[ಜಾರಕಿಹೊಳಿ ಪ್ರಕರಣ] ಎಸ್‌ಐಟಿ ಸಿಂಧುತ್ವ, ಬ್ಲ್ಯಾಕ್‌ಮೇಲ್‌ ಪ್ರಕರಣಗಳ ವಿಚಾರಣೆ ಮಾ. 22ಕ್ಕೆ ಮುಂದೂಡಿದ ಹೈಕೋರ್ಟ್‌

ರೋಸ್ಟರ್‌ ಪ್ರಕಾರ ಇಂದು ಮೊದಲ ಬಾರಿಗೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠದ ಮುಂದೆ ಸಂತ್ರಸ್ತೆ ಸಲ್ಲಿಸಿರುವ ಮನವಿಗಳು ವಿಚಾರಣೆಗೆ ಪಟ್ಟಿಯಾಗಿದ್ದವು.
Ramesh Jarakiholi and Karnataka High Court
Ramesh Jarakiholi and Karnataka High Court

ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಸಿ ಡಿ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿರುವುದರ ಸಿಂಧುತ್ವ ಮತ್ತು ಬೆಂಗಳೂರಿನ ಸದಾಶಿವನಗರದಲ್ಲಿ ಜಾರಕಿಹೊಳಿ ಅವರು ತಮ್ಮ ಆಪ್ತರ ಮೂಲಕ ದಾಖಲಿಸಿರುವ ಬ್ಲ್ಯಾಕ್‌ಮೇಲ್‌ ಆರೋಪ ಒಳಗೊಂಡಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಸಂತ್ರಸ್ತೆ ಸಲ್ಲಿಸಿರುವ ಪ್ರತ್ಯೇಕ ಮನವಿಗಳ ವಿಚಾರಣೆಯನ್ನು ಸೋಮವಾರ ಕರ್ನಾಟಕ ಹೈಕೋರ್ಟ್‌ ಮಾರ್ಚ್‌ 22ಕ್ಕೆ ಮುಂದೂಡಿದೆ.

ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯ ಪೀಠವು ಮಾರ್ಚ್‌ 10ರಂದು ರೋಸ್ಟರ್‌ ಪೀಠದ ಮುಂದೆ ಮನವಿಗಳನ್ನು ವಿಚಾರಣೆಗೆ ಪಟ್ಟಿ ಮಾಡಲು ಆದೇಶಿಸಿತ್ತು. ಅದರಂತೆಯೇ ಸದರಿ ಮನವಿಗಳನ್ನು ಇಂದು ಮೊದಲ ಬಾರಿಗೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಪಟ್ಟಿ ಮಾಡಲಾಗಿತ್ತು.

ಪ್ರಕರಣದಲ್ಲಿ ಸಂತ್ರಸ್ತೆಯನ್ನು ಪ್ರತಿನಿಧಿಸಿರುವ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಅವರ ಸಹಾಯಕ ವಕೀಲರು ಇಂದು ವಿಚಾರಣೆಯಲ್ಲಿ ಭಾಗಿಯಾಗಲು ಅನನುಕೂಲವಿರುವ ವಿಚಾರವನ್ನು ಪೀಠದ ಗಮನಕ್ಕೆ ತಂದರು. ಇದನ್ನು ಪರಿಗಣಿಸಿದ ಪೀಠವು ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದೆ.

Also Read
ಜಾರಕಿಹೊಳಿ ಪ್ರಕರಣ: ಎಸ್‌ಐಟಿ ಸಿಂಧುತ್ವ, ಬ್ಲ್ಯಾಕ್‌ಮೇಲ್‌ ಪ್ರಕರಣಗಳನ್ನು ರೋಸ್ಟರ್‌ ಪೀಠಕ್ಕೆ ಮರಳಿಸಿದ ಹೈಕೋರ್ಟ್‌

ವಿಚಾರಣಾಧೀನ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದ ಹೈಕೋರ್ಟ್‌ ಆದೇಶಕ್ಕೆ ಫೆಬ್ರವರಿ 18ರಂದು ಸುಪ್ರೀಂ ಕೋರ್ಟ್‌ ತಡೆ ನೀಡಿದ್ದು, ಮುಂದಿನ ವಿಚಾರಣೆಯಲ್ಲಿ ಎಸ್‌ಐಟಿ ಸಾಂವಿಧಾನಿಕ ಸಿಂಧುತ್ವ ನಿರ್ಧರಿಸಲು ಹೈಕೋರ್ಟ್‌ಗೆ ಆದೇಶ ಮಾಡಿತ್ತು.

ಇದನ್ನು ಪರಿಗಣಿಸಿದ್ದ ಸಿಜೆ ಅವಸ್ಥಿ ಅವರ ನೇತೃತ್ವದ ವಿಭಾಗೀಯ ಪೀಠವು ಎಸ್‌ಐಟಿ ರಚನೆ ಮತ್ತು ಸರ್ಕಾರದ ಆದೇಶವನ್ನು ಸಂತ್ರಸ್ತೆ ಪ್ರಶ್ನಿಸಿದ್ದಾರೆ. ಸಂತ್ರಸ್ತೆಯೇ ನ್ಯಾಯಾಲಯದ ಮುಂದೆ ಬಂದಿರುವುದರಿಂದ ಹಾಗೂ ಪಿಐಎಲ್‌ನಲ್ಲೂ ಒಂದೇ ರೀತಿಯ ಕೋರಿಕೆಗಳು ಇರುವುದರಿಂದ ಪಿಐಎಲ್‌ ಬಾಕಿ ಉಳಿಸಿಕೊಳ್ಳುವ ಅಗತ್ಯವಿಲ್ಲ. ಪಿಐಎಲ್‌ ಅನ್ನು ವಜಾ ಮಾಡುವುದಿಲ್ಲ. ಬದಲಿಗೆ ಸಂತ್ರಸ್ತೆಯ ಮನವಿಗಳ ಜೊತೆಯೇ ಪಿಐಎಲ್‌ ಅನ್ನು ರೋಸ್ಟರ್‌ ಪೀಠಕ್ಕೆ ಇತ್ಯರ್ಥಪಡಿಸಲು ರವಾನಿಸಲಾಗುವುದು ಎಂದು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಮನವಿಗಳು ನ್ಯಾಯಮೂರ್ತಿ ನಾಗಪ್ರಸನ್ನ ಅವರ ನೇತೃತ್ವದ ಪೀಠದ ಮುಂದೆ ವಿಚಾರಣೆಗೆ ಬಂದಿದ್ದವು.

Related Stories

No stories found.
Kannada Bar & Bench
kannada.barandbench.com