ಅಪ್ರಾಪ್ತ ಸೋದರ ಸಂಬಂಧಿ ಮೇಲೆ ಅತ್ಯಾಚಾರ ಎಸಗಿ, ವಂಚಿಸಿದ ಪ್ರಕರಣದಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿದ ವಿಚಾರಣಾಧೀನ ನ್ಯಾಯಾಲಯ ಆದೇಶವನ್ನು ರದ್ದುಪಡಿಸಿರುವ ಕರ್ನಾಟಕ ಹೈಕೋರ್ಟ್ ಈಚೆಗೆ ಆತನಿಗೆ ಶಿಕ್ಷೆ ವಿಧಿಸಲು ಆದೇಶ ಮಾಡಿದೆ [ಕರ್ನಾಟಕ ರಾಜ್ಯ ವರ್ಸಸ್ ವಿಜಯ್ ಅಲಿಯಾಸ್ ವಿಜಯಕುಮಾರ್].
ಮಡಿಕೇರಿಯ ಮಡೆ ಗ್ರಾಮದ ವಿಜಯ ಅಲಿಯಾಸ್ ವಿಜಯಕುಮಾರ್‌ನನ್ನು 2016ರ ಮಾರ್ಚ್ 10ರಂದು ಕೊಡಗಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಖುಲಾಸೆಗೊಳಿಸಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಕೆ ಎಸ್ ಮುದಗಲ್ ಮತ್ತು ರಾಜೇಂದ್ರ ಬದಾಮಿಕರ್ ಅವರ ನೇತೃತ್ವದ ವಿಭಾಗೀಯ ಪೀಠವು ಪುರಸ್ಕರಿಸಿದೆ.
“ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ರೂಪಿಸಲಾಗಿರುವ ನಿಯಮಗಳಿಗೆ ಪೂರಕವಾಗಿ ಅಧಿಕೃತ ಸಾಕ್ಷ್ಯಗಳನ್ನು ವಿಚಾರಣಾಧೀನ ನ್ಯಾಯಾಲಯವು ಪರಿಗಣಿಸದೇ ಆರೋಪಿಯನ್ನು ಖುಲಾಸೆಗೊಳಿಸುವ ಮೂಲಕ ಕಾನೂನುಬಾಹಿರವಾಗಿ ನಡೆದುಕೊಂಡಿದೆ. ನಿಷಿದ್ಧವಾಗಿರುವ 15 ವರ್ಷದ ತನ್ನ ಸೋದರ ಸಂಬಂಧಿಯ ಜೊತೆ ಸಂಭೋಗ ನಡೆಸಿರುವುದಲ್ಲದೇ ಆಕೆಗೆ ವಂಚಿಸಿರುವುದನ್ನು ಪರಿಗಣಿಸಲು ವಿಚಾರಣಾಧೀನ ನ್ಯಾಯಾಲಯ ವಿಫಲವಾಗಿದೆ. ಹೀಗಾಗಿ, ಆರೋಪಿಯನ್ನು ಖುಲಾಸೆ ಮಾಡಿರುವ ಆದೇಶವು ನ್ಯಾಯದಾನಕ್ಕೆ ಮಾರಕವಾಗಿದ್ದು, ಅದನ್ನು ಬದಿಗೆ ಸರಿಸಲು ಅರ್ಹವಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
“ಅತ್ಯಾಚಾರ ಪ್ರಕರಣಗಳಲ್ಲಿ ವಂಶವಾಹಿ ಪರೀಕ್ಷೆ ನಡೆಸಿಲ್ಲ ಎಂಬ ಅಂಶವನ್ನು ವಿಚಾರಣೆಯ ಹಣೆಬರಹ ನಿರ್ಧರಿಸಲು ಅನುಮತಿಸಲಾಗದು ಎಂದು ಸುಪ್ರೀಂ ಕೋರ್ಟ್ ವೀರೇಂದ್ರ ಪ್ರಕರಣದಲ್ಲಿ ತಿಳಿಸಿದೆ” ಎಂದು ಹೈಕೋರ್ಟ್ ನೆನಪಿಸಿದೆ.
ಪ್ರಕರಣದ ಹಿನ್ನೆಲೆ: ಸಂತ್ರಸ್ತೆಯು 1992ರ ಫೆಬ್ರವರಿ 29ರಂದು ಜನಿಸಿದ್ದು, ಆರೋಪಿಯು ಆಕೆಯ ಚಿಕ್ಕಪ್ಪನ ಮಗನಾಗಿದ್ದಾನೆ. ಆರೋಪಿಯ ಜಮೀನಿಗೆ ಕೂಲಿ ಕೆಲಸಕ್ಕೆ ತೆರಳಿದ್ದ ಸಂತ್ರಸ್ತೆಯನ್ನು ಮದುವೆಯಾಗುವುದಾಗಿ ನಂಬಿಸಿ, ಸಂಭೋಗ ನಡೆಸಿದ್ದನು. ಈ ಘಟನೆಯು 2008ರಲ್ಲಿ ನಡೆದಿತ್ತು. ಇದರಿಂದ ಆಕೆ ಗರ್ಭಿಣಿಯಾಗಿದ್ದು, ವಿಚಾರ ಪೋಷಕರ ಗಮನಕ್ಕೆ ಬಂದಿತ್ತು. ಮಗುವನ್ನು ತೆಗೆಸಿದರೆ ಮದುವೆಯಾಗುವುದಾಗಿ ಆತ ಷರತ್ತು ವಿಧಿಸಿದ್ದ. ಊರಿನವರ ಪಂಚಾಯಿತಿಯಲ್ಲಿ ಸಂತ್ರಸ್ತೆಯನ್ನು ಮದುವೆಯಾಗುವುದಾಗಿ ತಿಳಿಸಿದ್ದ ಆರೋಪಿಯು ಬಳಿಕ ನಾಪತ್ತೆಯಾಗಿದ್ದ. ಹೀಗಾಗಿ, ಆತನ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 376 ಮತ್ತು 420ರ ಪ್ರಕರಣ ದಾಖಲಿಸಲಾಗಿತ್ತು.
ಈ ಮಧ್ಯೆ, ಸಂತ್ರಸ್ತೆಗೆ ವಿವಾದಿತ ಸಂಬಂಧದಿಂದಾಗಿ ಹೆಣ್ಣು ಮಗು ಜನಿಸಿದ್ದು, ಆಕೆ ಆನಂತರ ಮತ್ತೊಂದು ಮದುವೆಯಾಗಿದ್ದರು. ಈ ಸಂಬಂಧದಿಂದ ಮತ್ತೊಂದು ಮಗು ಪಡೆದಿದ್ದಾರೆ.
ವಾದ-ಪ್ರತಿವಾದ ಆಲಿಸಿದ್ದ ವಿಚಾರಣಾಧೀನ ನ್ಯಾಯಾಲಯವು ಸಂತ್ರಸ್ತೆಯ ವಯಸ್ಸು ಸಾಬೀತಾಗಿಲ್ಲ. ಆರೋಪಿ ಮತ್ತು ಸಂತ್ರಸ್ತೆಯ ನಡುವಿನ ಸಂಬಂಧ ಒಪ್ಪಿತವಾಗಿತ್ತು. ಆರೋಪಿಯು ಸಂತ್ರಸ್ತೆಯ ಜೊತೆಗೆ ಹೊಂದಿದ್ದ ಸಂಭೋಗದಿಂದ ಆಕೆ ಗರ್ಭಿಣಿಯಾಗಿದ್ದಳು ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಂಶವಾಹಿ ಪರೀಕ್ಷೆ ವರದಿ ಸಲ್ಲಿಸಿಲ್ಲ ಎಂದು ಕಾರಣಗಳನ್ನು ನೀಡಿ, ಆರೋಪಿಯನ್ನು ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.