

ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಿಂದ ಅಪಾರ ಪ್ರಮಾಣದ ಹಣ ದೊರೆತ ಆರೋಪಗಳ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಹಾಗೂ ದೆಹಲಿ ಹೈಕೋರ್ಟ್‌ನಲ್ಲಿ ಶನಿವಾರ ವಿವಿಧ ಬೆಳವಣಿಗೆಗಳು ನಡೆದವು.
ನ್ಯಾ. ವರ್ಮಾ ಅವರಿಂದ ನ್ಯಾಯಾಂಗ ಕಾರ್ಯ ಹಿಂಪಡೆತ, ವಿವಾದ ತನಿಖೆಗೆ ಸಮಿತಿ ರಚನೆ ಜೊತೆಗೆ ದೆಹಲಿ ಹೈಕೋರ್ಟ್ ಸಿಜೆ ನೀಡಿದ ವರದಿ ಮತ್ತು ನ್ಯಾ. ವರ್ಮಾ ಅವರ ಪ್ರತಿಕ್ರಿಯೆಯನ್ನು ಸುಪ್ರೀಂ ಕೋರ್ಟ್ ಪ್ರಕಟಿಸಿತು.
ನ್ಯಾ. ವರ್ಮಾ ಅವರ ನ್ಯಾಯಾಂಗ ಕಾರ್ಯ ಹಿಂಪಡೆದ ಸಿಜೆಐ
ಆರೋಪಗಳ ಹಿನ್ನೆಲೆಯಲ್ಲಿ ನ್ಯಾ. ವರ್ಮಾ ಅವರಿಂದ ನ್ಯಾಯಾಂಗ ಕಾರ್ಯಗಳನ್ನು ಹಿಂಪಡೆದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ನ್ಯಾ. ವರ್ಮಾ ಅವರಿಗೆ ಯಾವುದೇ ನ್ಯಾಯಾಂಗ ಕಾರ್ಯ ನಿಯೋಜಿಸಬೇಡಿ ಎಂದು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಗೆ ಸೂಚಿಸಿದರು.
ಅಲ್ಲದೆ ಆರೋಪಗಳ ತನಿಖೆಗಾಗಿ 3 ಸದಸ್ಯ ನ್ಯಾಯಮೂರ್ತಿಗಳ ಸಮಿತಿಯನ್ನು ಸಿಜೆಐ ಖನ್ನಾ ರಚಿಸಿದರು.
ಸಮಿತಿಯ ವಿವರ
ಸಮಿತಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು, ಹಿಮಾಚಲ ಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಿಎಸ್ ಸಂಧವಾಲಿಯಾ ಹಾಗೂ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಮನ್ ಅವರಿರುವ ಸಮಿತಿ ತನಿಖೆ ನಡೆಸಲಿದೆ.
ಮಾರ್ಚ್ 21 ರಂದು (ಶುಕ್ರವಾರ) ನಡೆದ ಸುಪ್ರೀಂ ಕೋರ್ಟ್ ಸರ್ವ ನ್ಯಾಯಮೂರ್ತಿಗಳ ಪೂರ್ಣ ನ್ಯಾಯಾಲಯದ ಸಭೆಯಲ್ಲಿ, ನ್ಯಾಯಮೂರ್ತಿ ವರ್ಮಾ ಅವರ ವಿರುದ್ಧ ದಂಡನಾತ್ಮಕ ವರ್ಗಾವಣೆ ಸಾಲದು. ಅವರ ವಿರುದ್ಧ ದೃಢ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತವಾಗಿತ್ತು. ಅದರಂತೆ ಆಂತರಿಕ ತನಿಖೆಗೆ ಪೂರ್ಣ ನ್ಯಾಯಾಲಯ ಸರ್ವಾನುಮತದ ಒಪ್ಪಿಗೆ ನೀಡಿತ್ತು. ವರ್ಗಾವಣೆ ಪ್ರಕ್ರಿಯೆಯಲ್ಲಿದ್ದು ಸರ್ಕಾರದಿಂದ ಒಪ್ಪಿಗೆ ದೊರೆಯಬೇಕಿದೆ.
ದೆಹಲಿ ಹೈಕೋರ್ಟ್ ವರದಿ ಪ್ರಕಟಣೆಗೆ ನಿರ್ಧಾರ
ಈ ಮಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ ತನಿಖಾ ವರದಿ ಬಹಿರಂಗಪಡಿಸಲು ಸಿಜೆಐ ಸಂಜೀವ್ ಖನ್ನಾ ನಿರ್ಧಾರಿಸಿದರು.
ಪಾರದರ್ಶಕತೆ ಕಾಪಾಡಿಕೊಳ್ಳಲು ಮತ್ತು ನ್ಯಾಯಾಂಗದಲ್ಲಿ ಸಾರ್ವಜನಿಕರ ನಂಬಿಕೆಯನ್ನು ಮರಳಿ ತರಲು ಸಿಜೆಐ ಈ ಕ್ರಮ ಕೈಗೊಂಡಿರುವುದಾಗಿ ಮೂಲಗಳು ತಿಳಿಸಿದವು.
ವರದಿ, ಪ್ರತಿಕ್ರಿಯೆ ಪ್ರಕಟ
ಅದಾದ ಕೆಲ ಹೊತ್ತಿನಲ್ಲಿ ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ಕೆ ಉಪಾಧ್ಯಾಯ ಅವರು ಸಲ್ಲಿಸಿದ ತನಿಖಾ ವರದಿಯನ್ನು ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿತು.
ಪೂರಕ ದಾಖಲೆಗಳು ಸೇರಿ ವರದಿ 25 ಪುಟಗಳನ್ನು ಒಳಗೊಂಡಿದೆ.
ವರದಿಯ ಜೊತೆಗೆ ನ್ಯಾ. ವರ್ಮಾ ಅವರ ಪ್ರತಿಕ್ರಿಯೆಯನ್ನೂ ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿದೆ. ಆರೋಪಗಳನ್ನು ನಿರಾಕರಿಸಿರುವ ನ್ಯಾ. ವರ್ಮಾ ಇದು ತಮ್ಮನ್ನು ಸಿಲುಕಿಸುವ ಪಿತೂರಿ ಎಂದಿದ್ದಾರೆ.
[ವರದಿಯ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]