[ರಾಮಚಂದ್ರಾಪುರ ಮಠ ವಿವಾದ] ಅಂತಿಮ ವಿಚಾರಣೆ ವೇಳೆ ಮಧ್ಯಪ್ರವೇಶ ಮನವಿಗಳ ವಿಚಾರಣೆಗೆ ಮುಂದಾಗಲಿರುವ ಹೈಕೋರ್ಟ್‌

ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ ವಿಚಾರದಲ್ಲಿ ಪರ ವಿರೋಧದ ನಿಲುವನ್ನು ತಳೆದು ಮಧ್ಯಪ್ರವೇಶ ಮನವಿಗಳನ್ನು ಸಲ್ಲಿಸಲಾಗಿದೆ.
[ರಾಮಚಂದ್ರಾಪುರ ಮಠ ವಿವಾದ] ಅಂತಿಮ ವಿಚಾರಣೆ ವೇಳೆ ಮಧ್ಯಪ್ರವೇಶ ಮನವಿಗಳ ವಿಚಾರಣೆಗೆ ಮುಂದಾಗಲಿರುವ ಹೈಕೋರ್ಟ್‌
Raghaveshwara Bharathi Swamiji and Karnataka HC

ಶಿವಮೊಗ್ಗದ ಹೊಸನಗರದಲ್ಲಿರುವ ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಿಸುವಂತೆ ಕೋರಿ ಸಲ್ಲಿಸಲಾಗಿರುವ ಮನವಿಗಳಲ್ಲಿ ಮಧ್ಯಪ್ರವೇಶ ಕೋರಿರುವ ಅರ್ಜಿಗಳ ವಿಚಾರಣೆಯನ್ನು ಪ್ರಕರಣದ ಅಂತಿಮ ವಿಚಾರಣೆಯ ಸಂದರ್ಭದಲ್ಲಿ ಪರಿಗಣಿಸಲಾಗುವುದು ಎಂದು ಸೋಮವಾರ ಕರ್ನಾಟಕ ಹೈಕೋರ್ಟ್‌ ಹೇಳಿದೆ.

ರಾಮಚಂದ್ರಾಪುರ ಮಠದ ಪೀಠಾಧಿಪತಿಯಾದ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಸುತ್ತಲು ವಿವಾದಗಳು ಸೃಷ್ಟಿಯಾಗಿರುವುದರಿಂದ ಅವರನ್ನು ಪೀಠಾಧಿಪತಿ ಸ್ಥಾನದಿಂದ ವಜಾ ಮಾಡಿ, ಅಕ್ರಮಗಳ ತನಿಖೆ ಆದೇಶಿಸಬೇಕು. ಕಾನೂನಿನ ಪ್ರಕಾರ ಮಠಕ್ಕೆ ಆಡಳಿತಾಧಿಕಾರಿ ನೇಮಿಸಬೇಕು ಎಂದು ಕೋರಿ 2016ರಲ್ಲಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಮನವಿ ಹಾಗೂ ಸಂಬಂಧಿತ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಮಧ್ಯಪ್ರವೇಶ ಮನವಿಗಳ ವಿಚಾರಣೆಯನ್ನು ಅಂತಿಮ ವಿಚಾರಣೆಯ ಸಂದರ್ಭದಲ್ಲಿ ಪರಿಗಣಿಸಲಾಗುವುದು ಎಂದು 2020ರ ಮಾರ್ಚ್‌ 20ರ ಆದೇಶದಲ್ಲಿ ನ್ಯಾಯಾಲಯ ಹೇಳಿದೆ ಎಂಬುದನ್ನು ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಹೀಗಾಗಿ, 2016ರಲ್ಲಿ ವಕೀಲರಾದ ರಾಜಾರಾಮ್‌ ಎಸ್‌, ವೈ ವಿ ಪ್ರಕಾಶ್‌, ಗಣಪತಿ ಹೆಗಡೆ, ಎಸ್‌ ರಾಜಶೇಖರ, ಉದಾನೇಶ್ವರ ಎಂ ಜಿ, ಕೆ ರಮಾಭಟ್‌, ಎಚ್‌ ಪವನ್‌ ಚಂದ್ರ ಶೆಟ್ಟಿ, ಎಚ್‌ ಸಿ ಶಿವರಾಮು ಮತ್ತು 2020ರಲ್ಲಿ ವಕೀಲ ಡಿ ಆರ್‌ ರವಿಶಂಕರ್ ಅವರ ಮೂಲಕ ಸಲ್ಲಿಸಲಾಗಿರುವ ಮಧ್ಯಪ್ರವೇಶ ಮನವಿಗಳನ್ನು ಅಂತಿಮ ವಿಚಾರಣೆಯ ಸಂದರ್ಭದಲ್ಲಿ ಪರಿಗಣಿಸಲಾಗುವುದು.” ಎಂದು ಆದೇಶದಲ್ಲಿ ದಾಖಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಮುಂದೂಡಿತು.

ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ ವಿಚಾರದಲ್ಲಿ ಪರ ವಿರೋಧದ ನಿಲುವನ್ನು ತಳೆದು ಮಧ್ಯಪ್ರವೇಶ ಮನವಿಗಳನ್ನು ಸಲ್ಲಿಸಲಾಗಿದೆ.

ಅಧಿಕಾರ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ರಾಮಚಂದ್ರಾಪುರ ಮಠದ ಪೀಠಾಧಿಪತಿಯಾದ ರಾಘವೇಶ್ವರ ಭಾರತೀ ಸ್ವಾಮೀಜಿ ಅವರನ್ನು ವಜಾ ಮಾಡಿ, ಮಠವನ್ನು ಮತ್ತೊಂದು ಧಾರ್ಮಿಕ ಸಂಸ್ಥೆ ಎಂದು ನಿಯಂತ್ರಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ನಲ್ಲಿ ಎದುರ್ಕಲ ಈಶ್ವರ್‌ ಭಟ್‌ ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಿದ್ದಾರೆ. ಇದರ ವಿಚಾರಣೆ ನಡೆಸಿದ್ದ ನ್ಯಾಯಾಲಯವು 2019ರ ಜೂನ್‌ 27ರಂದು ಅರ್ಜಿದಾರರ ಮನವಿ ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ಮಧ್ಯಂತರ ಆದೇಶ ಮಾಡಿತ್ತು. ಈ ಸಂಬಂಧ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಲು ಅರ್ಜಿದಾರರಿಗೆ ಅನುಮತಿಸಿತ್ತು.

ಕರ್ನಾಟಕ ಹೈಕೋರ್ಟ್‌ನ ಮಧ್ಯಂತರ ಆದೇಶ ಪ್ರಶ್ನಿಸಿ ರಾಮಚಂದ್ರಾಪುರ ಮಠ ಸಲ್ಲಿಸಿರುವ ವಿಶೇಷ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಯು ಯು ಲಲಿತ್‌ ನೇತೃತ್ವದ ವಿಭಾಗೀಯ ಪೀಠವು 2020ರ ಫೆಬ್ರವರಿ 28ರಂದು ಹೈಕೋರ್ಟ್‌ ಆದೇಶದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ಮಾಡಿದೆ.

Also Read
[ರಾಘವೇಶ್ವರ ಶ್ರೀ ವಿರುದ್ಧದ ಅತ್ಯಾಚಾರ ಪ್ರಕರಣ] ತೀರ್ಪು ಮರುಪರಿಶೀಲನೆ ಕೋರಿದ್ದ ರಾಮಕಥಾ ಗಾಯಕಿ, ಸಿಐಡಿ ಮನವಿಗಳು ವಜಾ

ಈಚೆಗೆ ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 53ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯವು 2016ರ ಮಾರ್ಚ್‌ನಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಂತ್ರಸ್ತೆ ಮತ್ತು ಅಪರಾಧ ತನಿಖಾ ವಿಭಾಗ (ಸಿಐಡಿ) ಸಲ್ಲಿಸಿದ್ದ ಪ್ರತ್ಯೇಕ ಕ್ರಿಮಿನಲ್‌ ತೀರ್ಪು ಮರುಪರಿಶೀಲನಾ ಮನವಿಗಳನ್ನು ನ್ಯಾಯಮೂರ್ತಿ ವಿ ಶ್ರೀಶಾನಂದ ನೇತೃತ್ವದ ರಜಾಕಾಲೀನ ಏಕಸದಸ್ಯ ಪೀಠವು ತಿರಸ್ಕರಿಸಿತ್ತು.

Related Stories

No stories found.
Kannada Bar & Bench
kannada.barandbench.com