ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಲೈಂಗಿಕ ಹಗರಣದ ಸಿ ಡಿ ಪ್ರಕರಣದ ತನಿಖೆಯನ್ನು ಈ ಹಂತದಲ್ಲಿ ವಿಶೇಷ ತನಿಖಾ ದಳದಿಂದ (ಎಸ್‌ಐಟಿ) ಬೇರೊಂದು ತನಿಖಾ ಸಂಸ್ಥೆಗೆ ವರ್ಗಾಯಿಸುವ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಶನಿವಾರ ಹೇಳಿದೆ.
ಎಸ್‌ಐಟಿ ಸಲ್ಲಿಸಿರುವ ಮೂರು ಸ್ಥಿತಿಗತಿ ವರದಿಯನ್ನು ಪರಿಶೀಲಿಸಿದ ಬಳಿಕ ತನಿಖೆಯನ್ನು ವರ್ಗಾಯಿಸುವ ಅಗತ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠವು ಹೇಳಿದೆ.
ರಮೇಶ್ ಜಾರಕಿಹೊಳಿ ಅವರ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಮೂರು ದೂರುಗಳ ಕುರಿತು ಸೌಮೇಂದು ಮುಖರ್ಜಿ ನೇತೃತ್ವದ ಎಸ್‌ಐಟಿ ತನಿಖೆ ನಡೆಸಿದ್ದು, ಅದು ಸ್ಥಿತಿಗತಿ ವರದಿ ಸಲ್ಲಿಸಿದೆ.
ರಮೇಶ್ ಜಾರಕಿಹೊಳಿ ತಮ್ಮ ವಿರುದ್ದದ ಲೈಂಗಿಕ ಹಗರಣದ ಆರೋಪದ ಹಿನ್ನೆಲೆಯಲ್ಲಿ ದಾಖಲಿಸಿರುವ ಮಾನಹಾನಿ ದೂರುಗಳನ್ನು ತನಿಖೆ ನಡೆಸಲು ಬೆಂಗಳೂರು ಪೊಲೀಸ್ ಆಯುಕ್ತರು ಎಸ್‌ಐಟಿ ರಚಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಮನವಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.
ಮಹಿಳೆಯ ಜೊತೆ ರಮೇಶ್ ಜಾರಕಿಹೊಳಿ ಇದ್ದರು ಎನ್ನಲಾದ ವಿಡಿಯೊ ತುಣುಕುಗಳನ್ನು ಒಳಗೊಂಡ ಸಿಡಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಲಾಗಿತ್ತು. ತನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ ಎಂದು ಆರೋಪಿಸಿ ರಮೇಶ ಜಾರಕಿಹೊಳಿ ಅವರು ಅನಾಮಿಕರ ವಿರುದ್ಧ ದೂರು ದಾಖಲಿಸಿದ್ದರು. ಇದನ್ನು ಆಧರಿಸಿ ರಾಜ್ಯ ಸರ್ಕಾರವು ಎಸ್‌ಐಟಿ ರಚಿಸಿತ್ತು. ಹೀಗಾಗಿ ಈ ಅರ್ಜಿ ಸಲ್ಲಿಸಲಾಗಿತ್ತು. ಸಿಆರ್‌ಪಿಸಿ ಅಡಿ ಲೈಂಗಿಕ ದೌರ್ಜನ್ಯ ಆರೋಪದ ತನಿಖೆ ನಡೆಸಲು ಪೊಲೀಸರಿಗೆ ನಿರ್ದೇಶಿಸುವಂತೆಯೂ ಮನವಿಯಲ್ಲಿ ಕೋರಲಾಗಿತ್ತು.
ಜಾರಕಿಹೊಳಿ ಪ್ರಕರಣವನ್ನು ಎಸ್‌ಐಟಿಯಿಂದ ವಿಶೇಷ ತನಿಖಾ ಸಂಸ್ಥೆಗೆ ವರ್ಗಾಯಿಸುವಂತೆ ಮನವಿಯೊಂದರಲ್ಲಿ ನಿರ್ದಿಷ್ಟವಾಗಿ ಕೋರಲಾಗಿತ್ತು.
ಟಿವಿಯಲ್ಲಿ ಅಶ್ಲೀಲ ವಿಚಾರ ಪ್ರಸಾರ ಮಾಡಿದ್ದಕ್ಕಾಗಿ ಮಾಧ್ಯಮಗಳ ವಿರುದ್ಧ ಯಾವರೀತಿಯ ಕ್ರಮ ಕೈಗೊಳ್ಳಬಹುದು ಎಂಬುದನ್ನು ಕಾನೂನಿನ ನಿಬಂಧನೆಯಡಿಯಲ್ಲಿ ತೋರಿಸುವಂತೆ ನ್ಯಾಯಾಲಯವು ಮೌಖಿಕವಾಗಿ ಅರ್ಜಿದಾರರಿಗೆ ವಿಚಾರಣೆ ವೇಳೆ ಸೂಚಿಸಿತು.
“ಸರ್ಕಾರವು ಶಾಸನಬದ್ಧವಾಗಿ ಕ್ರಮ ಕೈಗೊಳ್ಳಲು ಇರುವ ಅಧಿಕಾರದ ಬಗ್ಗೆ ನಮಗೆ ತೋರಿಸಿ (ಅಶ್ಲೀಲ ಮಾಹಿತಿ ಪ್ರಸಾರ ಮಾಡುವ ಮಾಧ್ಯಮಗಳ ವಿರುದ್ಧ)… ನಾವು ಖಂಡಿತವಾಗಿ ಆದೇಶ ಹೊರಡಿಸುತ್ತೇವೆ. ಇದೆಲ್ಲವನ್ನೂ ನಿಲ್ಲಿಸಿ... ಮಾಧ್ಯಮಗಳು ಸುದ್ದಿ ಪ್ರಸಾರ ಮಾಡದಂತೆ ತಡೆಯುವ ಅಧಿಕಾರ ಎಲ್ಲಿದೆ?” ಎಂದು ನ್ಯಾಯಾಲಯವು ವಿಚಾರಣೆ ವೇಳೆ ತಿಳಿಸಿತು.
ವಿಚಾರಣೆಯನ್ನು ಮೇ 31ಕ್ಕೆ ಮುಂದೂಡಲಾಗಿದೆ.