[ಜಾರಕಿಹೊಳಿ ಪ್ರಕರಣ] ಎಸ್‌ಐಟಿ ರಚನೆಯ ಸಾಂವಿಧಾನಿಕ ಸಿಂಧುತ್ವ ನಿರ್ಧರಿಸದೇ ವರದಿ ಸಲ್ಲಿಸಲು ಅನುಮತಿಸಬಾರದು: ಜೈಸಿಂಗ್‌
Sr Counsel Indira Jaising, Advocate Genaral Prabhuling Navadagi and Karnataka HC

[ಜಾರಕಿಹೊಳಿ ಪ್ರಕರಣ] ಎಸ್‌ಐಟಿ ರಚನೆಯ ಸಾಂವಿಧಾನಿಕ ಸಿಂಧುತ್ವ ನಿರ್ಧರಿಸದೇ ವರದಿ ಸಲ್ಲಿಸಲು ಅನುಮತಿಸಬಾರದು: ಜೈಸಿಂಗ್‌

“ಅಂದಿನ ಗೃಹ ಸಚಿವರಾಗಿದ್ದ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ತಮಗೆ ವರದಿ ಸಲ್ಲಿಸುವ ಸಂಬಂಧ ಎಸ್‌ಐಟಿ ರಚನೆಗೆ ಆದೇಶಿಸಿದ್ದರು. ಗೃಹ ಸಚಿವರು ತಮಗೆ ವರದಿ ಸಲ್ಲಿಸುವಂತೆ ಆದೇಶ ಮಾಡಿರುವುದನ್ನು ನ್ಯಾಯಾಲಯಕ್ಕೆ ಸಲ್ಲಿಸಬಹುದೇ? ಎಂದ ಜೈಸಿಂಗ್‌.

ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಸಿ ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳವು (ಎಸ್‌ಐಟಿ) ಸಿದ್ಧಪಡಿಸಿರುವ ವರದಿಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸುವುದಕ್ಕೂ ಮುನ್ನ ಕೆಲವು ಪ್ರಮುಖ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ ಎಂದು ಕರ್ನಾಟಕ ಹೈಕೋರ್ಟ್‌ ಸೋಮವಾರ ಹೇಳಿದ್ದು, ವಿಚಾರಣೆಯನ್ನು ಅಕ್ಟೋಬರ್‌ 7ಕ್ಕೆ ಮುಂದೂಡಿತು.

ಎಸ್‌ಐಟಿ ಸಿಂಧುತ್ವ ಪ್ರಶ್ನಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿ, ಎಸ್‌ಐಟಿ ವಜಾ ಮಾಡಿ ಮರು ತನಿಖೆಗೆ ಆದೇಶಿಸುವಂತೆ ಕೋರಿರುವ ಸಿ ಡಿ ಹಗರಣದ ಸಂತ್ರಸ್ತ ಯುವತಿಯ ಅರ್ಜಿ ಹಾಗೂ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಆರೋಪಿ ರಮೇಶ ಜಾರಕಿಹೊಳಿ ದಾಖಲಿಸಿರುವ ಮನವಿಯನ್ನು ವಜಾ ಮಾಡುವಂತೆ ಸಂತ್ರಸ್ತೆಯು ವಕೀಲ ಸಂಕೇತ್‌ ಏಣಗಿ ಮೂಲಕ ಸಲ್ಲಿಸಿರುವ ಮೂರು ಪ್ರತ್ಯೇಕ ಮನವಿಗಳ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಪ್ರಕರಣ ವಿಚಾರಣೆಗೆ ಬರುತ್ತಿದ್ದಂತೆ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು “ಹೈಕೋರ್ಟ್‌ನ ಮುಂದಿನ ಆದೇಶಕ್ಕೆ ಒಳಪಟ್ಟು ಸಿ ಡಿ ಪ್ರಕರಣಕ್ಕೆ ಸಂಬಂಧಿಸಿದ ಎಸ್‌ಐಟಿ ವರದಿಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿಸಬೇಕು. ಈ ಸಂಬಂಧ ನ್ಯಾಯಾಲಯದ ಅನುಮತಿ ಇಲ್ಲದೇ ವರದಿ ಸಲ್ಲಿಸುವಂತಿಲ್ಲ ಎಂದು ಹೈಕೋರ್ಟ್‌ ಹಿಂದೆ ಹೊರಡಿಸಿರುವ ಮಧ್ಯಂತರ ಆದೇಶವನ್ನು ತೆರೆವುಗೊಳಿಸಬೇಕು” ಎಂದು ಪುನರುಚ್ಚರಿಸಿದರು.

ಇದಕ್ಕೆ ಆಕ್ಷೇಪಿಸಿದ ಸಂತ್ರಸ್ತೆ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌, “ಎಸ್‌ಐಟಿ ರಚನೆಯ ಸಿಂಧುತ್ವದ ಪ್ರಶ್ನೆ ನ್ಯಾಯಾಲಯದ ಮುಂದಿದೆ. ಒಂದೊಮ್ಮೆ ಎಸ್‌ಐಟಿ ರಚನೆ ಅಸಿಂಧು ಎಂದು ಹೇಳುವ ಮೂಲಕ ಅರ್ಜಿದಾರರ ಕೋರಿಕೆಯನ್ನು ನ್ಯಾಯಾಲಯ ಎತ್ತಿ ಹಿಡಿದರೆ ಎಲ್ಲವೂ ನಿರರ್ಥಕವಾಗಲಿದೆ. ಹೀಗಾಗಿ, ಎಸ್‌ಐಟಿ ರಚನೆಯ ಕಾನೂನಾತ್ಮಕ ಮತ್ತು ಸಾಂವಿಧಾನಿಕ ಪ್ರಶ್ನೆಯ ಕುರಿತು ಮೊದಲು ನಿರ್ಧಾರವಾಗಬೇಕಿದೆ" ಎಂದರು.

ಮುಂದುವರೆದು, "ಸುದೀರ್ಘ ರಜೆಯಲ್ಲಿದ್ದ ಎಸ್‌ಐಟಿ ಮುಖಸ್ಥ ಸೌಮೇಂದು ಮುಖರ್ಜಿ ಅವರು ವರದಿ ಪರಿಶೀಲಿಸಿಲ್ಲ. ವರದಿ ಪರಿಶೀಲಿಸುವುದಿಲ್ಲ ಎಂಬ ಮುಖರ್ಜಿ ಅವರ ಹೇಳಿಕೆಯನ್ನು ನ್ಯಾಯಾಲಯವು ದಾಖಲಿಸಿಕೊಂಡು, ಇದು ಗಂಭೀರ ಪರಿಣಾಮಗಳನ್ನು ಉಂಟು ಮಾಡಬಹುದು ಎಂದು ಹೇಳಿದೆ. ಇದೇ ಪ್ರಕರಣದಲ್ಲಿ ದೂರೊಂದಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಮುಖಸ್ಥರು ಗೈರಾಗಿದ್ದರೂ ʼಬಿʼ ರಿಪೋರ್ಟ್‌ ಸಲ್ಲಿಸಲಾಗಿದೆ. ಸೌಮೇಂದು ಮುಖರ್ಜಿ ಅವರ ಅನುಪಸ್ಥಿತಿಯಲ್ಲಿ ಸಂದೀಪ್‌ ಪಾಟೀಲ್‌ ಅವರಿಗೆ ತನಿಖೆಯ ಉಸ್ತುವಾರಿ ವಹಿಸಿರುವುದರ ಕುರಿತು ಯಾವುದೇ ಆದೇಶ ಮಾಡಲಾಗಿಲ್ಲ. ಎಸ್‌ಐಟಿ ಮುಖಸ್ಥರ ಗೈರಿನಲ್ಲಿ ತನಿಖೆ ಮುಂದುವರಿಸಬಹುದೇ?” ಎಂಬ ಪ್ರಶ್ನೆಗಳಿಗೆ ಮೊದಲು ಉತ್ತರ ಕಂಡುಕೊಳ್ಳಬೇಕಿದೆ ಎಂದು ವಾದಿಸಿದರು.

Also Read
[ಜಾರಕಿಹೊಳಿ ಪ್ರಕರಣ] ಎಸ್‌ಐಟಿ ಅಂತಿಮ ವರದಿ ಸಲ್ಲಿಸುವ ವಿಚಾರ: ಇಲ್ಲಿದೆ ಜೈಸಿಂಗ್‌-ನಾವದಗಿ ವಾದ ಪ್ರತಿವಾದದ ವಿವರ

“ಅಂದಿನ ಗೃಹ ಸಚಿವರಾಗಿದ್ದ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮಗೆ ವರದಿ ಸಲ್ಲಿಸುವ ಸಂಬಂಧ ಎಸ್‌ಐಟಿ ರಚನೆಗೆ ಆದೇಶಿಸಿದ್ದರು. ಗೃಹ ಸಚಿವರು ತಮಗೆ ವರದಿ ಸಲ್ಲಿಸುವಂತೆ ಆದೇಶ ಮಾಡಿರುವುದನ್ನು ನ್ಯಾಯಾಲಯಕ್ಕೆ ಸಲ್ಲಿಸಬಹುದೇ? ಇಂಥ ಪರಿಸ್ಥಿತಿಯಲ್ಲಿ ವಿಚಾರಣಾಧೀನ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಅವಕಾಶ ನೀಡಿ ಎಂದು ಕೋರುವುದು ಸೂಕ್ತವಲ್ಲ” ಎಂದು ಆಕ್ಷೇಪಿಸಿದರು. ಇದಕ್ಕಾಗಿ ಜೈಸಿಂಗ್‌ ಅವರು ಆಗಿಂದಾಗ್ಗೆ ನ್ಯಾಯಾಲಯವು ತನ್ನ ಆದೇಶದಲ್ಲಿ ದಾಖಲಿಸಿರುವ ವಿಚಾರಗಳನ್ನು ಪ್ರಸ್ತಾಪಿಸಿದರು.

ಈ ಮಧ್ಯೆ, ನಾವದಗಿ ಅವರು “ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಗಿದೆ. ಸಂತ್ರಸ್ತೆಯ ಹಕ್ಕುಗಳೂ ಇದರಲ್ಲಿ ಸೇರಿವೆ. ಸತ್ಯವನ್ನು ಹೊರತರಬೇಕಿದೆ. ಹೀಗಾಗಿ, ಹಿಂದಿನ ಆದೇಶದಲ್ಲಿ ನ್ಯಾಯಾಲಯವು ಮಧ್ಯಂತರ ಆದೇಶ ತೆರವುಗೊಳಿಸುವುದರ ಬಗ್ಗೆ ಪರಿಶೀಲಿಸುವುದಾಗಿ ಹೇಳಿತ್ತು. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು” ಎಂದು ಕೋರಿದರು.

Related Stories

No stories found.