
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಳೆದ ತಿಂಗಳು ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿಯು (ಸಿಎಟಿ) ಹಿರಿಯ ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ವಿಕಾಸ್ ಅವರ ಅಮಾನತು ಬದಿಗೆ ಸರಿಸಿರುವ ಆದೇಶದಲ್ಲಿ ತನ್ನ ಕುರಿತು ವ್ಯಕ್ತಪಡಿಸಿರುವ ಹೇಳಿಕೆಗಳಿಗೆ ಆಕ್ಷೇಪಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಐಪಿಎಲ್ ತಂಡವು ಮಂಗಳವಾರ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದೆ. ಅರ್ಜಿಯು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.
ಐಪಿಎಲ್ ಟ್ರೋಫಿ ಗೆದ್ದುದರಿಂದ ವಿಜಯೋತ್ಸವ ಆಚರಿಸುವುದಕ್ಕೆ ಕರೆ ನೀಡಿದ್ದ ಆರ್‌ಸಿಬಿಯಿಂದಾಗಿ ಅಪಾರ ಪ್ರಮಾಣದಲ್ಲಿ ಜನರು ನೆರೆದಿದ್ದು, 11 ಮಂದಿ ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ. ಮೇಲ್ನೋಟಕ್ಕೆ ಘಟನೆಗೆ ಆರ್‌ಸಿಬಿ ಕಾರಣ. ಸೂಕ್ತ ಸಂದರ್ಭದಲ್ಲಿ ಆರ್‌ಸಿಬಿಯು ರಾಜ್ಯ ಸರ್ಕಾರದಿಂದ ವಿಜಯೋತ್ಸವಕ್ಕೆ ಅನುಮತಿಯನ್ನೂ ಪಡೆದಿರಲಿಲ್ಲ ಎಂದು ಸಿಎಟಿ ಆದೇಶದಲ್ಲಿ ಹೇಳಿತ್ತು.
ಇದರಿಂದಾಗಿ ಪೊಲೀಸರು ಜನಸಂದಣಿ ನಿಯಂತ್ರಿಸಲು ಕ್ರಮಕೈಗೊಳ್ಳುವುದು ಅಸಾಧ್ಯವಾಗಿತ್ತು ಎಂದು ಹೇಳಿದ್ದ ಸಿಎಟಿಯು ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ವಿಕಾಸ್ ಅವರ ಅಮಾನತು ಆದೇಶವನ್ನು ಬದಿಗೆ ಸರಿಸುವಾಗ ಮೇಲಿನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.
ತನ್ನ ವಾದ ಆಲಿಸದೇ ಏಕಪಕ್ಷೀಯವಾಗಿ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ ಎಂದು ಆರ್‌ಸಿಬಿಯು ಸಿಎಟಿ ಆದೇಶಕ್ಕೆ ಆಕ್ಷೇಪಿಸಿದೆ. “ಸಿಎಟಿಯ ಮುಂದೆ ಪಕ್ಷಕಾರನಾಗಿರದಿದ್ದರೂ ಮೇಲ್ನೋಟಕ್ಕೆ ಜೂನ್ 4ರಂದು ನಡೆದ ದುರ್ಘಟನೆಗೆ ತಾನು ಜವಾಬ್ದಾರಿ ಎಂದು ಹೇಳಿದೆ. ಅಲ್ಲಿ ಪಕ್ಷಕಾರನಾಗಿರದೇ ಇರುವಾಗ ಸಿಎಟಿ ಆದೇಶದಲ್ಲಿನ ಅಂಶಗಳು ಸಹಜ ನ್ಯಾಯ ತತ್ವಕ್ಕೆ ವಿರುದ್ಧವಾಗಿದೆ. ಇಡೀ ಪ್ರಕರಣದಲ್ಲಿ ತನ್ನ ವಾದ ಮಂಡಿಸಲು ಅವಕಾಶ ನೀಡದೇ ಸಿಎಟಿಯು ಅಭಿಪ್ರಾಯ ವ್ಯಕ್ತಪಡಿಸಿದೆ” ಎಂದು ವಕೀಲ ರಘುರಾಮ್ ಕಡಂಬಿ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ಆರ್‌ಸಿಬಿ ಆಕ್ಷೇಪಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳಿಂದ ವಿಜಯೋತ್ಸವಕ್ಕೆ ಮೂರರಿಂದ ಐದು ಲಕ್ಷ ಜನರು ಸೇರಿದಕ್ಕೆ ಆರ್‌ಸಿಬಿಯೇ ಜವಾಬ್ದಾರಿ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ವಿಜಯೋತ್ಸವ ಆಚರಿಸಲು ಆರ್‌ಸಿಬಿ ಪೊಲೀಸರಿಂದ ಅನುಮತಿ ಮತ್ತು ಒಪ್ಪಿಗೆ ಪಡೆದಿರಲಿಲ್ಲ. ಕಾರ್ಯಕ್ರಮ ನಡೆಸುವ ಬಗ್ಗೆ ದಿಢೀರ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿತು. ಆ ಮಾಹಿತಿಯೇ ಸಾರ್ವಜನಿಕರು ಸೇರಲು ಕಾರಣವಾಯಿತು ಎಂದು ಸಿಎಟಿ ಅವಲೋಕಿಸಿದೆ.
ಜೂನ್ 3ರಂದು ಆರ್‌ಸಿಬಿ ಐಪಿಎಲ್ ಟ್ರೋಫಿ ಗೆದ್ದಿತ್ತು. ಕಾಲಾವಕಾಶ ಕೊರೆತೆಯಿಂದ ಜೂನ್ 4ರಂದು ವಿಜಯೋತ್ಸವಕ್ಕೆ ಸಮರ್ಪಕವಾಗಿ ಸಿದ್ಧತೆ ನಡೆಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಸಿದ್ಧತೆ ನಡಸಲು ಪೊಲೀಸರಿಗೆ ಸೂಕ್ತ ಕಾಲಾವಕಾಶ ನೀಡಿಲ್ಲ. ಜೂನ್ 3-4ರ ಇಡೀ ರಾತ್ರಿ ಸಾರ್ವಜನಿಕರು ಬೀದಿಯಲ್ಲಿ ವಿಜಯೋತ್ಸವ ನಡೆಸುತ್ತಿದ್ದರು. ಸಾರ್ವಜನಿಕರ ನಿರ್ವಹಣೆಯಲ್ಲಿ ಪೊಲೀಸ್ ವ್ಯವಸ್ಥೆ ನಿರತವಾಗಿತ್ತು. ಇದೇ ವೇಳೆ ವಿಧಾನ ಸೌಧದ ಆವರಣದಲ್ಲಿ ರಾಜ್ಯ ಸರ್ಕಾರ ಮತ್ತೊಂದು ಕಾರ್ಯಕ್ರಮ ಆಯೋಜಿಸಿತ್ತು. ವಿಧಾನಸೌಧಕ್ಕೂ ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ವೇಳೆ ಆರ್‌ಸಿಬಿ ಉಪದ್ರವ ಸೃಷ್ಟಿಸಿದೆ ಎಂದು ಸಿಎಟಿ ಹೇಳಿತ್ತು.