ದೂರುದಾರರು ಮತ್ತು ಆರೋಪಿಗಳ ರಾಜಿ ಮೂಲಕ ಅತ್ಯಾಚಾರ ಪ್ರಕರಣವನ್ನೂ ಮುಕ್ತಾಯಗೊಳಿಸಬಹುದು ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್ ಈಚೆಗೆ ಮಹಿಳೆಯೊಬ್ಬರು ತಮ್ಮ ಕುಟುಂಬದ ನಾಲ್ವರು ಸದಸ್ಯರ ವಿರುದ್ಧ ದಾಖಲಿಸಿದ್ದ ಅತ್ಯಾಚಾರ ಪ್ರಕರಣವನ್ನು ರದ್ದುಪಡಿಸಿದೆ.
ಬೆಂಗಳೂರಿನ ಬ್ಯಾಡರಹಳ್ಳಿ ನಿವಾಸಿಗಳಾದ ಕೆ ಸತೀಶ್, ಶ್ರೀನಿವಾಸ್, ಕೋಕಿಲ ಮತ್ತು ಮಮತಾ ಅವರು ಸಲ್ಲಿಸಿದ್ದ ಕ್ರಿಮಿನಲ್ ಮನವಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಈ ಆದೇಶ ಮಾಡಿದೆ.
ಅರ್ಜಿದಾರ ಹಾಗೂ ಆರೋಪಿಗಳ ಮೊಮೊ ಒಪ್ಪಿಕೊಂಡ ಪೀಠವು ದೂರುದಾರೆ ವಿವಾಹಿತರಾಗಿದ್ದು, ಪತಿಯ ಜೊತೆಗೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಆರೋಪಿಗಳು ದೂರುದಾರ ಕುಟುಂಬದ ಸದಸ್ಯರೇ ಆಗಿದ್ದಾರೆ. ಹಾಗಾಗಿ, ಆರೋಪಿಗಳು ಮತ್ತು ದೂರುದಾರರು ಸಲ್ಲಿಸಿರುವ ಮೊಮೊವನ್ನು ಪರಿಗಣಿಸಬಹುದಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಪಕ್ಷಕಾರರು ರಾಜಿಯಾದ ಸಂದರ್ಭದಲ್ಲಿ ಆ ಪ್ರಕರಣವನ್ನು ನ್ಯಾಯಾಲಯ ಮುಕ್ತಾಯಗೊಳಿಸಲ ಅವಕಾಶವಿದೆ. ಆದ್ದರಿಂದ ಅರ್ಜಿದಾರರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲಾಗಿದೆ ಎಂದು ಆದೇಶದಲ್ಲಿ ಹೇಳಿದೆ.
ಅರ್ಜಿ ವಿಚಾರಣೆ ವೇಳೆ ಎಲ್ಲಾ ಆರೋಪಿಗಳು ಮತ್ತು ದೂರುದಾರ ಮಹಿಳೆಯು ಹೈಕೋರ್ಟ್‌ಗೆ ಹಾಜರಾಗಿ, ಪ್ರಕರಣವನ್ನು ರಾಜಿ ಮೂಲಕ ಮುಕ್ತಾಯಗೊಳಿಸಲು ಉದ್ದೇಶಿಸಲಾಗಿದೆ. ದೂರನ್ನು ಹಿಂಪಡೆಯಲು ದೂರುದಾರರು ಸಹ ಒಪ್ಪಿದ್ದಾರೆ ಎಂದು ತಿಳಿಸಿ ಜಂಟಿ ಮೊಮೊ ಸಲ್ಲಿಸಿದ್ದರು.
ಆದರೆ, ಮೊಮೊಗೆ ಆಕ್ಷೇಪಿಸಿದ ಸರ್ಕಾರಿ ವಕೀಲರು, ಆರೋಪಿಗಳ ವಿರುದ್ಧ ಅತ್ಯಾಚಾರದಂತಹ ಗಂಭೀರ ಆರೋಪವಿದೆ. ಹಾಗಾಗಿ, ಪ್ರಕರಣವನ್ನು ರಾಜಿ ಮಾಡಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಬಾರದು ಎಂದು ಪೀಠವನ್ನು ಕೋರಿದರು.
ಇತ್ತ ಅರ್ಜಿದಾರರ ಪರ ವಕೀಲರು, ರಾಜಿ ಮೂಲಕ ಅತ್ಯಾಚಾರ ಪ್ರಕರಣಗಳನ್ನು ಮುಕ್ತಾಯಗೊಳಿಸಬಹುದು ಎಂಬುದನ್ನು ಸ್ಪಷ್ಟಪಡಿಸಿ ಸುಪ್ರೀಂ ಕೋರ್ಟ್ ಮತ್ತು ದೇಶದ ವಿವಿಧ ಹೈಕೋರ್ಟ್‌ಗಳು ನೀಡಿರುವ ತೀರ್ಪುಗಳ ಪ್ರತಿಯನ್ನು ಪೀಠಕ್ಕೆ ಸಲ್ಲಿಸಿದರು.
ಸತೀಶ್ ವಿರುದ್ಧ ಅತ್ಯಾಚಾರ ಹಾಗೂ ಉಳಿದ ಮೂವರು ಆರೋಪಿಗಳ ವಿರುದ್ಧ ಜೀವ ಬೆದರಿಕೆ, ಅವಮಾನ ಮತ್ತು ವಸೂಲಿ ಆರೋಪ ಮಾಡಿದ್ದ ಮಹಿಳೆಯೊಬ್ಬರು 2022ರ ಫೆಬ್ರವರಿ 16ರಂದು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣ ರದ್ದುಪಡಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.