ದೆಹಲಿ ವಾಯುಮಾಲಿನ್ಯ: ಸುಪ್ರೀಂ ಮುಂದೆ ಲಾಕ್‌ಡೌನ್ ಸೂಕ್ತ ಎಂದ ದೆಹಲಿ ಸರ್ಕಾರ, ಇತರೆ ಕ್ರಮಗಳಿಗೆ ಕೇಂದ್ರದ ಸಲಹೆ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ತಡೆಗೆ ಲಾಕ್‌ಡೌನ್ ಜಾರಿಗೆ ತರುವುದು ಸೂಕ್ತ ಎಂದು ದೆಹಲಿ ಸರ್ಕಾರ ಅಭಿಪ್ರಾಯಪಟ್ಟರೆ, ಲಾಕ್‌ಡೌನ್ ಅತ್ಯಂತ ಕಠಿಣ ಕ್ರಮವಾಗಲಿದ್ದು ಇತರೆ ಪರಿಹಾರ ಕ್ರಮ ಕೈಗೊಳ್ಳಬಹುದು ಎಂದು ಕೇಂದ್ರ ಸರ್ಕಾರ ಸಲಹೆ ನೀಡಿತು.
ರಾಜಧಾನಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ಕುರಿತಂತೆ 17 ವರ್ಷದ ದೆಹಲಿ ವಿದ್ಯಾರ್ಥಿ ಆದಿತ್ಯ ದುಬೆ ಸಲ್ಲಿಸಿದ ಮನವಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಸೂರ್ಯ ಕಾಂತ್ ಅವರನ್ನೊಳಗೊಂಡ ವಿಶೇಷ ಪೀಠ ನಡೆಸಿತು.
ಇದೇ ವೇಳೆ ವಾಯುಮಾಲಿನ್ಯ ತಡೆಗೆ ಕ್ರಮ ಕೈಗೊಳ್ಳದೆ ಕುಂಟು ನೆಪ ಹೇಳುತ್ತಿರುವ ಬಗ್ಗೆ ದೆಹಲಿ ಸರ್ಕಾರವನ್ನು ನ್ಯಾಯಾಲಯ ತೀವ್ರ ತರಾಟೆಗೆ ತೆಗೆದುಕೊಂಡಿತು. ಈ ರೀತಿಯ ಕುಂಟು ನೆಪ ನೀವು ಗಳಿಸುತ್ತಿರುವ ಆದಾಯ ಮತ್ತು ಜನಪ್ರಿಯ ಘೋಷಣೆಗಳ ವೆಚ್ಚಕ್ಕೆ ಸಂಬಂಧಿಸಿದಂತೆ ಲೆಕ್ಕಪರಿಶೋಧನೆ ನಡೆಸಲು ನಮ್ಮನ್ನು ಒತ್ತಾಯಿಸುತ್ತದೆ ಎಂದು ಅದು ಎಚ್ಚರಿಕೆ ನೀಡಿತು.
ನೆರೆಯ ರಾಜ್ಯಗಳ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಕೂಡ ಲಾಕ್‌ಡೌನ್ ಜಾರಿಯಾದರೆ ಮಾತ್ರ ಅರ್ಥಪೂರ್ಣವಾಗಿರುತ್ತದೆ. ದೆಹಲಿಯಲ್ಲಿ ಮಾತ್ರ ಲಾಕ್‌ಡೌನ್ ಮಾಡಿದರೆ ವಾಯುಮಾಲಿನ್ಯದ ಮೇಲೆ ಸೀಮಿತ ಪರಿಣಾಮ ಬೀರುತ್ತದೆ ಎಂದು ದೆಹಲಿ ಸರ್ಕಾರ ಹೇಳಿತು. ಮತ್ತೊಂದೆಡೆ ಕೇಂದ್ರ ಸರ್ಕಾರ ಲಾಕ್‌ಡೌನ್ ಬದಲಿಗೆ ವಾಹನಗಳ ಬಳಕೆಯಲ್ಲಿ ಸಮ- ಬೆಸ ವ್ಯವಸ್ಥೆ ಜಾರಿ, ರಾಜಧಾನಿಗೆ ಟ್ರಕ್‌ಗಳ ನಿಷೇಧದಂತಹ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಸಲಹೆ ನೀಡಿತು. ಬುಧವಾರ ಪ್ರಕರಣದ ವಿಚಾರಣೆ ನಡೆಯಲಿದೆ.
ದೆಹಲಿ ಸರ್ಕಾರ ಹೇಳಿದ್ದೇನು?
ಈ ವರ್ಷದ ಫೆಬ್ರವರಿಯಿಂದ ಸೆಪ್ಟೆಂಬರ್ ವರೆಗೆ ವಾಯು ಗುಣಮಟ್ಟ ಸೂಚ್ಯಂಕ, ಗಂಭೀರ ಸ್ತರಕ್ಕೆ ಹೋಗಿಲ್ಲ. 2021ರ ಅಕ್ಟೋಬರ್ ತಿಂಗಳು ಕಳೆದ ಆರು ವರ್ಷಗಳಲ್ಲೇ ಅತಿ ಸ್ವಚ್ಛ ಮಾಸ ಎನಿಸಿಕೊಂಡಿದ್ದು ಪಂಜಾಬ್ ಮತ್ತು ಹರ್ಯಾಣಗಳಲ್ಲಿ ಕೇವಲ 675 ಕೂಳೆ ಸುಡುವ ಘಟನೆಗಳು ನಡೆದಿವೆ. ಆದರೆ ನವೆಂಬರ್ ತಿಂಗಳ ಮೊದಲ 13 ದಿನಗಳಲ್ಲಿ ದೆಹಲಿ ಬಿಕ್ಕಟ್ಟಿನ ಏಳು ದಿನಗಳನ್ನು ಕಂಡಿತು. ಪಂಜಾಬ್ ಮತ್ತು ಹರ್ಯಾಣದಲ್ಲಿ ಕೂಳೆ ಸುಡುವ ಪ್ರಕರಣಗಳು ದಿನಕ್ಕೆ ಸರಾಸರಿ 4,300ರಷ್ಟು ಹೆಚ್ಚಾದವು.
ದೆಹಲಿಯ ಎನ್‌ಸಿಟಿಯಲ್ಲಿ ಹುಲ್ಲು ಸುಡುವುದನ್ನು ತೆಗೆದುಹಾಕಲು ಸಮಗ್ರ ಕ್ರಿಯಾ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.
ಕೂಳೆ ಸುಡುವುದನ್ನು ತಡೆಯಲು ಪ್ರತಿನಿತ್ಯ ಕೈಗೊಂಡ ಕ್ರಮಗಳ ವರದಿಯನ್ನು ವಾಯು ಗುಣಮಟ್ಟ ನಿರ್ವಹಣಾ ಆಯೋಗಕ್ಕೆ ಕಳುಹಿಸಲಾಗಿದೆ.
ಕೃಷಿ ತ್ಯಾಜ್ಯವನ್ನು ಸುಡುವ ಬದಲು ಅದನ್ನು ಮಾರಾಟ ಮಾಡುವುದಕ್ಕೆ ಅನುವು ಮಾಡುಕೊಡಲು ದೆಹಲಿ, ಉತ್ತರಪ್ರದೇಶ, ಪಂಜಾಬ್, ಹರ್ಯಾಣ ರಾಜ್ಯಗಳು 2019ರಲ್ಲಿ ಕ್ರಿಯಾ ಯೋಜನೆ ರೂಪಿಸಿವೆ.
2021-2022ನಾ ಸಾಲಿಗೆ ʼಚಳಿಗಾಲದ ಕ್ರಿಯಾ ಯೋಜನೆʼತಯಾರಿಸಲಾಗಿದ್ದು ಅದರಂತೆ ರಸ್ತೆ ದೂಳು, ಕಟ್ಟಡ ನಿರ್ಮಾಣ ಮಾಲಿನ್ಯ, ವಾಹನ ಮಾಲಿನ್ಯದ ಬಗ್ಗೆ ಯೋಜನೆ ಗಮನ ಹರಿಸುತ್ತದೆ. ಕ್ರಿಯಾ ಯೋಜನೆಯ ಸಲಹೆ ಸೂಚನೆಗಳನ್ನು ನಿತ್ಯ ಸರ್ಕಾರದ ಇಲಾಖೆಗಳು ಪಾಲಿಸಿ ಕ್ರಿಯಾ ವರದಿ ಸಲ್ಲಿಸಬೇಕಿದೆ.
ಕಸ ವಿಲೇವಾರಿ ಸ್ಥಳಗಳಲ್ಲಿ ತ್ಯಾಜ್ಯ ಸುಡುವುದರ ಮೇಲ್ವಿಚಾರಣೆಗಾಗಿಉ ಹಗಲು ಮತ್ತು ರಾತ್ರಿ ಗಸ್ತು ತಿರುಗಲು 250 ಕ್ಕೂ ಹೆಚ್ಚು ತಂಡಗಳನ್ನು ರೂಪಿಸಲಾಗಿದೆ.
ಜನವರಿ 1, 2022 ರವರೆಗೆ ಪಟಾಕಿಗಳ ಮಾರಾಟ, ಖರೀದಿ ಹಾಗೂ ಬಳಕೆಯನ್ನು ನಿಷೇಧಿಸಲಾಗಿದೆ.
20 ಎಕರೆ ಪ್ರದೇಶದಲ್ಲಿ "ದೇಶದ ಮೊದಲ ಇ-ತ್ಯಾಜ್ಯ ಪಾರ್ಕ್" ಸ್ಥಾಪಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.
ಕೋಚಿಂಗ್ ಮತ್ತು ತರಬೇತಿ ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ನವೆಂಬರ್ 20, 2021ರವರೆಗೆ ಮುಚ್ಚಲಾಗುವುದು.
69 ಯಂತ್ರಗಳು (ಮೆಕ್ಯಾನಿಕಲ್ ರೋಡ್ ಸ್ವೀಪರ್ ಯಂತ್ರಗಳು) ಇವೆ ಎಂಬ ಮಾಹಿತಿ ಇದೆ. ಯಂತ್ರಗಳನ್ನು ಒದಗಿಸಿ ಸಮರೋಪಾದಿಯಲ್ಲಿ ಕೆಲಸ ಮಾಡಲಾಗುವುದು.
ಲಾಕ್‌ಡೌನ್ ವಿಧಿಸಬಹುದಾದರೂ ವಾಯುಗಡಿಗಳ ಕಾರಣಕ್ಕಾಗಿ ಇಡೀ ಎನ್‌ಸಿಆರ್ ಪ್ರದೇಶವನ್ನು ಒಟ್ಟಿಗೆ ಲಾಕ್‌ಡೌನ್ ಮಾಡಬೇಕಾಗುತ್ತದೆ ಎಂದು ವಾದಿಸಿದ ವಕೀಲ ರಾಹುಲ್ ಮೆಹ್ತಾ.
ಏನು ಹೇಳಿತು ಕೇಂದ್ರ?
ಲಾಕ್‌ಡೌನ್ ಜಾರಿ ಮಾಡುವುದು ಅತ್ಯಂತ ಕಠಿಣ ಕ್ರಮವಾಗಿದೆ. ಬದಲಿಗೆ ಸಮ-ಬೆಸ ವಾಹನ ಸಂಚಾರ ವ್ಯವಸ್ಥೆ ಟ್ರಕ್ ಪ್ರವೇಶ ನಿಷೇಧದಂತಹ ಕ್ರಮ ಕೈಗೊಳ್ಳಲಿ.
ಬೆಳೆಗಳ ಕೂಳೆ ಸುಡುವುದರಿಂದ ಕೇವಲ ಶೇ 10ರಷ್ಟು ಮಾಲಿನ್ಯ ಉಂಟಾಗುತ್ತಿದೆ. ರಸ್ತೆ ಧೂಳು ಸಾಮಾನ್ಯವಾಗಿ ಮಾಲಿನ್ಯಕ್ಕೆ ಕಾರಣ ಎಂದು ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ.
ನಿರ್ಮಾಣ ಸ್ಥಳಗಳಲ್ಲಿ ಧೂಳು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಿದ್ದು ಆಸ್ಪತ್ರೆಗಳಲ್ಲಿ ಡೀಸೆಲ್ ಜನರೇಟರ್‌ಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಿದ್ದೇವೆ. ಉಸಿರಾಟದ ತೊಂದರೆ ಇರುವ ಮಂದಿ ಮನೆಯ ಹೊರಗೆ ಬರದಂತೆ ಸೂಚಿಸಿದ್ದೇವೆ. ಕಸ ಸುಡುವವರಿಗೆ ದಂಡ ವಿಧಿಸಬಹುದಾಗಿದೆ.
ಪಂಜಾಬ್ ಮತ್ತು ಹರಿಯಾಣದಲ್ಲಿ ಕೃಷಿ ತ್ಯಾಜ್ಯ ಸುಡುವಿಕೆಯಲ್ಲಿ ಹೆಚ್ಚಳವಾಗಿದೆ ಎಂದು ಹಿರಿಯ ವಕೀಲ ವಿಕಾಸ್ ಸಿಂಗ್ ಅಫಿಡವಿಟ್ ಸಲ್ಲಿಕೆ.
ಪೀಠದ ಅಭಿಪ್ರಾಯ:
ದೆಹಲಿ ಸರ್ಕಾರ ಸಲ್ಲಿಸಿದ ಅಫಿಡವಿಟ್ ರೈತರನ್ನು ದೂಷಿಸುವಂತಿದೆ. ಇಡೀ ವಾಯುಮಾಲಿನ್ಯಕ್ಕೆ ಕೂಳೆ ಸುಡುವುದು ಹೇಗೆ ಕಾರಣವಾಗುತ್ತದೆ.
ಕೂಳೆ ಸುಡುವಿಕೆ ಅತ್ಯಲ್ಪ ಪ್ರಮಾಣದಲ್ಲಿ ಮಾತ್ರ ವಾಯು ಮಾಲಿನ್ಯಕ್ಕೆ ಕೊಡುಗೆ ನೀಡಿದೆ.
ಕೂಳೆ ಸುಡುವುದು ಮಾಲಿನ್ಯಕ್ಕೆ ಮುಖ್ಯ ಕಾರಣವಲ್ಲ ಮತ್ತು ಅದಕ್ಕೆ ವೈಜ್ಞಾನಿಕ ಆಧಾರವಿಲ್ಲ ಎಂದು ಕೇಂದ್ರ ತಾತ್ವಿಕವಾಗಿ ಒಪ್ಪುವುದೇ? ದೆಹಲಿಗೆ ಪ್ರವೇಶಿಸುವ ಎಲ್ಲಾ ವಾಹನಗಳ ಮೇಲೆ ಯಾಕೆ ನಿಷೇಧ ಹೇರಬಾರದು? ರೈತರನ್ನು ದೂಷಿಸಬೇಕೆಂದು ಸರ್ಕಾರ ಬಯಸುತ್ತದೆಯೇ?
ಮಂಗಳವಾರ ಸಂಜೆಯೊಳಗೆ ಕ್ರಿಯಾ ಯೋಜನೆಯನ್ನು ಹೇಗೆ ಜಾರಿಗೊಳಿಸಬಹುದು ಎಂಬ ಕುರಿತು ಕ್ರಿಯಾ ಯೋಜನೆ ರೂಪಿಸುವಂತೆ ಕಾರ್ಯಕಾರಿ ಸಮಿತಿಗೆ ಸೂಚಿಸಿದ ನ್ಯಾಯಾಲಯ.
ಯಾವ ಕೈಗಾರಿಕೆ, ವಾಹನ, ವಿದ್ಯುತ್ ಸ್ಥಾವರಕ್ಕೆ ನಿಷೇಧ ಹೇರಬಹುದು ಎಂಬುದನ್ನು ಸಮಿತಿ ಸೂಚಿಸಬೇಕು. ಜೊತೆಗೆ ಪರ್ಯಾಯ ವಿದ್ಯುತ್ ಒದಗಿಸುವ ಕುರಿತು ನಿರ್ಧರಿಸಿ.
ಮಾಲಿನ್ಯ ಉಂಟುಮಾಡುವ ಅಂಶಗಳನ್ನು ನಿಯಂತ್ರಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂಬುದನ್ನು ಕಾಯಿದೆ ಅಡಿಯಲ್ಲಿ ಆಯೋಗವು ಸೂಚಿಸಿಲ್ಲ. ನಾಳೆ ತುರ್ತು ಸಭೆ ನಡೆಸುವಂತೆ ಕೇಂದ್ರಕ್ಕೆ ನಿರ್ದೇಶಿಸುತ್ತಿದ್ದೇವೆ ವರ್ಕ್ ಫ್ರಂ ಹೋಂಗೆ ಆದ್ಯತೆ ನೀಡುವಂತೆ ಎನ್‌ಸಿಆರ್ ಪ್ರದೇಶದ ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶಿಸುತ್ತೇವೆ.
ಬುಧವಾರ ಪ್ರಕರಣದ ವಿಚಾರಣೆ ಮುಂದುವರೆಯಲಿದೆ