
ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ಆರೋಪ ನಿಗದಿಪಡಿಸಿ ವಿಚಾರಣೆಗೆ ಮುಂದಾಗಿರುವ ಸತ್ರ ನ್ಯಾಯಾಲಯದ ನ್ಯಾಯಿಕ ಪ್ರಕ್ರಿಯೆಯನ್ನು ಮುಂದೂಡಲು ನಿರ್ದೇಶಿಸಬೇಕು ಎಂಬ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಮಧ್ಯಂತರ ಮನವಿಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ ತಿರಸ್ಕರಿಸಿದೆ.
ಬೆಂಗಳೂರಿನ ಸೈಬರ್ ಅಪರಾಧ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ ವಿಚಾರಣಾಧೀನ ನ್ಯಾಯಾಲಯ ಸಂಜ್ಞೇಯ ಪರಿಗಣಿಸಿರುವುದನ್ನು ಬದಿಗೆ ಸರಿಸುವಂತೆ ಕೋರಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಪ್ರಜ್ವಲ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು “ಹಾಲಿ ಪ್ರಕರಣದಲ್ಲಿ ಯಾವುದೇ ಸಂತ್ರಸ್ತರು ಪೊಲೀಸರಿಗೆ ದೂರು ಕೊಟ್ಟಿಲ್ಲ. ಇದೊಂದು ರಾಜಕೀಯ ಪ್ರೇರಿತವಾಗಿ ದಾಖಲಿಸಿಕೊಂಡಿರುವ ದೂರು. ಅಂತೆಯೇ, ಎಸ್‌ಐಟಿಗೆ ಆರೋಪ ಪಟ್ಟಿ ಸಲ್ಲಿಸುವ ಅಧಿಕಾರ ವ್ಯಾಪ್ತಿ ಇಲ್ಲ. ಹೀಗಾಗಿ, ಈ ಪ್ರಕರಣವನ್ನು ರದ್ದುಗೊಳಿಸಬೇಕು” ಎಂದು ಕೋರಿದರು.
ವಿಶೇಷ ಸರ್ಕಾರಿ ಅಭಿಯೋಜಕ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಅವರು “ಆರೋಪಿಯು ಮನೆಗೆಲಸದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಕ್ಕೆ ಸಾಕ್ಷ್ಯ ಇದೆ. ಆರೋಪಿ ತನ್ನದೇ ಮೊಬೈಲ್‌ನಲ್ಲಿ ಈ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಅದರಲ್ಲಿಯ ಧ್ವನಿ ಮತ್ತು ಡಿಎನ್‌ಎ ಪರೀಕ್ಷೆಗಳೂ ಇದನ್ನು ದೃಢಪಡಿಸಿವೆ. ತನಿಖಾಧಿಕಾರಿಗಳು ಅತ್ಯಂತ ವೃತ್ತಿಪರತೆಯಿಂದ ನಡೆದುಕೊಂಡಿದ್ದಾರೆ. ಆದ್ದರಿಂದ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸದೆಯೇ ಅರ್ಜಿ ವಜಾಗೊಳಿಸಬೇಕು” ಎಂದು ಮನವಿ ಮಾಡಿದರು.
ಆಗ ಅರುಣ್ ಶ್ಯಾಮ್ ಅವರು “ಈ ಅರ್ಜಿ ವಿಚಾರಣೆ ಮುಕ್ತಾಯವಾಗುವ ತನಕ ವಿಚಾರಣಾ ನ್ಯಾಯಾಲಯದ ಮುಂದಿನ ನ್ಯಾಯಿಕ ಪ್ರಕ್ರಿಯೆ ಮುಂದೂಡುವಂತೆ ಸತ್ರ ನ್ಯಾಯಾಲಯಕ್ಕೆ ನಿರ್ದೇಶಿಸಬೇಕು” ಎಂದು ಪೀಠಕ್ಕೆ ಮನವಿ ಮಾಡಿದರು. ಆದರೆ, ಇದಕ್ಕೆ ಒಪ್ಪದ ಪೀಠವು “ಈ ಹಂತದಲ್ಲಿ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಯನ್ನು ಮುಂದೂಡಲು ಆಗುವುದಿಲ್ಲ” ಎಂದು ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿ, ಸಂತ್ರಸ್ತ ಮಹಿಳೆ ಮತ್ತು ಎಸ್‌ಐಟಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು.
ಮೈಸೂರಿನ ಕೆ ಆರ್ ನಗರದ ಸಂತ್ರಸ್ತೆ ಮಹಿಳೆ ನೀಡಿದ ದೂರಿನ ಸೈಬರ್ ಅಪರಾಧ ಠಾಣೆಯಲ್ಲಿ ಪ್ರಜ್ವಲ್ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 376(2)(ಎನ್), 376(2)(ಕೆ), 506, 354-ಎ, 354(ಎ), 354(ಬಿ), 354(ಸಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 66ಇ ಅಡಿ ಪ್ರಕರಣ ದಾಖಲಿಸಲಾಗಿದೆ.