ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ರಾಮನಗರ ವಕೀಲರ ಧರಣಿ; ಫೆ.22ಕ್ಕೆ ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ

ಘಟನೆ ಕುರಿತು ಈಗಾಗಲೇ ನೀಡಿರುವ ದೂರನ್ನು ಆಧರಿಸಿ ವಕೀಲರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ರಾಮನಗರದಲ್ಲಿ ದಲಿತ ಸಂಘಟನೆಗಳು ತಮಟೆ ಚಳವಳಿ ನಡೆಸಿದವು.
ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ರಾಮನಗರ ವಕೀಲರ ಧರಣಿ; ಫೆ.22ಕ್ಕೆ ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ

ರಾಮನಗರ ಜಿಲ್ಲಾ ವಕೀಲರ ಸಂಘದ 40 ವಕೀಲರ ವಿರುದ್ಧ ಐಜೂರು ಠಾಣೆಯ ಪಿಎಸ್‌ಐ ಪ್ರಕರಣ ದಾಖಲಿಸಿರುವ ವಿಚಾರವು ಮಂಗಳವಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದು, ವಿಪಕ್ಷ ನಾಯಕರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಈ ನಡುವೆ ರಾಮನಗರ ಜಿಲ್ಲಾ ವಕೀಲರ ಪ್ರತಿಭಟನೆಯು ಹತ್ತನೇ ದಿನಕ್ಕೆ ಕಾಲಿರಿಸಿದೆ. ಇದೆಲ್ಲದರ ಮಧ್ಯೆ, ಬೆಂಗಳೂರು ವಕೀಲರ ಸಂಘವು ಗುರುವಾರ ಬೃಹತ್‌ ರ‍್ಯಾಲಿ ನಡೆಸುವ ನಿರ್ಣಯ ಕೈಗೊಂಡಿರುವುದು ಪ್ರಕರಣದ ಕಾವು ಹೆಚ್ಚಾಗುವ ಸೂಚನೆ ನೀಡಿದೆ.

ಐಜೂರು ಠಾಣೆಯ ಪಿಎಸ್‌ಐ ಬಂಧಿಸಬೇಕು ಮತ್ತು ನ್ಯಾಯಾಧೀಶರ ವಿರುದ್ಧ ಜಾಲತಾಣದಲ್ಲಿ ಬರೆದಿರುವ ವಕೀಲ ಚಾಂದ್‌ ಪಾಷಾನನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಮಂಗಳವಾರ ವಿಧಾನಸಭೆಯಲ್ಲಿ ಬಿಜೆಪಿ-ಜೆಡಿಎಸ್‌ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದೆ ಪ್ರತಿಭಟಿಸಿದರು.

ಈ ಸಂಬಂಧ ವಿಧಾನಸಭೆಯಲ್ಲಿ ಉತ್ತರಿಸಿದ ಗೃಹ ಸಚಿವ ಜಿ ಪರಮೇಶ್ವರ್‌ ಅವರು “ಚಾಂದ್‌ಪಾಷಾ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಪಿಎಸ್‌ಐ ಸಯ್ಯದ್‌ ತನ್ವೀರ್‌ ಹುಸೇನ್‌ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ. ಅದಾಗ್ಯೂ, ತನಿಖೆ ನಡೆಸಿ, ವರದಿ ನೀಡುವಂತೆ ಚನ್ನಪಟ್ಟಣ ಡಿವೈಎಸ್‌ಪಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು” ಎಂದರು. ಇದಕ್ಕೆ ಪ್ರತಿಪಕ್ಷದ ನಾಯಕರು ಒಪ್ಪದ ಹಿನ್ನೆಲೆಯಲ್ಲಿ, ಬುಧವಾರ ಮತ್ತೊಮ್ಮೆ ಉತ್ತರ ನೀಡುವುದಾಗಿ ಗೃಹ ಸಚಿವರು ಭರವಸೆ ನೀಡಿದ ನಂತರ ವಿಪಕ್ಷ ನಾಯಕರು ಪ್ರತಿಭಟನೆ ಕೈಬಿಟ್ಟರು.

ಸೋಮವಾರದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತಿರುವ ವಕೀಲರು, ತಮ್ಮ ಹೋರಾಟವನ್ನು ರಾಜ್ಯಮಟ್ಟಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದಾರೆ.

ಇದರ ಮಧ್ಯೆ, ಇಡೀ ಘಟನೆಗೆ ಕಾರಣವಾದ ವಕೀಲ ಚಾಂದ್‌ ಪಾಷ ಅವರ ಫೇಸ್‌ಬುಕ್ ಪೋಸ್ಟ್ ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಿ ಎಂದು ಮನವಿ ನೀಡಲು ಫೆಬ್ರವರಿ 6ರಂದು ಜಿಲ್ಲಾ ವಕೀಲರ ಸಂಘದ ಬಳಿ ತೆರಳಿದ್ದ ದಲಿತ ಮುಖಂಡರು ವಕೀಲರ ವಿರುದ್ಧ ಜಾತಿನಿಂದನೆ ಆರೋಪ ಮಾಡಿದ್ದಾರೆ. ಘಟನೆ ಕುರಿತು ಈಗಾಗಲೇ ನೀಡಿರುವ ದೂರಿನ ಮೇರೆಗೆ, ವಕೀಲರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ರಾಮನಗರದಲ್ಲಿ ತಮಟೆ ಚಳವಳಿ ನಡೆಸಿದರು.

ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಮುಖಂಡರು, ಹೆಚ್ಚುವರಿ ಜಿಲ್ಲಾಧಿಕಾರಿ ಮತ್ತು ಉಪ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು. ಅಲ್ಲದೆ, ದೂರು ಕೊಟ್ಟರೂ ಎಫ್‌ಐಆರ್ ದಾಖಲಿಸದ ಐಜೂರಿನ ಪಿಎಸ್‌ಐ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅಹೋರಾತ್ರಿ ಧರಣಿ ನಿರತ ವಕೀಲರನ್ನು ಜೆಡಿಎಸ್ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಮತ್ತು ಬಿಜೆಪಿ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು, ಸೋಮವಾರ ರಾತ್ರಿ ಭೇಟಿ ಮಾಡುವುದರೊಂದಿಗೆ ವಕೀಲರ ಹೋರಾಟಕ್ಕೆ ರಾಜಕೀಯ ತಿರುವು ಸಿಕ್ಕಿತ್ತು. ಬುಧವಾರ ವಿಧಾನ ಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ವಕೀಲರನ್ನು ಭೇಟಿ ಮಾಡಿ ಬೆಂಬಲ ವ್ಯಕ್ತಪಡಿಸಿದರು.

ಪ್ರಕರಣದ ಹಿನ್ನೆಲೆ: ಉತ್ತರಪ್ರದೇಶದ ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅಲ್ಲಿನ ಜಿಲ್ಲಾ ನ್ಯಾಯಾಲಯ ಜನವರಿ 31ರಂದು ಅವಕಾಶ ಕಲ್ಪಿಸಿ ಆದೇಶ ಮಾಡಿತ್ತು. ಇದಕ್ಕೆ ಆಕ್ಷೇಪಿಸಿ ರಾಮನಗರ ವಕೀಲರ ಸಂಘದ ಸದಸ್ಯ ಹಾಗೂ ಎಸ್‌ಡಿಪಿಐ ಮುಖಂಡ ಚಾಂದ್‌ ಪಾಷಾ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು.

ಇದನ್ನು ಆಧರಿಸಿ ಬಿಜೆಪಿ ಮುಖಂಡ ಪಿ ಶಿವಾನಂದ ಅವರು ಪಾಷ ವಿರುದ್ಧ ರಾಮನಗರ ಪುರ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಪಾಷ ವಿರುದ್ಧ ದಾಖಲಾದ ಪ್ರಕರಣದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾ ವಕೀಲರ ಸಂಘವು ಅವರ ವಿರುದ್ಧ ಕ್ರಮ ಕೈಗೊಳ್ಳಲು ಫೆಬ್ರವರಿ 6ರಂದು ಸಂಜೆ ಸರ್ವ ಸದಸ್ಯರ ಸಭೆ ಕರೆಯಿತು.  ಆಗ, ದಲಿತ ಮತ್ತು ಪ್ರಗತಿಪರ ಮುಖಂಡರ ನಿಯೋಗವು ರಾಮನಗರ ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿಯನ್ನು ಭೇಟಿ ಮಾಡಿ, ಪ್ರಕರಣವನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳುವಂತೆ ಮನವಿ ಸಲ್ಲಿಸಿತು.

ಈ ವೇಳೆ ಕೆಲ ವಕೀಲರು ಪಾಷ ಪರವಾಗಿ ಬಂದಿದ್ದ ಮುಖಂಡರನ್ನು ಪ್ರಶ್ನಿಸಿದಾಗ, ವಾಗ್ವಾದ ನಡೆಯಿತು. ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಆವರಣಕ್ಕೆ ಅತಿಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ಆರೋಪಿಸಿ, ವಕೀಲರ ಸಂಘದ ಅಧ್ಯಕ್ಷರು ಅಂದು ರಾತ್ರಿ ನೀಡಿದ ದೂರಿನ ಮೇರೆಗೆ, ಪಾಷ ಮತ್ತು 40 ಮುಖಂಡರ ವಿರುದ್ಧ ಐಜೂರು ಠಾಣೆ ಪಿಎಸ್‌ಐ ತನ್ವೀರ್ ಹುಸೇನ್ ಎಫ್‌ಐಆರ್ ದಾಖಲಿಸಿಕೊಂಡಿದ್ದರು.

ಇದಾದ ಮಾರನೇಯ ದಿನ ವಕೀಲರ ಸಂಘಕ್ಕೆ ತೆರಳಿದ್ದವರ ಪೈಕಿ ರಫೀಕ್ ಖಾನ್ ಎಂಬುವರು, ವಕೀಲರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ನೀಡಿದ ದೂರಿನ ಮೇರೆಗೆ ಪಿಎಸ್‌ಐ ಸಯ್ಯದ್‌ ಅವರು 40 ವಕೀಲರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದರಿಂದ ಕೆರಳಿದ ವಕೀಲರು ಪಿಎಸ್‌ಐ ಅಮಾನತಿಗೆ ಆಗ್ರಹಿಸಿ ಧರಣಿ ನಡೆಸುತ್ತಿದ್ದಾರೆ.

Related Stories

No stories found.
Kannada Bar & Bench
kannada.barandbench.com