ವಿದೇಶ ಪ್ರಯಾಣ ನಿರ್ಬಂಧ: ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ ಪತ್ರಕರ್ತೆ ರಾಣಾ ಅಯ್ಯೂಬ್‌

ರಾಣಾ ಅಯ್ಯೂಬ್‌ ಅವರು ಮಂಗಳವಾರ ಲಂಡನ್‌ ಪ್ರಯಾಣಕ್ಕೆ ಮುಂದಾಗಿದ್ದ ವೇಳೆ ವಿಮಾನ ಏರುವುದನ್ನು ಅಧಿಕಾರಿಗಳು ತಡೆದಿದ್ದರು.
ವಿದೇಶ ಪ್ರಯಾಣ ನಿರ್ಬಂಧ: ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ ಪತ್ರಕರ್ತೆ ರಾಣಾ ಅಯ್ಯೂಬ್‌

ವಿದೇಶ ಪ್ರಯಾಣಕ್ಕೆ ಅನುಮತಿ ನೀಡುವಂತೆ ಕೋರಿ ಪತ್ರಕರ್ತೆ ರಾಣಾ ಅಯ್ಯೂಬ್‌ ಅವರು ದೆಹಲಿ ಹೈಕೋರ್ಟ್‌ಅನ್ನು ಎಡತಾಕಿದ್ದಾರೆ. ರಾಣಾ ಅಯ್ಯೂಬ್‌ ಅವರು ಮಂಗಳವಾರ ಲಂಡನ್‌ ಪ್ರಯಾಣಕ್ಕೆ ಮುಂದಾಗಿದ್ದ ವೇಳೆ ವಿಮಾನ ಏರುವುದನ್ನು ಅಧಿಕಾರಿಗಳು ತಡೆದಿದ್ದರು.

ಪ್ರಕರಣವನ್ನು ತುರ್ತಾಗಿ ಆಲಿಸುವಂತೆ ಕೋರಿ ದೆಹಲಿ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್‌ ಸಾಂಘಿ ಮತ್ತು ನ್ಯಾ. ನವೀನ್‌ ಚಾವ್ಲಾ ಅವರ ಪೀಠದ ಮುಂದೆ ಉಲ್ಲೇಖಿಸಲಾಗಿದೆ. ನಾಳೆಯೇ ಪ್ರಕರಣವನ್ನು ಆಲಿಸುವಂತೆ ಅಯ್ಯೂಬ್‌ ಪರ ವಕೀಲರು ಪೀಠವನ್ನು ಕೋರಿದರು. ಒಂದೊಮ್ಮೆ ಅರ್ಜಿಯು ಬೆ. 11 ಗಂಟೆಯೊಳಗೆ ಸಲ್ಲಿಕೆಯಾಗಿದ್ದರೆ ಅಷ್ಟರೊಳಗೆ ಪ್ರಕರಣವನ್ನು ಪಟ್ಟಿ ಮಾಡುವುದಾಗಿ ಪೀಠವು ಹೇಳಿತು.

ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಾಣಾ ಅಯ್ಯೂಬ್‌ ಅವರ ವಿರುದ್ಧ ಜಾರಿ ನಿರ್ದೇಶನಾಲಯವು ಲುಕ್‌ಔಟ್‌ ಸುತ್ತೋಲೆ ಹೊರಡಿಸಿರುವುದರಿಂದ ಅವರ ವಿದೇಶ ಪ್ರಯಾಣವನ್ನು ನಿರ್ಬಂಧಿಸಲಾಗಿದೆ. ಅಯ್ಯೂಬ್‌ ಅವರು ಅಂತಾರಾಷ್ಟ್ರೀಯ ಪತ್ರಕರ್ತರ ಕೇಂದ್ರವು ಲಂಡನ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತರ ಮೇಲಿನ ಬೆದರಿಕೆಗಳ ಕುರಿತಾದ ವಿಚಾರವಾಗಿ ಭಾಷಣವನ್ನು ಮಾಡಬೇಕಿತ್ತು. ಅಲ್ಲದೆ, ಅದರ ನಂತರ ಇಟೆಲಿಯಲ್ಲಿ ಆಯೋಜಿಸಲಾಗಿದ್ದ ಭಾರತದ ಪ್ರಜಾಸತ್ತಾತ್ಮಕತೆಯ ಕುರಿತಾದ ಸಮ್ಮೇಳನದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಳ್ಳಬೇಕಿತ್ತು.

Related Stories

No stories found.
Kannada Bar & Bench
kannada.barandbench.com