ಅಶ್ಲೀಲ ಹೇಳಿಕೆ: ತನ್ನ ಮೇಲೆ ದಾಖಲಾಗಿರುವ ವಿವಿಧ ಎಫ್‌ಐಆರ್‌ಗಳ ವಿರುದ್ಧ ಸುಪ್ರೀಂ ಮೊರೆಹೋದ ಯೂಟ್ಯೂಬರ್ ರಣವೀರ್‌

ಪ್ರಕರಣವನ್ನು ತುರ್ತಾಗಿ ಪಟ್ಟಿ ಮಾಡುವಂತೆ ಕೋರಿ ವಕೀಲ ಅಭಿನವ್‌ ಚಂದ್ರಚೂಡ್‌ ಅವರು ಸಿಜೆಐ ಅವರ ಮುಂದೆ ಮೌಖಿಕವಾಗಿ ಉಲ್ಲೇಖಿಸಿದರು.
Ranveer Allahabadia and Supreme Court
Ranveer Allahabadia and Supreme CourtInstagram
Published on

ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದ ಇತ್ತೀಚಿನ ಸಂಚಿಕೆಯಲ್ಲಿ ಮಾಡಿದ ಅಶ್ಲೀಲ ಮತ್ತು ಅಸಭ್ಯ ಹೇಳಿಕೆಗಳಿಗಾಗಿ ವಿವಿಧ ರಾಜ್ಯಗಳಲ್ಲಿ ತನ್ನ ವಿರುದ್ಧ ದಾಖಲಾಗಿರುವ ಅನೇಕ ಪ್ರಕರಣಗಳನ್ನು ಪ್ರಶ್ನಿಸಿ ಯೂಟ್ಯೂಬರ್ ರಣವೀರ್ ಅಲಾಹಾಬಾದಿಯಾ ಅವರು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾರೆ.

ಬಿಯರ್‌ಬೈಸೆಪ್ಸ್ ಎಂದು ಕರೆಯಲ್ಪಡುವ ರಣವೀರ್‌ ಪರವಾಗಿ ವಕೀಲ ಅಭಿನವ್ ಚಂದ್ರಚೂಡ್ ಅವರು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಅವರ ಮುಂದೆ ಪ್ರಕರಣವನ್ನು ಆಲಿಸುವ ಸಲುವಾಗಿ ತುರ್ತಾಗಿ ಪಟ್ಟಿ ಮಾಡುವಂತೆ ಕೋರಿದರು.

ಆದರೆ, ಮನವಿಯನ್ನು ತಿರಸ್ಕರಿಸಿದ ಸಿಜೆಐ ಅವರು ಪ್ರಕರಣಗಳ ಮೌಖಿಕ ಉಲ್ಲೇಖವನ್ನು ಅನುಮತಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಉಲ್ಲೇಖದ ವೇಳೆ ಚಂದ್ರಚೂಡ್‌ ಅವರು "ತನ್ನ ವಿರುದ್ಧ ಹಲವು ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತಿದೆ" ಎಂದು ಪೀಠದ ಗಮನಕ್ಕೆ ತಂದರು. "ನಾವು ಈಗಾಗಲೇ ದಿನಾಂಕವನ್ನು (ಪ್ರಕರಣವನ್ನ ಪಟ್ಟಿ ಮಾಡಲು) ನೀಡಿದ್ದೇವೆ" ಎಂದು ಸಿಜೆಐ ಖನ್ನಾ ಪ್ರತಿಕ್ರಿಯಿಸಿದರು. "ಆದರೆ ಅಸ್ಸಾಂ ಪೊಲೀಸರು..." ಎಂದು ಚಂದ್ರಚೂಡ್ ವಿವರಿಸಲು ಮುಂದಾದರು.

ಈ ವೇಳೆ ಸಿಜೆಐ ಅವರು "ಇಲ್ಲ ಚಂದ್ರಚೂಡ್, ಮೌಖಿಕ ಉಲ್ಲೇಖಕ್ಕೆ ಅನುಮತಿಯಿಲ್ಲ" ಎಂದು ಸ್ಪಷ್ಟಪಡಿಸಿದರು. "ಇದು ಆರ್ಟಿಕಲ್ 32 ಅರ್ಜಿ" ಎಂದು ಚಂದ್ರಚೂಡ್ ಗಮನಸೆಳೆಯಲು ಮುಂದಾದಾಗ, "ಹೌದು, ನಾವು ಈಗಾಗಲೇ ದಿನಾಂಕವನ್ನು ನೀಡಿದ್ದೇವೆ. ಇದು ಹೊಸ ಪ್ರಕರಣ" ಎಂದು ಸಿಜೆಐ ಹೇಳಿದರು.

ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿರುವ ರಣವೀರ್‌ ಪಾಲ್ಗೊಂಡಿದ್ದ ವಿವಾದಾತ್ಮಕ ಎಪಿಸೋಡ್ ಅನ್ನು ನವೆಂಬರ್ 14, 2024 ರಂದು ಮುಂಬೈನ ಖರ್‌ ಬಳಿಯ ಹ್ಯಾಬಿಟಾಟ್‌ ಹೊಟೆಲ್‌ನಲ್ಲಿ ಚಿತ್ರೀಕರಿಸಲಾಗಿತ್ತು. ಅದು ಇತ್ತೀಚೆಗೆ ಪ್ರಸಾರವಾಗಿತ್ತು. ರಣವೀರ್‌ ಅಲಾಹಾಬಾದಿಯಾ, ಹಾಸ್ಯನಟ ಸಮಯ್ ರೈನಾ, ಯೂಟ್ಯೂಬರ್ ಆಶಿಶ್ ಚಂಚಲಾನಿ ಮತ್ತು ಇತರರು ತೀರ್ಪುಗಾರರಾಗಿ ಕಾರ್ಯಕ್ರಮದ ವೇದಿಕೆಯಲ್ಲಿದ್ದರು. ಕಾರ್ಯಕ್ರಮವು ವ್ಯಾಪಕ ನಿಂದನೀಯ ಭಾಷೆಯನ್ನು ಒಳಗೊಂಡಿತ್ತು.

ಅಲಾಹಾಬಾದಿಯಾ ಕಾರ್ಯಕ್ರಮದಲ್ಲಿ ಆಡಿದ ಮಾತುಗಳ ನಂತರ ಮಹಾರಾಷ್ಟ್ರ ಮತ್ತು ಅಸ್ಸಾಂನಲ್ಲಿ ಅನೇಕ ಎಫ್‌ಐಆರ್‌ಗಳು ಆತನ ವಿರುದ್ಧ ದಾಖಲಾಗಿದೆ.

Kannada Bar & Bench
kannada.barandbench.com