ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣ: ಇಬ್ಬರು ಆರೋಪಿಗಳನ್ನು 10 ದಿನ ಪೊಲೀಸ್‌ ಕಸ್ಟಡಿಗೆ ನೀಡಿದ ಎನ್‌ಐಎ ನ್ಯಾಯಾಲಯ

ಎನ್‌ಐಎ ಪೊಲೀಸರ ವಾದ ಆಲಿಸಿದ ವಿಶೇಷ ನ್ಯಾಯಾಲಯವು ಇಬ್ಬರು ಆರೋಪಿಗಳನ್ನು ಏಪ್ರಿಲ್‌ 22ರವರೆಗೆ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶಿಸಿದೆ.
Rameshwaram café
Rameshwaram café

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿನ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಪ್ರಮುಖ ಆರೋಪಿಗಳು ಎನ್ನಲಾದ ಮುಸಾವೀರ್ ಹುಸೈನ್‌ ಶಾಜೀಬ್‌ ಮತ್ತು ಅಬ್ದುಲ್‌ ಮಥೀನ್‌ ತಾಹಾ ಅವರನ್ನು ಎನ್‌ಐಎ ವಿಶೇಷ ನ್ಯಾಯಾಲಯವು 10 ದಿನ ಎನ್‌ಐಎ ಕಸ್ಟಡಿಗೆ ನೀಡಿದೆ.

ಪಶ್ಚಿಮ ಬಂಗಾಳದ ಕೋಲ್ಕತ್ತಾ ಸಮೀಪದ ಪೂರ್ವ ಮೇದಿನಿಪುರ ಜಿಲ್ಲೆಯಲ್ಲಿ ಶುಕ್ರವಾರ ಎನ್‌ಐಎ ಪೊಲೀಸರು ಮುಸಾವೀರ್ ಹುಸೈನ್‌ ಶಾಜೀಬ್‌ ಮತ್ತು ಅಬ್ದುಲ್‌ ಮಥೀನ್‌ ತಾಹಾ ಎಂಬವರನ್ನು ಬಂಧಿಸಿದ್ದು, ಆರೋಪಿಗಳನ್ನು ಇಂದು ಬೆಂಗಳೂರಿನ ಕ್ರೀಡಾ ಗ್ರಾಮದಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯದ ಉಸ್ತುವಾರಿ ನ್ಯಾಯಾಧೀಶರಾದ ಸಿ ಬಿ ಸಂತೋಷ್‌ ಅವರ ಮನೆಯಲ್ಲಿ ಹಾಜರುಪಡಿಸಿದರು.

"ಎನ್‌ಐಎ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನಕುಮಾರ್‌ ಅವರು “ಆರೋಪಿಗಳು ಜನನಿಬಿಡ ಪ್ರದೇಶದಲ್ಲಿ ದುಷ್ಕೃತ್ಯ ಎಸಗಿದ್ದು, ಡಿಜಿಟಲ್‌ ದಾಖಲೆ ಪರಿಶೀಲಿಸಬೇಕಿದೆ. ಬಾಂಬ್‌ ತಯಾರಿಕೆಯ ವಸ್ತುಗಳನ್ನು ಎಲ್ಲಿಂದ ತರಿಸಲಾಗಿದೆ ಮತ್ತು ಬಾಂಬ್‌ ತಯಾರಿಕೆಯನ್ನು ಹೇಗೆ ಕಲಿತರು? ಆರೋಪಿಗಳಿಗೆ ಫಂಡಿಂಗ್‌ ಎಲ್ಲಿಂದ ಆಗಿದೆ ಎಂಬುದು ಸೇರಿದಂತೆ ಹಲವು ವಿಚಾರಗಳ ಕುರಿತು ತನಿಖೆ ನಡೆಸಬೇಕಿದೆ. ಹೀಗಾಗಿ, ಅವರನ್ನು 10 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಬೇಕು” ಎಂದು ಕೋರಿದರು.

ನ್ಯಾಯಾಧೀಶರು ಆರೋಪಿಗಳ ಕುರಿತು ಮಾಹಿತಿ ಪಡೆದರು. ಎನ್‌ಐಎ ಪೊಲೀಸರು ಯಾವುದೇ ಹಿಂಸೆ ನೀಡಿಲ್ಲ. ಮುಂದಿನ ದಿನಗಳಲ್ಲಿ ಪ್ರಕರಣಕ್ಕಾಗಿ ವಕೀಲರನ್ನು ನೇಮಿಸಿಕೊಳ್ಳುವುದಾಗಿ ಆರೋಪಿಗಳು ನ್ಯಾಯಾಲಯಕ್ಕೆ ತಿಳಿಸಿದರು. ಇದನ್ನು ಆಲಿಸಿದ ನ್ಯಾಯಾಲಯವು ಆರೋಪಿಗಳನ್ನು ಏಪ್ರಿಲ್‌ 22ರವರೆಗೆ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶಿಸಿತು.

ಮಾರ್ಚ್‌ 1ರಂದು ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಮಧ್ಯಾಹ್ನ 1ರ ಸುಮಾರಿಗೆ ಬಾಂಬ್‌ ಸ್ಫೋಟ ಮಾಡಲಾಗಿತ್ತು. ಮಾರ್ಚ್‌ 3ರಂದು ಪ್ರಕರಣವನ್ನು ಎನ್‌ಐಎಗೆ ವಹಿಸಲಾಗಿತ್ತು. ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ನಿಷೇಧ ಕಾಯಿದೆ ಮತ್ತು ಐಪಿಸಿ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ.

Kannada Bar & Bench
kannada.barandbench.com