ಕೊಹ್ಲಿ ಪುತ್ರಿಗೆ ಅತ್ಯಾಚಾರ ಬೆದರಿಕೆ: ಆರೋಪಿಯನ್ನು ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದ ಮುಂಬೈ ನ್ಯಾಯಾಲಯ

ಹೈದರಾಬಾದ್‌ನಲ್ಲಿ ಆರೋಪಿ ರಾಮ್‌ನಾಗೇಶ್‌ ಅಕುಬಥಿನಿಯನ್ನು ಬಂಧಿಸಿ ಗುರುವಾರ ಮುಂಬೈನ ಎಸ್ಪ್ಲೆನೇಡ್ ನ್ಯಾಯಾಲಯದ ಪೊಲೀಸರು ಹಾಜರುಪಡಿಸಿದ್ದರು.
Virat Kohli
Virat Kohli

ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಅವರ ಹತ್ತು ತಿಂಗಳ ಹೆಣ್ಣು ಮಗುವಿಗೆ ಟ್ವಿಟರ್‌ನಲ್ಲಿ ಅತ್ಯಾಚಾರ ಬೆದರಿಕೆ ಹಾಕಿದ್ದ 23 ವರ್ಷದ ಸಾಫ್ಟ್‌ವೇರ್‌ ಎಂಜಿನಿಯರ್‌ ರಾಮ್‌ನಾಗೇಶ್‌ ಅಕುಬಥಿನಿ ಅವರನ್ನು ಮುಂಬೈ ನ್ಯಾಯಾಲಯವು ಐದು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ.

ಆರೋಪಿ ರಾಮ್‌ನಾಗೇಶ್‌ಅನ್ನು ಮುಂಬೈನ ಎಸ್ಪ್ಲನೇಡ್‌ನ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಮುಂದೆ ಗುರುವಾರ ಹಾಜರುಪಡಿಸಲಾಗಿತ್ತು. ರಾಮ್‌ನಾಗೇಶ್‌ ಸಾಮಾಜಿಕ ಜಾಲತಾಣದಲ್ಲಿ ಪದೇಪದೇ ತಮ್ಮ ಪ್ರೊಫೈಲ್‌ ಬದಲಾಯಿಸಿಕೊಂಡು ವಿರಾಟ್‌ ಕೊಹ್ಲಿ ಅವರನ್ನು ಟ್ರೋಲ್‌ ಮಾಡುತ್ತಿದ್ದರು ಎಂದು ಸರ್ಕಾರಿ ಅಭಿಯೋಜಕರು ಹೇಳಿದರು. ಬಳಿಕ ಮ್ಯಾಜಿಸ್ಟ್ರೇಟ್‌ ಅವರು ಅಕುಬಥನಿ ಅವರನ್ನು ನವೆಂಬರ್‌ 15ರ ವರೆಗೆ ಪೊಲೀಸ್‌ ಕಸ್ಟಡಿಗೆ ನೀಡಿದ್ದಾರೆ.

ರಾಜ್ಯದ ಅಗ್ರಶ್ರೇಯಾಂಕಿತ ವಿದ್ಯಾರ್ಥಿಯಾಗಿದ್ದ ಮತ್ತು ಹೈದರಾಬಾದ್‌ನಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಪದವೀಧರನಾದ ಅಕುಬಥಿನಿ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವು ಪಾಕಿಸ್ತಾನದ ಎದುರು ಸೋತ ಬಳಿಕ ಕೊಹ್ಲಿ-ಅನುಷ್ಕಾ ದಂಪತಿಯ ಹತ್ತು ತಿಂಗಳ ಪುತ್ರಿಯ ವಿರುದ್ಧ ಆಕ್ಷೇಪಾರ್ಹವಾದ ಪೋಸ್ಟ್‌ ಅನ್ನು ಟ್ವಿಟರ್‌ನಲ್ಲಿ ಹಾಕಿದ್ದರು. ಭಾರತ ತಂಡ ಸೋತಿದ್ದಕ್ಕೆ ಆನ್‌ಲೈನ್‌ನಲ್ಲಿ ವೇಗಿ ಮೊಹಮ್ಮದ್‌ ಸಮಿ ವಿರುದ್ಧ ಅವರ ಧರ್ಮ ಕೇಂದ್ರೀಕರಿಸಿ ದಾಳಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಮಿ ಬೆಂಬಲಕ್ಕೆ ನಿಂತಿದ್ದ ವಿರಾಟ್‌ ಕೊಹ್ಲಿ ವಿರುದ್ಧ ದಾಳಿ ಆರಂಭವಾಗಿತ್ತು.

ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದ ಅಕುಬಥಿನಿ ಅವರನ್ನು ಹೈದರಾಬಾದ್‌ನಲ್ಲಿ ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದರು. ಕೊಹ್ಲಿ ವ್ಯವಸ್ಥಾಪಕರು ನೀಡಿದ ದೂರನ್ನು ಆಧರಿಸಿ ಮುಂಬೈ ಪೊಲೀಸ್‌ನ ಸೈಬರ್‌ ಘಟಕ ದೂರು ದಾಖಲಿಸಿತ್ತು. ಇದನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ.

“ಸಾರ್ವಜನಿಕವಾಗಿ ಹತ್ತು ತಿಂಗಳ ಹೆಣ್ಣು ಮಗುವಿನ ಮೇಲೆ ಆನ್‌ಲೈನ್‌ನಲ್ಲಿ ಬೆದರಿಕೆಯ ಪೋಸ್ಟ್‌ ಹಾಕಿರುವುದು ಮಹಿಳಾ ಕುಲದ ಘನತೆಗೆ ಧಕ್ಕೆ ಮಾಡುವುದಲ್ಲದೇ ಪೋಷಕರನ್ನು ಅಪಮಾನ ಮಾಡುವುದಾಗಿದೆ” ಎಂದು ಮುಂಬೈ ಪೊಲೀಸರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದರು.

Also Read
ವಿರಾಟ್‌ ಕೊಹ್ಲಿ ಪುತ್ರಿ ವಮಿಕಾಗೆ ಅತ್ಯಾಚಾರ ಬೆದರಿಕೆ: ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ಮಹಿಳಾ ಆಯೋಗ

ಕೊಹ್ಲಿ ಪುತ್ರಿ ವಮಿಕಾಗೆ ಆನ್‌ಲೈನ್‌ ಬೆದರಿಕೆ ಹಾಕಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದ ದೆಹಲಿಯ ಮಹಿಳಾ ಆಯೋಗವು ಪ್ರಕರಣ ದಾಖಲಿಸಿರುವುದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ದೆಹಲಿ ಪೊಲೀಸರಿಗೆ ಸೂಚಿಸಿತ್ತು.

ಅಕುಬಥಿನಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 354ಎ (ಘನತೆಗೆ ಚ್ಯುತಿ), 506 (ಕ್ರಿಮಿನಲ್‌ ಬೆದರಿಕೆ), 500 (ಮಾನಹಾನಿ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 67 ಮತ್ತು 67ಬಿ ಅಡಿ ಪ್ರಕರಣ ದಾಖಲಿಸಲಾಗಿದೆ. ಅಕುಬಥಿನಿ ವಿರುದ್ಧ ಐಟಿ ಕಾಯಿದೆ ಅಡಿ ಆರೋಪಗಳು ಸಾಬೀತಾದರೆ ಗರಿಷ್ಠ 5 ವರ್ಷ ಜೈಲು ಅಥವಾ ₹10 ಲಕ್ಷ ದಂಡ ವಿಧಿಸಬಹುದಾಗಿದೆ.

Related Stories

No stories found.
Kannada Bar & Bench
kannada.barandbench.com