[ರಮೇಶ ಜಾರಕಿಹೊಳಿ ಸಿ ಡಿ ಪ್ರಕರಣ] ಇಂದಿರಾ ಜೈಸಿಂಗ್‌ ಅನುಪಸ್ಥಿತಿ; ವಿಚಾರಣೆ ನಾಳೆಗೆ ಮುಂದೂಡಿಕೆ

ಸುಪ್ರೀಂ ಕೋರ್ಟ್‌ನಲ್ಲಿ ಇಂದಿರಾ ಜೈಸಿಂಗ್‌ ಅವರಿಗೆ ಪೂರ್ವನಿಯೋಜಿತವಾದ ತುರ್ತು ಪ್ರಕರಣ ಇರುವುದರಿಂದ ಅವರು ಇಂದಿನ ವಿಚಾರಣೆಯಲ್ಲಿ ಹಾಜರಾಗಲು ಆಗುತ್ತಿಲ್ಲ. ಪ್ರಕರಣವನ್ನು ನಾಳೆಗೆ ಪಟ್ಟಿ ಮಾಡುವಂತೆ ಪೀಠವನ್ನು ಕೋರಲಾಯಿತು.
Ramesh Jarakiholi and Karnataka HC
Ramesh Jarakiholi and Karnataka HC
Published on

ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿ ಡಿ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವ ಯುವತಿ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಲಾಗಿದೆ.

ಜಾರಕಿಹೊಳಿ ಸಿ ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಎಸ್‌ಐಟಿ ಬದಲಿಗೆ ಕೇಂದ್ರೀಯ ತನಿಖಾ ಸಂಸ್ಥೆಗೆ (ಸಿಬಿಐ) ವರ್ಗಾಯಿಸುವಂತೆ ಕೋರಿ ಗೀತಾ ಮಿಶ್ರಾ ಎಂಬವರು ವಕೀಲ ಜಿ ಆರ್‌ ಮೋಹನ್‌ ಮೂಲಕ ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಿದ್ದಾರೆ. ಎಸ್‌ಐಟಿ ವಜಾ ಮಾಡಿ, ಮರು ತನಿಖೆಗೆ ಆದೇಶಿಸುವಂತೆ ಕೋರಿ ಸಂತ್ರಸ್ತೆಯು ಸಹ ಮತ್ತೊಂದು ಮನವಿ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಸಂತ್ರಸ್ತೆಯನ್ನು ಇಂದಿರಾ ಜೈಸಿಂಗ್‌ ಪ್ರತಿನಿಧಿಸಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿ ಆರೋಪಿ ರಮೇಶ ಜಾರಕಿಹೊಳಿ ದಾಖಲಿಸಿರುವ ದೂರನ್ನು ವಜಾ ಮಾಡುವಂತೆ ಸಂತ್ರಸ್ತೆಯು ವಕೀಲ ಸಂಕೇತ್‌ ಏಣಗಿ ಅವರ ಮೂಲಕ ಮನವಿಯನ್ನು ಸಲ್ಲಸಿದ್ದಾರೆ. ಪ್ರತ್ಯೇಕವಾದ ಈ ಮೂರೂ ಮನವಿಗಳ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್ ಅವರಿದ್ದ ವಿಭಾಗೀಯ ಪೀಠ ಮಂಗಳವಾರ ನಡೆಸಿತು.

ಪ್ರಕರಣ ಆರಂಭವಾಗುತ್ತಿದ್ದಂತೆ ಜೈಸಿಂಗ್‌ ಅವರ ಸಹಾಯಕ ವಕೀಲ ಮಾಯಾಂಕ್‌ ಜೈನ್‌ ಅವರು ಸುಪ್ರೀಂ ಕೋರ್ಟ್‌ನಲ್ಲಿ ಇಂದಿರಾ ಜೈಸಿಂಗ್‌ ಅವರಿಗೆ ಪೂರ್ವನಿಯೋಜಿತವಾದ ತುರ್ತು ಪ್ರಕರಣ ಇರುವುದರಿಂದ ಅವರು ಇಂದಿನ ವಿಚಾರಣೆಯಲ್ಲಿ ಹಾಜರಾಗಲು ಆಗುತ್ತಿಲ್ಲ. ದಯಮಾಡಿ ಪ್ರಕರಣವನ್ನು ನಾಳೆಗೆ ಪಟ್ಟಿ ಮಾಡುವಂತೆ ಪೀಠವನ್ನು ಕೋರಿದರು.

ಈ ಮಧ್ಯೆ, ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು “ಎಸ್‌ಐಟಿ ತನಿಖೆ ಪೂರ್ಣಗೊಳಿಸಿದ್ದು, ತನಿಖಾ ವರದಿಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು” ಎಂದು ಪುನರಚ್ಚರಿಸಿದ್ದರು.

Also Read
[ಜಾರಕಿಹೊಳಿ ಪ್ರಕರಣ] ವರದಿ ಒಪ್ಪುವುದು, ಮರು ತನಿಖೆಗೆ ಆದೇಶಿಸುವುದು ವಿಚಾರಣಾಧೀನ ನ್ಯಾಯಾಲಯಕ್ಕೆ ಬಿಟ್ಟ ವಿಚಾರ: ಎಜಿ

“ಸುಪ್ರೀಂ ಕೋರ್ಟ್‌ ಅಭಿನಂದನ್‌ ಝಾ ವರ್ಸಸ್‌ ಇತರರು ಮತ್ತು ದಿನೇಶ್‌ ಮಿಶ್ರಾ ಪ್ರಕರಣದಲ್ಲಿ ಕಾನೂನನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿದ್ದು, ಜಾರಕಿಹೊಳಿ ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ವರದಿಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಲು ಎಸ್‌ಐಟಿಗೆ ಅವಕಾಶ ಮಾಡಿಕೊಡಬೇಕು. ಆ ಮೂಲಕ ಕಾನೂನು ತನ್ನ ಕೆಲಸ ಮಾಡಲು ಅನುವು ಮಾಡಬೇಕು” ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಗೀತಾ ಮಿಶ್ರಾ ಅವರು ಸಲ್ಲಿಸಿರುವ ಮನವಿಯು ನಿರ್ವಹಣೆಗೆ ಅರ್ಹವಾಗಿಲ್ಲ. ಪ್ರಕರಣದಲ್ಲಿ ಗೀತಾ ಮಿಶ್ರಾ ಅವರು ದೂರುದಾರರು ಅಲ್ಲ, ಸಾಕ್ಷಿಯೂ ಅಲ್ಲ. ಒಟ್ಟಾರೆ ಪ್ರಕರಣದಲ್ಲಿ ಅವರು ಏನೇನೂ ಅಲ್ಲ ಎಂದರು.

Kannada Bar & Bench
kannada.barandbench.com