ಪರೀಕ್ಷೆಯ ಪಾವಿತ್ರ್ಯತೆ ಕಾಪಾಡಲು, ಸಕಾರಣದಿಂದ ಪಿಎಸ್‌ಐ ಪರೀಕ್ಷೆ ರದ್ದು: ಹೈಕೋರ್ಟ್‌

ಕಳಂಕಿತರು ಮತ್ತು ಕಳಂಕರಹಿತರನ್ನು ಪ್ರತ್ಯೇಕಿಸಿ ಪಿಎಸ್‌ಐ ನೇಮಕಾತಿ ಮುಂದುವರಿಸುವಂತೆ ಕೋರಿದ್ದ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿರುವ ನ್ಯಾಯಾಲಯ.
Justices P S Dinesh Kumar and T G Shivashankare Gowda
Justices P S Dinesh Kumar and T G Shivashankare Gowda

ಪಿಎಸ್‌ಐ ನೇಮಕಾತಿಗೆ ಮರು ಪರೀಕ್ಷೆ ನಡೆಸುವ ನಿರ್ಧಾರ ತರ್ಕಬದ್ಧವಾಗಿದ್ದು, ಪರೀಕ್ಷೆಯ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಇದ್ದ ಏಕೈಕ ಆಯ್ಕೆ ಮರುಪರೀಕ್ಷೆ ಎಂದು ಕರ್ನಾಟಕ ಹೈಕೋರ್ಟ್‌ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ. ಅಲ್ಲದೇ, ಅಭ್ಯರ್ಥಿಗಳಿಗೆ ಶುಲ್ಕ ವಿಧಿಸಬಾರದು ಮತ್ತು ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಸ್ವತಂತ್ರ ಸಂಸ್ಥೆಗೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಕಳಂಕಿತರು ಮತ್ತು ಕಳಂಕರಹಿತರನ್ನು ಪ್ರತ್ಯೇಕಿಸಿ ಪಿಎಸ್‌ಐ ನೇಮಕಾತಿ ಮುಂದುವರಿಸುವಂತೆ ಕೋರಿದ್ದ ಅರ್ಜಿದಾರರ ಮನವಿಯನ್ನು ನ್ಯಾಯಮೂರ್ತಿಗಳಾದ ಪಿ ಎಸ್‌ ದಿನೇಶ್‌ ಕುಮಾರ್‌ ಮತ್ತು ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠವು ತಳ್ಳಿ ಹಾಕಿದೆ.

“ಅರ್ಜಿದಾರರ ಮನವಿಯನ್ನು ಪರಿಗಣಿಸುವುದಾದರೆ ಕಳಂಕಿತರು ಮತ್ತು ಕಳಂಕರಹಿತ ಅಭ್ಯರ್ಥಿಗಳ ಉತ್ತರ ಪತ್ರಿಕೆಯನ್ನು ಪ್ರತ್ಯೇಕಿಸಬೇಕಿದ್ದು, ಕಳಂಕರಹಿತ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಬೇಕಾಗುತ್ತದೆ. ಈ ಆಯ್ಕೆಯು ವಿವಿಧ ಕ್ರಿಮಿನಲ್‌ ನ್ಯಾಯಾಲಯಗಳಲ್ಲಿ ಸಲ್ಲಿಸಲಾಗಿರುವ ಆರೋಪ ಪಟ್ಟಿಯಲ್ಲಿ ಉತ್ತರ ಪಡೆಯಲು ಬ್ಲೂಟೂತ್‌ ಬಳಕೆ ಮಾಡಲಾಗಿದೆ ಎಂಬ ಅಂಶವನ್ನು ತಳ್ಳಿಹಾಕಲಿದೆ. ಹೀಗಾಗಿ, ರಾಜ್ಯ ಸರ್ಕಾರದ ಮುಂದೆ ಇದ್ಧ ಅತ್ಯುತ್ತಮ ಆಯ್ಕೆ ಯಾವುದು? ತನಿಖಾ ವರದಿ ಮತ್ತು ನ್ಯಾಯಾಲಯಗಳಿಗೆ ಸಲ್ಲಿಸಲಾಗಿರುವ ಆರೋಪ ಪಟ್ಟಿ, ನೇಮಕಾತಿ ವಿಭಾಗದ ಮುಖ್ಯಸ್ಥರು ಹಗರಣದಲ್ಲಿ ಭಾಗಿಯಾಗಿರುವುದು ಎಲ್ಲವನ್ನೂ ಒಟ್ಟಾಗಿ ನೋಡಿದರೆ ಪರೀಕ್ಷೆ ರದ್ದುಪಡಿಸಿ, ಮರು ಪರೀಕ್ಷೆ ನಡೆಸುವ ನಿರ್ಧಾರವು ತರ್ಕಬದ್ಧ ಮತ್ತು ಪರೀಕ್ಷೆಯ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಉತ್ತಮ ನಿರ್ಧಾರವಾಗಿದೆ” ಎಂದು ನ್ಯಾಯಾಲಯ ಹೇಳಿದೆ.

“ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಹಲವು ರೀತಿಯ ಅಕ್ರಮಗಳ ಆರೋಪಗಳಿವೆ. ಪ್ರಶ್ನೆಪತ್ರಿಕೆ ಮೊದಲೇ ಸೋರಿಕೆಯಾದ ಕಾರಣದಿಂದಲೇ ಪ್ರಶ್ನೆಪತ್ರಿಕೆಗೆ ಅನುಗುಣವಾಗಿ ಅಭ್ಯರ್ಥಿಗೆ ಬ್ಲೂಟೂತ್ ಮೂಲಕ 3ನೇ ವ್ಯಕ್ತಿ ಉತ್ತರಿಸಿರುವ ಸಾಧ್ಯತೆ ಇದೆ. ನೇಮಕ ವಿಭಾಗದ ಪೊಲೀಸ್ ಎಡಿಜಿಪಿಯೇ ಉತ್ತರಪತ್ರಿಕೆ ಒಎಂಆರ್ ಶೀಟ್‌ಗಳನ್ನು ತಿರುಚಿರುವುದರಿಂದ ಪರೀಕ್ಷೆಯಲ್ಲಿನ ಸಾರ್ವಜನಿಕ ವಿಶ್ವಾಸವೇ ಹಾಳಾಗಿದೆ. 53 ಅಭ್ಯರ್ಥಿಗಳ ವಿರುದ್ಧ ಆರೋಪಪಟ್ಟಿ ದಾಖಲಾಗಿದ್ದುಘಿ, 52 ಅಭ್ಯರ್ಥಿಗಳನ್ನು ಡಿಬಾರ್‌ಮಾಡಲಾಗಿದೆ. ಬ್ಲೂಟೂತ್ ಬಳಕೆಯಾಗಿರುವುದರಿಂದ ಇನ್ನೂ ಕೆಲವರು ಅಕ್ರಮದಲ್ಲಿ ಭಾಗಿಯಾದ ಸಂಶಯಗಳಿವೆ. ಹೀಗಾಗಿ ಕಳಂಕಿತರು, ಕಳಂಕಿತರಲ್ಲದವರನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಹೇಳಿದೆ.

“ಅಕ್ರಮಕ್ಕೆ ಸಂಬಂಧಿಸಿದಂತೆ ಬ್ಲೂಟೂತ್ ಬಳಕೆ ಸಿದ್ಧಾಂತವನ್ನು ಈ ಹಂತದಲ್ಲಿ ಸಂಪೂರ್ಣವಾಗಿ ತಳ್ಳಿಹಾಕಲಾಗದು. ಏಕೆಂದರೆ ಇದರ ಸಂಬಂಧ ಅಧೀನ ನ್ಯಾಯಾಲಯಗಳಲ್ಲಿ ಹಲವು ಪ್ರಕರಣಗಳು ಬಾಕಿ ಇವೆ. ಬ್ಲೂಟೂತ್ ಬಳಸಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟವಾಗಿ ದೃಢಪಡುವವರೆಗೂ ಪರೀಕ್ಷೆಯನ್ನು ರದ್ದು ಮಾಡಿರುವ ಆಡಳಿತದ ಆದೇಶದಲ್ಲಿ ತಪ್ಪಾಗಿದೆ ಎಂದು ಹೇಳಲಾಗದು. ಈಗಲೇ ನ್ಯಾಯಾಲಯ ಬ್ಲೂಟೂತ್ ಬಳಕೆ ಬಗ್ಗೆ ಏನಾದರೂ ದಾಖಲಿಸಿದರೆ ಅದು ಅಧೀನ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಮೇಲೆ ಪರಿಣಾಮ ಬೀರುತ್ತದೆ” ಎಂದು ಆದೇಶಿಸಿದೆ.

Attachment
PDF
Chandan N V & others Vs State of Karnataka.pdf
Preview

Related Stories

No stories found.
Kannada Bar & Bench
kannada.barandbench.com