ರಾಮ ಮಂದಿರ ಉದ್ಘಾಟನೆ ಸಮಾರಂಭದ ವಿರುದ್ಧ ಅಲಾಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ

ದೇವಾಲಯ ಇನ್ನೂ ನಿರ್ಮಾಣ ಹಂತದಲ್ಲಿದ್ದು ಸನಾತನ ಸಂಪ್ರದಾಯಕ್ಕೆ ವ್ಯತಿರಿಕ್ತವಾಗಿರುವುದರಿಂದ ದೇವರ ಪ್ರತಿಷ್ಠಾಪನೆ ಮಾಡಕೂಡದು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದರು.
ರಾಮ ಮಂದಿರ, ಅಯೋಧ್ಯೆ
ರಾಮ ಮಂದಿರ, ಅಯೋಧ್ಯೆ

ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದಲ್ಲಿ ಜನವರಿ 22 ರಂದು ರಾಮಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ನಿಷೇಧಿಸುವಂತೆ ಕೋರಿ ಅಲಾಹಾಬಾದ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.

ಉತ್ತರ ಪ್ರದೇಶದ ಗಾಜಿಯಾಬಾದ್ ನಿವಾಸಿ ಭೋಲಾ ದಾಸ್ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ.

ಹಿಂದೂ ಪಂಚಾಂಗದ ಪ್ರಕಾರ, ಪುಷ್ಯ ಮಾಸದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮ ಆಯೋಜಿಸಬಾರದು. ಅಲ್ಲದೆ ದೇವಾಲಯ ಇನ್ನೂ ನಿರ್ಮಾಣ ಹಂತದಲ್ಲಿದ್ದು ಉದ್ಘಾಟನೆ ಸನಾತನ ಸಂಪ್ರದಾಯಕ್ಕೆ ವ್ಯತಿರಿಕ್ತವಾಗಿರುವುದರಿಂದ ದೇವರ ಪ್ರತಿಷ್ಠಾಪನೆ ಕೂಡದು ಎಂದು ಅರ್ಜಿದಾರರು ವಾದಿಸಿದ್ದಾರೆ.

ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಶಂಕರಾಚಾರ್ಯರ ಆಕ್ಷೇಪವಿದೆ. ದೇವಾಲಯ ಅಪೂರ್ಣವಾಗಿದ್ದು ದೇವರ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಮಾಡುವುದು ಸನಾತನ ಧರ್ಮದ ಆಚರಣೆಗಳಿಗೆ ವಿರುದ್ಧವಾಗಿದೆ ಎಂದು ವಿವರಿಸಲಾಗಿದೆ.

"2024ರ ಜನವರಿ 22ರಂದು ಅಯೋಧ್ಯೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ನಿರ್ಮಾಣ ಹಂತದಲ್ಲಿರುವ ದೇವಾಲಯದಲ್ಲಿ ರಾಮ್ ಲಲ್ಲಾ ವಿಗ್ರಹ ಸ್ಥಾಪಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಶಂಕರಾಚಾರ್ಯರ ಆಕ್ಷೇಪವಿದೆ... ದೇವಾಲಯ ಇನ್ನೂ ಅಪೂರ್ಣವಾಗಿದೆ... ಯಾವುದೇ ದೇವರ ಪ್ರಾಣ ಪ್ರತಿಷ್ಠಾಪನೆ ಸಾಧ್ಯವಿಲ್ಲ" ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಇದಲ್ಲದೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಲಾಭಕ್ಕಾಗಿ ಬಿಜೆಪಿ ಈ ಸಮಾರಂಭ ಹಮ್ಮಿಕೊಂಡಿದೆ ಎಂದು ಅರ್ಜಿ ಆರೋಪಿಸಿದೆ.

Kannada Bar & Bench
kannada.barandbench.com