ನ್ಯಾ. ವರ್ಮಾ ಮನೆಯಲ್ಲಿ ಅಪಾರ ಪ್ರಮಾಣದ ನಗದು ಪತ್ತೆ: ತನಿಖಾ ಸಮಿತಿ ವರದಿಯಲ್ಲೇನಿದೆ?

ಸಮಿತಿ ವಿಚಾರಣೆ ನಡೆಸಿದ ಕನಿಷ್ಠ 10 ಸಾಕ್ಷಿಗಳು ಸುಟ್ಟ ಅಥವಾ ಅರ್ಧ ಸುಟ್ಟ ನೋಟುಗಳನ್ನು ನೋಡಿದ್ದೇವೆಂದು ಒಪ್ಪಿಕೊಂಡಿದ್ದಾರೆ.
Justice Yashwant Varma
Justice Yashwant Varma
Published on

ಅಲಾಹಾಬಾದ್‌ ಹೈಕೋರ್ಟ್‌ ನ್ಯಾಯಮೂರ್ತಿ ಯಶವಂತ್‌ ವರ್ಮಾ ಅವರು ದೆಹಲಿ ಹೈಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಅವರ ನಿವಾಸದಲ್ಲಿ ಅಪಾರ ಪ್ರಮಾಣದ ಸುಟ್ಟು ಕರಕಲಾದ ನಗದು ರಾಶಿ ಪತ್ತೆಯಾದ ಆರೋಪದ ತನಿಖೆಗಾಗಿ ನೇಮಿಸಿದ್ದ ತ್ರಿಸದಸ್ಯ ನ್ಯಾಯಮೂರ್ತಿಗಳ ವರದಿ ಹಲವು ಕುತೂಹಲಕರ ಸಂಗತಿಗಳನ್ನು ಬಯಲು ಮಾಡಿದೆ.

ಹತ್ತು ದಿನಗಳ ಅವಧಿಯಲ್ಲಿ 55 ಸಾಕ್ಷ್ಯ ಸಂಗ್ರಹಿಸಿ, ಘಟನೆ ನಡೆದ ಸ್ಥಳಕ್ಕೆ ಹಲವು ಬಾರಿ ಭೇಟಿಯಿತ್ತು ವಿಚಾರಣೆ ನಡೆಸಿ ವರದಿ ಸಿದ್ಧಪಡಿಸಲಾಗಿತ್ತು.

ಬೆಂಕಿ ನಂದಿಸುವ ಪ್ರಕ್ರಿಯೆಯಲ್ಲಿ ಕಂಡುಬಂದ ಮತ್ತು ಅರ್ಧ ಸುಟ್ಟ ಕರೆನ್ಸಿ ನೋಟುಗಳು ಅತೀವ ಅನುಮಾನಾಸ್ಪದ ವಸ್ತುಗಳಾಗಿದ್ದು ನ್ಯಾಯಮೂರ್ತಿ ವರ್ಮಾ ಅಥವಾ ಅವರ ಕುಟುಂಬ ಸದಸ್ಯರ ಮೌನ ಅಥವಾ ಸಕಾರಾತ್ಮಕ ಸಮ್ಮತಿಯಿಲ್ಲದೆ ಅವರ ಮನೆಯ ದಾಸ್ತಾನು ಕೋಣೆಯಲ್ಲಿ ಇಡುವಂತಹ ಸಣ್ಣ ಪ್ರಮಾಣ ಅಥವಾ ಮೌಲ್ಯದ ನೋಟುಗಳು ಅವುಗಳಲ್ಲ ಎಂದು ಅದು ಹೇಳಿದೆ.

ನ್ಯಾಯಮೂರ್ತಿ ವರ್ಮಾ ಅವರ ಪ್ರಕರಣದ ಕುರಿತು ತನಿಖೆಗೆ ನೇಮಿಸಲಾಗಿದ್ದ ಸಮಿತಿಯಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು, ಹಿಮಾಚಲ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಿ ಎಸ್ ಸಂಧವಾಲಿಯಾ ಮತ್ತು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಮನ್ ಇದ್ದರು.

ವರದಿಯ ಪ್ರಮುಖಾಂಶಗಳು

  • ನ್ಯಾ. ವರ್ಮಾ ಅವರ ಅಧಿಕೃತ ನಿವಾಸದಲ್ಲಿ ನಗದು ಪತ್ತೆಯಾಗಿದೆ.

  • ನ್ಯಾಯಮೂರ್ತಿ ವರ್ಮಾ ಮತ್ತು ಅವರ ಕುಟುಂಬ ಸದಸ್ಯರ ರಹಸ್ಯ ಅಥವಾ ಸಕ್ರಿಯ ನಿಯಂತ್ರಣದಲ್ಲಿ ಕೊಠಡಿ ಇದ್ದು ಸುಟ್ಟ ನಗದನ್ನು ದಾಸ್ತಾನು ಕೋಣೆಯಿಂದ 15.03.2025 ರ ಬೆಳಗಿನ ಜಾವ ತೆಗೆದುಹಾಕಿರುವುದು ಸಾಬೀತಾಗಿದೆ.

  • ದಾಖಲೆಯಲ್ಲಿರುವ ನೇರ ಮತ್ತು ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಗಮನಿಸಿದಾಗ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು 22.03.2025ರಂದು ಬರೆದ ಪತ್ರದಲ್ಲಿ ಉಲ್ಲೇಖಿಸಲಾದ ಆರೋಪಗಳಲ್ಲಿ ಸಾಕಷ್ಟು ಹುರುಳಿದೆ.

  • ಅಲಾಹಾಬಾದ್‌ ಹೈಕೋರ್ಟ್‌ ನ್ಯಾಯಮೂರ್ತಿ ವರ್ಮಾ ಅವರನ್ನು ಪದಚ್ಯುತಗೊಳಿಸಲು ವಿಚಾರಣೆ ಆರಂಭಿಸುವುದಕ್ಕಾಗಿ ಸೂಚಿಸುವಷ್ಟು ಆರೋಪಗಳು ಗಂಭೀರವಾಗಿವೆ ಎಂದು ಸಮಿತಿ ದೃಢವಾಗಿ ಅಭಿಪ್ರಾಯಪಡುತ್ತಿದೆ.

  • ಸಮಿತಿಯು ವಿಚಾರಣೆ ನಡೆಸಿದ ಕನಿಷ್ಠ 10 ಸಾಕ್ಷಿಗಳು ಸುಟ್ಟ ಅಥವಾ ಅರ್ಧ ಸುಟ್ಟ ಕರೆನ್ಸಿ ನೋಟುಗಳನ್ನು ನೋಡಿದ್ದೇವೆಂದು ಒಪ್ಪಿಕೊಂಡಿದ್ದಾರೆ.

  • ದಾಸ್ತಾನು ಕೋಣೆಯಲ್ಲಿ ನಗದು ಪತ್ತೆಯಾಗಿದ್ದು, ಆ ದಾಸ್ತಾನು ಕೋಣೆ ನ್ಯಾ. ವರ್ಮಾ ಅವರ ನಿವಾಸದ ಆವರಣದಲ್ಲಿದೆ.

  • ದಾಸ್ತಾನು ಕೋಣೆಯಲ್ಲಿ ಸುಟ್ಟು ಹೋದ ನಗದು ಇರುವುದು ಸಾಬೀತಾಗಿರುವಾಗ ಅಲ್ಲಿ ನಗದು ಇಟ್ಟಿರುವುದು ತಾನಲ್ಲ ಎಂಬುದನ್ನು ಪುರಾವೆಗಳ ಮೂಲಕ ಸಮರ್ಥಿಸಿಕೊಳ್ಳಬೇಕಾದ ನ್ಯಾ. ವರ್ಮಾ ಅವರು ಹಾಗೆ ಮಾಡಿಲ್ಲ. 

  • ನಗದುಪತ್ತೆಯಾದ ಬಳಿಕ ಅಗ್ನಿಶಾಮಕ ದಳ ಇಲ್ಲವೇ ದೆಹಲಿ ಪೊಲೀಸರು ನ್ಯಾ. ವರ್ಮಾ ಅವರ ನಿವಾಸ ತೊರೆದ ಬಳಿಕ ಅವರ ಆಪ್ತ ಸಿಬ್ಬಂದಿ ಸುಟ್ಟ ನಗದನ್ನು ತೆರವುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬುದಕ್ಕೆ ಬಲವಾದ ಸಾಕ್ಷ್ಯ ಇದೆ.

  • ಘಟನಾ ಸ್ಥಳದ ಶುಚಿಕಾರ್ಯ ಅಥವಾ ಸಾಕ್ಷ್ಯ ನಾಶದಲ್ಲಿ ನ್ಯಾಯಮೂರ್ತಿ ವರ್ಮಾ ಅವರ ಖಾಸಗಿ ಕಾರ್ಯದರ್ಶಿ ರಾಜಿಂದರ್ ಸಿಂಗ್ ಕರ್ಕಿ ಮತ್ತು ನ್ಯಾ. ವರ್ಮಾ ಅವರ ಪುತ್ರಿ ದಿಯಾ ವರ್ಮಾ ಅವರ ಅನುಮಾನಾಸ್ಪದ ಪಾತ್ರ ಇರುವುದನ್ನು ಇಬ್ಬರೂ ನಿರಾಕರಿಸಿದ್ದರೂ ಉಳಿದ ಸಾಕ್ಷಿಗಳ ಹೇಳಿಕೆ ಹಾಗೂ ಎಲೆಕ್ಟ್ರಾನಿಕ್ ಪುರಾವೆಗಳು ಬೇರೆಯದೇ ಅಂಶಗಳನ್ನು ಸಾಬೀತುಪಡಿಸಿವೆ.

  •  ಇದಲ್ಲದೆ ನ್ಯಾ. ವರ್ಮಾ ಅಥವಾ ಅವರ ಮನೆಯ ಯಾವುದೇ ಸದಸ್ಯರು ಘಟನೆಯ ಬಗ್ಗೆ ಯಾರಿಗೂ ವರದಿ ಮಾಡಿಲ್ಲ ಅಥವಾ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಕೂಡಲೇ ಒದಗಿಸಲು ಯತ್ನಿಸಿಲ್ಲ.

  •  ನ್ಯಾ. ವರ್ಮಾ ಅವರ  ವಿರುದ್ಧ ಪಿತೂರಿ ನಡೆದಿದೆ ಎನ್ನುವುದಾದರೆ ಅವರು ತಮ್ಮ ಮನೆಯ ಭಾಗವಾಗಿರುವ ದಾಸ್ತಾನು ಕೋಣೆಯಲ್ಲಿ ಕರೆನ್ಸಿ ನೋಟುಗಳನ್ನು ಸುಟ್ಟುಹಾಕಿದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ದಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಲು ಅಥವಾ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಥವಾ ಭಾರತದ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತರಲು ಏಕೆ ನಿರ್ಧರಿಸಲಿಲ್ಲ?

  • ಬೆಂಕಿ ಅವಘಡದ ಸಮಯದಲ್ಲಿ ಭೋಪಾಲ್‌ನಲ್ಲಿದ್ದ ನ್ಯಾಯಮೂರ್ತಿಗಳು, ಮನೆಗೆ ಹಿಂದಿರುಗಿದ ತಕ್ಷಣ ದಾಸ್ತಾನು ಕೋಣೆಗೆ ಭೇಟಿ ನೀಡದಿರಲು ನಿರ್ಧರಿಸಿದರು.

  • ಮನೆಗೆ ವಿವಿಧ ಭದ್ರತಾ ಸಿಬ್ಬಂದಿಯ ಸರ್ಪಗಾವಲು ಇದ್ದು ಕುಟುಂಬ ಸದಸ್ಯರ ಅನುಮತಿಯಿಲ್ಲದೆ ಯಾರೂ ಮನೆಗೆ ಪ್ರವೇಶಿಸಲು ಸಾಧ್ಯವಿಲ್ಲ ಎಂಬುದು ಸಾಕ್ಷಿಗಳಿಂದ ತಿಳಿದುಬಂದಿದೆ.

  • ನ್ಯಾಯಮೂರ್ತಿಗಳ ಕೆಲ ವೈಯಕ್ತಿಕ ಸಿಬ್ಬಂದಿ ದಾಸ್ತಾನು ಕೋಣೆಯನ್ನು ಬೀಗ ಹಾಕಿ ಇಡುತ್ತಿರಲಿಲ್ಲ ಎಂದು ಹೇಳಿದ್ದರಾದರೂ ಅದರ ಬಾಗಿಲಿಗೆ ಸದಾ ಬೀಗ ಜಡಿದಿರುವುದನ್ನು ಕಂಡಿರುವುದಾಗಿ ಅನೇಕ ಸಾಕ್ಷಿಗಳು ಹೇಳಿದ್ದಾರೆ.

  • ʼಮಹಾತ್ಮ ಗಾಂಧಿ ಮೇ ಆಗ್ ಲಗ್ ರಹೀ ಹೈʼ (ಮಹಾತ್ಮಾ ಗಾಂಧಿಗೂ ಬೆಂಕಿ ತಗುಲಿದೆ) ಎಂದು ಅಗ್ನಿಶಾಮಕ ಸಿಬ್ಬಂದಿಯೊಬ್ಬರು ವಿಡಿಯೊದಲ್ಲಿ ಹೇಳುತ್ತಿರುವುದು ಮಹಾತ್ಮ ಗಾಂಧೀಜಿ ಅವರ ರೇಖಾಚಿತ್ರ ಇರುವ ರೂ 500ರ ನೋಟುಗಳು ದಹನವಾಗಿರುವುದಕ್ಕೆ ಸಾಕ್ಷ್ಯ ಒದಗಿಸುತ್ತಿವೆ.

  • ಮೇಲ್ನೋಟಕ್ಕೆ ಸತ್ಯವೆಂದು ಭಾವಿಸಲಾದ ವಾಸ್ತವಾಂಶವನ್ನು ಸುಳ್ಳು ಎಂದು ಸಾಬೀತುಪಡಿಸುವ ಕಠಿಣ ಕೆಲಸಕ್ಕೆ ನ್ಯಾ. ವರ್ಮಾ ಮುಂದಾಗಿದ್ದಾರೆ.

[ವರದಿಯ ಪ್ರತಿ]

Attachment
PDF
3___Member_Committee_Report___barandbench
Preview
Kannada Bar & Bench
kannada.barandbench.com