ಸಣ್ಣ ಸಾಲಗಾರರ ಚಕ್ರಬಡ್ಡಿ ಮನ್ನಾ ಮಾಡಲು ಶಿಫಾರಸುಗಳ ಜಾರಿಗೆ ಸಂಬಂಧಿಸಿದಂತೆ ಯಾವ ರೀತಿಯ ಕ್ರಮಕೈಗೊಳ್ಳಲಾಗುತ್ತದೆ ಎಂಬುದನ್ನು ತಿಳಿಸಲು ವಿಸ್ತೃತ ಅಫಿಡವಿಟ್ ಸಲ್ಲಿಕೆಗೆ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ಗೆ (ಆರ್‌ಬಿಐ) ಸುಪ್ರೀಂ ಕೋರ್ಟ್ ಸೋಮವಾರ ಕಾಲಾವಕಾಶ ನೀಡಿದೆ.
ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಮತ್ತು ಎಂ ಎರ್ ಶಾ ನೇತೃತ್ವದ ತ್ರಿಸದಸ್ಯ ಪೀಠವು ಅರ್ಜಿದಾರರಾದ ರಿಯಲ್ ಎಸ್ಟೇಟ್ ಸಂಸ್ಥೆಗಳು ಮತ್ತು ವಿದ್ಯುತ್ ಉತ್ಪಾದಕರು ವ್ಯಕ್ತಪಡಿಸಿರುವ ಆತಂಕಗಳಿಗೆ ಸಂಬಂಧಿಸಿದಂತೆ ವಲಯವಾರು ಪರಿಹಾರಕ್ಕಾಗಿ ಆರ್‌ಬಿಐ ಮತ್ತು ಕೇಂದ್ರ ಸರ್ಕಾರ ಕೈಗೊಳ್ಳಲಿರುವ ಕ್ರಮ ಬಹಿರಂಗಪಡಿಸುವಂತೆ ಆದೇಶಿಸಿದ್ದು, ಅಕ್ಟೋಬರ್ 13ಕ್ಕೆ ವಿಚಾರಣೆ ಮುಂದೂಡಿದೆ.
₹2 ಕೋಟಿ ವರೆಗಿನ ಸಣ್ಣ ಪಾಲ ಪಡೆದವರಿಗೆ ಸಾಲ ಮರುಪಾವತಿ ಮುಂದೂಡಿಕೆ ಸೌಲಭ್ಯ (ಮೊರಟೊರಿಯಂ) ಪಡೆದಿರುವ ಅವಧಿಯಲ್ಲಿ ವಿಧಿಸಲಾಗಿರುವ ಚಕ್ರಬಡ್ಡಿ ಮನ್ನಾ ಮಾಡಲು ನಿರ್ಧರಿಸುವುದಾಗಿ ಕೇಂದ್ರ ಸರ್ಕಾರ ಈಚೆಗೆ ಅಫಿಡವಿಟ್ ಸಲ್ಲಿಸಿದ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಲಾಗಿತ್ತು. ರಿಯಲ್ ಎಸ್ಟೇಟ್ ಒಕ್ಕೂಟವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು “ಕೇಂದ್ರ ಸರ್ಕಾರದ ಅಫಿಡವಿಟ್ ರಿಯಲ್ ಎಸ್ಟೇಟ್ ಒಕ್ಕೂಟವನ್ನು ಒಳಗೊಂಡಿಲ್ಲ. ಕೇಂದ್ರ ಸರ್ಕಾರದ ಪ್ರತಿಕ್ರಿಯೆಲ್ಲಿ ಅಂಕಿ-ಸಂಖ್ಯೆಗಳಿದ್ದು, ಅದರ ವಿರುದ್ಧ ಪ್ರತಿಕ್ರಿಯಿಸಲು ಕಾಲಾವಕಾಶ ಬೇಕು" ಎಂದು ಮನವಿ ಮಾಡಿದರು.
ಅಕ್ಟೋಬರ್ 2ರಂದು ಸಲ್ಲಿಸಲಾಗಿರುವ ಕೇಂದ್ರ ಸರ್ಕಾರದ ಅಫಿಡವಿಟ್‌ನಲ್ಲಿ ರಿಯಲ್ ಎಸ್ಟೇಟ್ ಒಕ್ಕೂಟ ಮತ್ತು ವಿದ್ಯುತ್ ಉತ್ಪಾದಕರನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಹಿರಿಯ ವಕೀಲ ಆರ್ಯಮಾ ಸುಂದರಂ ನ್ಯಾಯಾಲಯದ ಗಮನಸೆಳೆದರು.
ಕಾಮತ್ ಸಮಿತಿಯ ವರದಿಯನ್ನು ದಾಖಲೆಯ ರೂಪದಲ್ಲಿ ಸಲ್ಲಿಸಲಾಗಿಲ್ಲ. ಸಾಲ ಮರುಪಾವತಿ ಮುಂದೂಡಿಕೆ (ಮೊರಟೊರಿಯಂ) ಅವಧಿಯಲ್ಲಿ ಬಡ್ಡಿ ಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಆರ್‌ಬಿಐ ಸಮಿತಿ ರಚಿಸಿದ್ದು, ಸಮಿತಿಯು ವಿವಿಧ ವಲಯಗಳು ಮತ್ತು ಅವರ ಸಮಸ್ಯೆಗಳನ್ನು ದಾಖಲಿಸಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯವು ವರದಿಯನ್ನು ದಾಖಲೆಯ ರೂಪದಲ್ಲಿ ಸಲ್ಲಿಸುವಂತೆ ಆರ್‌ಬಿಐ ಮತ್ತು ಕೇಂದ್ರ ಸರ್ಕಾರಕ್ಕೆ ಸೂಚಿಸಿತು. ವರದಿ ಸಲ್ಲಿಸಲಾಗುವುದು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಹಿರಿಯ ವಕೀಲ ವಿ ಗಿರಿ ತಿಳಿಸಿದರು.
ಕೇಂದ್ರ ಸರ್ಕಾರದ ಅಫಿಡವಿಟ್‌ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ದಾಖಲಿಸಲು ಪ್ರತಿವಾದಿಗಳಿಗೆ ಕಾಲಾವಕಾಶ ನೀಡಲಾಗಿದ್ದು, ಹೆಚ್ಚುವರಿ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಹಾಗೂ ಆರ್‌ಬಿಐಗೆ ಸೂಚಿಸಲಾಗಿದೆ.
ವಿಳಂಬ ಮಾಡಿದಷ್ಟೂ ಬ್ಯಾಂಕ್‌ಗಳಿಗೆ ತೊಂದರೆಯಾಗುತ್ತದೆ ಎಂದಿರುವ ಭಾರತೀಯ ಬ್ಯಾಂಕ್ ಗಳ ಒಕ್ಕೂಟ (ಐಬಿಎ) ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ಕೇಂದ್ರವು ಪರಿಹಾರದ ವಿಚಾರದಲ್ಲಿ ಎರಡು ಬಗೆಯ ವಿಧಾನವನ್ನು ಅಳವಡಿಸಿಕೊಂಡಿದ್ದು, ಸಣ್ಣ ಸಾಲಗಾರರಿಗೆ ಪರಿಹಾರದ ವಿಧಾನ ಒಂದಾದರೆ, ಕಾಮತ್ ಸಮಿತಿಯು ವಲಯವಾರು ಗಮನಹರಿಸಿರುವ ವಿಧಾನ ಮತ್ತೊಂದಿದೆ ಎಂದು ಪೀಠಕ್ಕೆ ತಿಳಿಸಿದರು.
ಕೋವಿಡ್ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಆರ್‌ಬಿಐ ಸುತ್ತೋಲೆಯಲ್ಲಿ ಉಲ್ಲೇಖಿಸಿದ್ದ ಬಡ್ಡಿ ವಿಚಾರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು. ಈ ವೇಳೆ ಚಕ್ರಬಡ್ಡಿ ಮನ್ನಾ ಸುತ್ತ ಚರ್ಚೆ ನಡೆಯಿತೇ ವಿನಾ ಅವಧಿ ಸಾಲದ ಮೇಲಿನ ಸಂಪೂರ್ಣ ಬಡ್ಡಿ ಮನ್ನಾದ ಮೇಲಲ್ಲ. ಕೋವಿಡ್- 19 ಹಿನ್ನೆಲೆಯಲ್ಲಿ ಪರಿಚಯಿಸಲಾದ ಆರು ತಿಂಗಳ ಮೊರಟೋರಿಯಂ ಅವಧಿಯಲ್ಲಿ ₹2 ಕೋಟಿಯವರೆಗಿನ ವೈಯಕ್ತಿಕ ಮತ್ತು ಸಣ್ಣ ಸಾಲಗಳ ಮೇಲಿನ ಚಕ್ರಬಡ್ಡಿಯನ್ನು ಮನ್ನಾ ಮಾಡುವುದಾಗಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಕೇಂದ್ರ ಸರ್ಕಾರ ವಿವರಿಸಿತ್ತು.