್ನ 2: 30ರವರೆಗೆ ಮುಚ್ಚುವಂತೆ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯ ಹೊರಡಿಸಿದ ಜ್ಞಾಪನಾ ಪತ್ರದ ಅನುಸಾರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಇದೇ ಹಿನ್ನೆಲೆಯಲ್ಲಿ ಕೇಂದ್ರ ಆಡಳಿತ ನ್ಯಾಯಮಂಡಳಿಯ (ಸಿಎಟಿ) ಪ್ರಧಾನ ಪೀಠಕ್ಕೆ ಜನವರಿ 22ರಂದು ರಜೆ ನೀಡಲಾಗಿದೆ. ಸಿಎಟಿಯ ಉಳಿದ ಪೀಠಗಳು ಅರ್ಧ ದಿನ ಮಾತ್ರ ಕಾರ್ಯ ನಿರ್ವಹಿಸಲಿವೆ.

ವಕೀಲರ ಸಂಘದ ಮನವಿಗಳು

ಮಂದಿರ ಉದ್ಘಾಟನಾ ದಿನದಂದು ದೇಶದ ಎಲ್ಲಾ ನ್ಯಾಯಾಲಯಗಳಿಗೆ ರಜೆ ಘೋಷಿಸುವಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ಅಧ್ಯಕ್ಷ ಮತ್ತು ಹಿರಿಯ ವಕೀಲ ಮನನ್ ಕುಮಾರ್ ಮಿಶ್ರಾ ಅವರು ಜನವರಿ 17 ರಂದು ಸಿಜೆಐ ಡಿ ವೈ ಚಂದ್ರಚೂಡ್‌ ಅವರನ್ನು ಕೋರಿದ್ದರು.

ಅದೇ ದಿನ, ಗುಜರಾತ್ ಹೈಕೋರ್ಟ್ ವಕೀಲರ ಸಂಘ ಗುಜರಾತ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ಅವರಿಗೆ ಪತ್ರ ಬರೆದು ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದ ವಕೀಲರ ವಿರುದ್ಧ ಯಾವುದೇ ಪ್ರತಿಕೂಲ ಆದೇಶ ಹೊರಡಿಸಬಾರದು ಎಂದು ಕೋರಿದ್ದರು.

ಅದಕ್ಕೂ ಹಿಂದಿನ ದಿನ ನವದೆಹಲಿ ವಕೀಲರ ಸಂಘ ಕೂಡ ಪಟಿಯಾಲ ಹೌಸ್ ನ್ಯಾಯಾಲಯದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ಪತ್ರ ಬರೆದು ಇದೇ ಬಗೆಯ ಮನವಿ ಮಾಡಿತ್ತು. ಇತ್ತ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ ವಕೀಲರ ಸಂಘ ಕೂಡ ವಕೀಲರ ವಿರುದ್ಧ ಪ್ರತಿಕೂಲ ಆದೇಶ ಹೊರಡಿಸದಂತೆ ಮನವಿ ಮಾಡಿತ್ತು.

Kannada Bar & Bench
kannada.barandbench.com