ಜನಸಂಖ್ಯಾ ನಿಯಂತ್ರಣ ಕರಡು ಮಸೂದೆ ಸಿದ್ಧಪಡಿಸಿದ ಉತ್ತರಪ್ರದೇಶ ಸರ್ಕಾರ: ವಿವಿಧ ನಿರ್ಬಂಧ

ಮಸೂದೆ ಕಾಯಿದೆಯಾಗಿ ರೂಪುಗೊಂಡ ನಂತರ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯುವ ಯಾವುದೇ ದಂಪತಿ ವಿವಿಧ ನಿರ್ಬಂಧಗಳಿಗೆ ಒಳಪಡಲಿದ್ದಾರೆ.
ಜನಸಂಖ್ಯಾ ನಿಯಂತ್ರಣ ಕರಡು ಮಸೂದೆ ಸಿದ್ಧಪಡಿಸಿದ ಉತ್ತರಪ್ರದೇಶ ಸರ್ಕಾರ: ವಿವಿಧ ನಿರ್ಬಂಧ

ಮ ಉತ್ತರಪ್ರದೇಶ ಜನಸಂಖ್ಯಾ (ನಿಯಂತ್ರಣ, ಸ್ಥಿರೀಕರಣ ಹಾಗೂ ಕಲ್ಯಾಣ) ಮಸೂದೆ- 2021ನ್ನು ಸಾರ್ವಜನಿಕವಾಗಿ ಪ್ರಕಟಿಸಿರುವ ರಾಜ್ಯ ಕಾನೂನು ಆಯೋಗ ಜನರಿಂದ ಸಲಹೆಗಳನ್ನು ಆಹ್ವಾನಿಸಿದೆ.

ಮಸೂದೆಯ ಉದ್ದೇಶ

ಸುಸ್ಥಿರ ಅಭಿವೃದ್ಧಿಯನ್ನು ಪ್ರೋತ್ಸಾಹಿಸಲು ರಾಜ್ಯದ ಜನಸಂಖ್ಯೆ ನಿಯಂತ್ರಿಸುವುದು ಮತ್ತು ಸ್ಥಿರೀಕರಿಸುವುದು. ಅಲ್ಲದೆ ಪ್ರೋತ್ಸಾಹಕ ಮತ್ತು ನಿರ್ಬಂಧಕಗಳ ಮೂಲಕ ರಾಜ್ಯದ ಅರ್ಹ ದಂಪತಿಗೆ ಎರಡು ಮಕ್ಕಳನ್ನು ಹೊಂದುವಂತೆ ಕಾಯಿದೆ ಜಾರಿಗೊಳಿಸುವ ಮುಖೇನ ಉತ್ತೇಜನ ನೀಡುವುದು. ಆ ಮೂಲಕ ರಾಜ್ಯದ ಜನಸಂಖ್ಯೆ ನಿಯಂತ್ರಿಸಲು, ಸ್ಥಿರಗೊಳಿಸಲು ಕಲ್ಯಾಣ ಉಂಟು ಮಾಡಲು ಕ್ರಮ ಕೈಗೊಳ್ಳುವುದು.

ಮಸೂದೆಯ ನಿಬಂಧನೆ ವಿವಾಹಿತ ದಂಪತಿಗಳಿಗೆ ಅನ್ವಯವಾಗಲಿದ್ದು ಹುಡುಗನಿಗೆ ಇಪ್ಪತ್ತೊಂದು ವರ್ಷಕ್ಕಿಂತ ಕಡಿಮೆ ವಯಸ್ಸಾಗಿರಬಾರದು ಮತ್ತು ಹುಡುಗಿಯ ವಯೋಮಿತಿ ಹದಿನೆಂಟು ವರ್ಷ ಮೀರುವಂತಿಲ್ಲ.

ನಿರ್ಬಂಧಗಳು

ಮಸೂದೆ ಕಾಯಿದೆಯಾಗಿ ರೂಪುಗೊಂಡ ನಂತರ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯುವ ಯಾವುದೇ ದಂಪತಿ ಈ ಕೆಳಗಿನ ನಿರ್ಬಂಧಗಳಿಗೆ ಒಳಪಡಲಿದ್ದಾರೆ:

- ಸರ್ಕಾರದ ಕಲ್ಯಾಣ ಯೋಜನೆಗಳಿಗೆ ನಿರ್ಬಂಧ

- ನಾಲ್ವರು ಕುಟುಂಬ ಸದಸ್ಯರಿಗೆ ಮಾತ್ರ ಪಡಿತರ ಚೀಟಿ

- ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಅಂತಹವರು ಪಾಲ್ಗೊಳ್ಳುವಂತಿಲ್ಲ

- ಎರಡು ಮಕ್ಕಳ ನೀತಿ ಉಲ್ಲಂಘಿಸಿದವರು ಮಸೂದೆಯ 10ನೇ ಸೆಕ್ಷನ್‌ ಪ್ರಕಾರ ಸರ್ಕಾರಿ ನೌಕರಿ ಪಡೆಯುವಂತಿಲ್ಲ.

- ಕಾಯಿದೆ ಜಾರಿಯಾಗುವ ಸಂದರ್ಭದಲ್ಲಿ ಎರಡು ಮಕ್ಕಳನ್ನು ಹೊಂದಿರುವ ಸರ್ಕಾರಿ ನೌಕರರು ನಂತರ ಎರಡು ಮಕ್ಕಳ ನೀತಿಯನ್ನು ಉಲ್ಲಂಘಿಸುವಂತಿಲ್ಲ.

- ಕಾಯಿದೆ ಉಲ್ಲಂಘಿಸಿದರೆ ಸರ್ಕಾರಿ ಸೇವೆಗಳಲ್ಲಿ ಬಡ್ತಿ ಪಡೆಯುವುದು ಮತ್ತು ಸರ್ಕಾರಿ ಸಬ್ಸಿಡಿ ಪಡೆಯುವುದನ್ನು ಕಾಯಿದೆಯ 11 ಮತ್ತು 12ನೇ ಸೆಕ್ಷನ್‌ಗಳು ನಿರ್ಬಂಧಿಸುತ್ತವೆ.

ಯಾರಿಗೆಲ್ಲಾ ವಿನಾಯಿತಿ?

ಎರಡನೇ ಗರ್ಭಧಾರಣೆ ವೇಳೆ ಒಂದಕ್ಕಿಂತ ಹೆಚ್ಚು ಮಕ್ಕಳಾಗಿದ್ದವರಿಗೆ, ದತ್ತು ತೆಗೆದುಕೊಂಡವರಿಗೆ, ಮೊದಲ ಮತ್ತು ಎರಡನೇ ಮಗು ಅಂಗವೈಕಲ್ಯಕ್ಕೆ ತುತ್ತಾಗಿದ್ದರೆ, ಮಗು ಮರಣ ಹೊಂದಿದ್ದರೆ ಅಂತಹ ಪೋಷಕರಿಗೆ ಕಾಯಿದೆಯಿಂದ ವಿನಾಯಿತಿ ನೀಡಲಾಗಿದೆ.

ಈಗಾಗಲೇ ಸರ್ಕಾರಿ ನೌಕರಿ ಪಡೆದವರಿಗೆ ನಿರ್ಬಂಧ ಅನ್ವಯಿಸದು.

ಏನೆಲ್ಲಾ ಪ್ರೋತ್ಸಾಹ?

ತಾನು ಅಥವಾ ತನ್ನ ಸಂಗಾತಿ ಸಂತಾನಹರಣ ಚಿಕಿತ್ಸೆಗೆ ಒಳಗಾಗಿ ಎರಡು ಮಕ್ಕಳ ನೀತಿ ಅಳವಡಿಸಿಕೊಂಡ ಸರ್ಕಾರಿ ನೌಕರರಿಗೆ ಕೆಳಗಿನ ಪ್ರೋತ್ಸಾಹಕಗಳನ್ನು ನೀಡಲಾಗಿದೆ;

(ಎ) ಎರಡು ಬಾರಿ ಹೆಚ್ಚುವರಿಯಾಗಿ ವೇತನ ಹೆಚ್ಚಳ,
(ಬಿ) ಒಂದೇ ಮಗು ಪಡೆದಿದ್ದರೆ ಅಂತಹ ಮಗುವಿಗೆ 20 ವರ್ಷಗಳಾಗುವವರೆಗೆ ಉಚಿತ ಆರೋಗ್ಯ ಸೌಲಭ್ಯ ಮತ್ತು ವಿಮಾ ರಕ್ಷಣೆ
(ಸಿ) ಒಂದು ಮಗು ಹೊಂದಿದ್ದರೆ ಆ ಮಗುವಿಗೆ ಐಐಎಂ, ಎಐಐಎಂಎಸ್‌ ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಕ್ಕೆ ಆದ್ಯತೆ
(ಡಿ) ಪದವಿ ಹಂತದವರೆಗೆ ಉಚಿತ ಶಿಕ್ಷಣ
(ಇ) ಹೆಣ್ಣು ಮಗು ಆಗಿದ್ದರೆ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿವೇತನ
(ಎಫ್) ಸರ್ಕಾರಿ ಉದ್ಯೋಗಗಳಲ್ಲಿ ಒಂದು ಮಗುವಿಗೆ ಆದ್ಯತೆ
(ಜಿ) ಸೂಚಿಸಲಾದ ಇತರ ಪ್ರಯೋಜನಗಳು ಮತ್ತು ಪ್ರೋತ್ಸಾಹಕಗಳು

ಬಡತನ ರೇಖೆಗಿಂತ ಕೆಳಗಿರುವ ದಂಪತಿಗೆ ವಿಶೇಷ ಲಾಭ

ಮಸೂದೆಯ ಸೆಕ್ಷನ್ 7ರ ಪ್ರಕಾರ, ಬಡತನ ರೇಖೆಗಿಂತ ಕೆಳಗಿರುವ ದಂಪತಿಗಳು, ಒಂದು ಮಗು ಮಾತ್ರ ಹೊಂದಿದ್ದು ಸ್ವಯಂಪ್ರೇರಿತವಾಗಿ ಸಂತಾನಹರಣ ಚಿಕಿತ್ಸೆಗೆ ಒಳಗಾಗಿದ್ದರೆ ಸರ್ಕಾರ ಒಟ್ಟು ಮೊತ್ತದ ಎಂಭತ್ತು ಸಾವಿರ ರೂಪಾಯಿಗಳ ಪ್ರೋತ್ಸಾಹಕ ಧನ ನೀಡುತ್ತದೆ. ಒಂದೇ ಮಗು ಹೆಣ್ಣಾಗಿದ್ದರೆ ಆಗ ಅಂತಹ ದಂಪತಿ ಒಂದು ಲಕ್ಷ ರೂಪಾಯಿ ಪಡೆಯಲು ಅರ್ಹರು.

ಕರಡು ಮಸೂದೆಗೆ ಸಂಬಂಧಿಸಿದ ಸಲಹೆಗಳನ್ನು ಇ-ಮೇಲ್ ವಿಳಾಸ - statelawcommission2018@gmail.com ಅಥವಾ ಅಂಚೆ ಮೂಲಕ ಕಳುಹಿಸಬಹುದು. ಸಲಹೆಗಳನ್ನು ಸ್ವೀಕರಿಸಲು ಕಡೆಯ ದಿನ ಇದೇ ಜುಲೈ 19 ಎಂದು ಆಯೋಗ ತಿಳಿಸಿದೆ.

Related Stories

No stories found.