ಜನನಾಂಗಕ್ಕೆ ಗಾಯವಾಗದಿದ್ದರೂ ಅಥವಾ ವೀರ್ಯ ಕಲೆ ಇಲ್ಲದಿದ್ದರೂ ಅತ್ಯಾಚಾರ ಸಾಬೀತುಪಡಿಸಲು ಸಾಧ್ಯ: ಕಾಶ್ಮೀರ ಹೈಕೋರ್ಟ್

"ಅತ್ಯಾಚಾರ ಸಂತ್ರಸ್ತರ ಪರೀಕ್ಷೆ ನಡೆಸುವ ವೈದ್ಯಕೀಯ ತಜ್ಞರು ಲೈಂಗಿಕ ಚಟುವಟಿಕೆಯ ಪುರಾವೆಗಳ ಬಗೆಗಷ್ಟೇ ಪ್ರಮಾಣಪತ್ರ ನೀಡಬಹುದು. ಅತ್ಯಾಚಾರ ನಡೆದಿದೆಯೇ ಅಥವಾ ಇಲ್ಲವೇ ಎಂದು ಹೇಳುವುದು ಅವರ ಕೆಲಸವಲ್ಲ" ಎಂದಿದೆ ನ್ಯಾಯಾಲಯ.
High Court of Jammu & Kashmir and Ladakh, Jammu Wing
High Court of Jammu & Kashmir and Ladakh, Jammu Wing

ಸಂತ್ರಸ್ತರ ಜನನಾಂಗಕ್ಕೆ ಗಾಯವಾಗದಿದ್ದರೂ ಅಥವಾ ವೀರ್ಯ ಕಲೆ ಇಲ್ಲದಿದ್ದರೂ ಕೂಡ ಅತ್ಯಾಚಾರದ ಅಪರಾಧವನ್ನು ಸಾಬೀತುಪಡಿಸಬಹುದು ಎಂದು ಜಮ್ಮು, ಕಾಶ್ಮೀರ ಮತ್ತು ಲಡಾಖ್‌ನ ಉಚ್ಚ ನ್ಯಾಯಾಲಯ ಇತ್ತೀಚೆಗೆ ಹೇಳಿದೆ [ಬೋಧ್ ರಾಜ್ ಮತ್ತು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

"ಅತ್ಯಾಚಾರ ಸಂತ್ರಸ್ತರ ಪರೀಕ್ಷೆ ನಡೆಸುವ ವೈದ್ಯಕೀಯ ತಜ್ಞರು ಈಚಿನ ಲೈಂಗಿಕ ಚಟುವಟಿಕೆಯ ಪುರಾವೆಗಳಿದ್ದರೆ ಅವುಗಳ ಬಗೆಗೆ ಮಾತ್ರವೇ ಪ್ರಮಾಣಪತ್ರ ನೀಡಬಹುದು. ಅತ್ಯಾಚಾರ ನಡೆದಿದೆಯೇ ಅಥವಾ ಇಲ್ಲವೇ ಎಂದು ಹೇಳುವುದು ಅವರ ಕೆಲಸವಲ್ಲ, ಅದು ನ್ಯಾಯಾಲಯಗಳ ಕೆಲಸ” ಎಂದು ನ್ಯಾಯಮೂರ್ತಿಗಳಾದ ಸಂಜಯ್ ಧರ್ ಮತ್ತು ರಾಜೇಶ್ ಸೆಖ್ರಿ ಅವರಿದ್ದ ಪೀಠ ತಿಳಿಸಿದೆ.

ಅತ್ಯಾಚಾರ ಅಪರಾಧವಾಗಿರುವುದರಿಂದ ಐಪಿಸಿ ಸೆಕ್ಷನ್ 375ರಡಿ ಅತ್ಯಾಚಾರ ಎಸಗಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವುದು ನ್ಯಾಯಾಲಯ ಮಾತ್ರ ಎಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದರು. ಜನನಾಂಗಕ್ಕೆ ಗಾಯವಾಗದಿದ್ದರೂ ಅಥವಾ ವೀರ್ಯ ಕಲೆ ಇಲ್ಲದಿದ್ದರೂ ಅತ್ಯಾಚಾರ ಸಾಬೀತುಪಡಿಸಬಹುದು ಎಂದು ಅದು ಈ ಹಂತದಲ್ಲಿ ನ್ಯಾಯಾಲಯದಲ್ಲಿ ತಿಳಿಸಿತು.

ತನ್ನ ಒಂದು ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರವೆಸಗಿದ್ದಕ್ಕಾಗಿ ಶಿಕ್ಷೆಗೆ ಗುರಿಯಾಗಿರುವ ಬೋಧ್ ರಾಜ್ ಎಂಬಾತ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ವೈದ್ಯಕೀಯ ಪರೀಕ್ಷೆಯಲ್ಲಿ ಮಗುವಿನ ಕನ್ಯಾಪೊರೆ ಹರಿದಿದ್ದು ಆಕೆಯ ಜನನಾಂಗಗಳ ಮೇಲೆ ಗಾಯಗಳಾಗಿರುವುದರಿಂದ ಲೈಂಗಿಕ ದೌರ್ಜನ್ಯ ನಡೆದಿರಬಹುದು. ಆದರೆ ಇತರೆ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂದಿದ್ದರು.

ಇತ್ತ ಆರೋಪಿ ಪರ ವಕೀಲರು ವೀರ್ಯದ ಕಲೆಗಳು ಪತ್ತೆಯಾಗಿಲ್ಲ ಎಂದು ವಾದಿಸಿದ್ದರು. ಆದರೆ ಮಗುವಿನ ಜನನಾಂಗದ ಮೇಲಾದ ಗಾಯಗಳು ಆಕೆ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿರುವುದನ್ನು ಸೂಚಿಸುತ್ತವೆ ಮತ್ತು ಜನನಾಂಗದೊಳಗಿನ ಪ್ರವೇಶಿಕೆಯನ್ನು ತೋರಿಸುತ್ತವೆ ಎಂದು ವೈದ್ಯರು ನಂತರ ಸಾಕ್ಷ್ಯ ನುಡಿದಿದ್ದರು. ವಾದಗಳನ್ನು ಆಲಿಸಿದ್ದ ಹೈಕೋರ್ಟ್‌ ಅಂತಿಮವಾಗಿ ಆರೋಪಿಗೆ ವಿಧಿಸಲಾಗಿದ್ದ ಅಪರಾಧ ಮತ್ತು ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿದೆ.

Related Stories

No stories found.
Kannada Bar & Bench
kannada.barandbench.com