ಮಹಿಳಾ ರಾಜಕಾರಣಿ ಮೇಲೆ ಅತ್ಯಾಚಾರವೆಸಗಿದ ಆರೋಪದ ಹಿನ್ನೆಲೆಯಲ್ಲಿ ಜೂನ್ 19ರಿಂದ ನಾಲ್ಕು ದಿನ ಎಸ್‌ಐಟಿ ಕಸ್ಟಡಿಯಲ್ಲಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣರನ್ನು ಜುಲೈ 8ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸೋಮವಾರ ಆದೇಶಿಸಿದೆ.
ಪ್ರಜ್ವಲ್ ಕಸ್ಟಡಿ ಸಮಯ ಮುಗಿದ ಹಿನ್ನೆಲೆಯಲ್ಲಿ ಮ್ಯಾಜಿಸ್ಟ್ರೇಟ್ ಕೆ ಎನ್ ಶಿವಕುಮಾರ್ ಅವರ ಮುಂದೆ ಎಸ್‌ಐಟಿ ಪೊಲೀಸರು ಹಾಜರುಪಡಿಸಿದರು.
ಮ್ಯಾಜಿಸ್ಟ್ರೇಟ್ ಅವರು ಪ್ರಕರಣದ ಕುರಿತು ಮಾಹಿತಿ ಪಡೆದರು. ಎಸ್‌ಐಟಿಯು ಕಸ್ಟಡಿ ಅವಧಿ ವಿಸ್ತರಣೆ ಕೋರದ ಹಿನ್ನೆಲೆಯಲ್ಲಿ ಆರೋಪಿ ಪ್ರಜ್ವಲ್‌ರನ್ನು ನ್ಯಾಯಾಲಯವು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿತು.
ಇನ್ನು ನಾಲ್ಕನೇ ಪ್ರಕರಣದಲ್ಲಿ ಲೈಂಗಿಕ ಕಿರುಕುಳ ಆರೋಪವನ್ನು ಪ್ರಜ್ವಲ್ ಎದುರಿಸುತ್ತಿದ್ದು, ಬಾಡಿ ವಾರೆಂಟ್ ಮೂಲಕ ಅವರನ್ನು ವಿಚಾರಣೆಗಾಗಿ ಪಡೆಯಲು ಎಸ್‌ಐಟಿ ಸಿದ್ಧತೆ ನಡೆಸಿದೆ. “ಈ ಸಂಬಂಧ ನಾಳೆ ವಾದ-ಪ್ರತಿವಾದ ನಡೆಯಲಿದ್ದು, ಪ್ರಜ್ವಲ್ ಅವರನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರುಪಡಿಸಲಾಗುತ್ತದೆ” ಎಂದು ಎಸ್‌ಐಟಿ ವಿಶೇಷ ಸರ್ಕಾರಿ ಅಭಿಯೋಜಕರಾದ ಅಶೋಕ್ ನಾಯಕ್ ಅವರು ಬಾರ್ ಅಂಡ್ ಬೆಂಚ್‌ಗೆ ತಿಳಿಸಿದ್ದಾರೆ.
ವಿದೇಶದಿಂದ ಮರಳುತ್ತಲೇ ಮೇ 21ರಂದು ಬಂಧಿತರಾಗಿದ್ದ ಪ್ರಜ್ವಲ್‌ರನ್ನು ಮೇ 31ರಿಂದ ಜೂನ್ 10ರವರೆಗೆ ಎಸ್‌ಐಟಿ ವಶಕ್ಕೆ ನೀಡಲಾಗಿತ್ತು. ಆನಂತರ ಎರಡನೇ ಅತ್ಯಾಚಾರ ಪ್ರಕರಣದಲ್ಲಿ ಜೂನ್ 13ರಿಂದ 18ರವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಲಾಗಿತ್ತು. ಮೂರನೇ ಅತ್ಯಾಚಾರ ಪ್ರಕರಣದಲ್ಲಿ ಜೂನ್ 24ರವರೆಗೆ ಎಸ್‌ಐಟಿ ವಶಕ್ಕೆ ನೀಡಲಾಗಿತ್ತು.