ಅಂಗಲವಿಕರ ಕೋಟಾದಡಿ ನೇಮಕಾತಿ: ಮಾನದಂಡ ಸಡಿಲಿಕೆ ಕುರಿತಾದ ಸುಪ್ರೀಂ ತೀರ್ಪು ಪಾಲಿಸಬೇಕು ಎಂದ ಹೈಕೋರ್ಟ್
ಅಂಗಲವಿಕರ ಕೋಟಾದಡಿ ನೇಮಕ ಮಾಡುವುದಕ್ಕೆ ಪರ್ಯಾಯ ಅಭ್ಯರ್ಥಿಗಳು ಇಲ್ಲದೇ ಇದ್ದ ಸಂದರ್ಭದಲ್ಲಿ ಮಾನದಂಡಗಳನ್ನು ಸಡಿಲಿಸಿ, ಅರ್ಜಿ ಸಲ್ಲಿಸಿರುವವರಲ್ಲೇ ಆಯ್ಕೆ ಪ್ರಕ್ರಿಯೆ ನಡೆಸಬಹುದು ಎಂಬ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಅನುಸರಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಪುನರುಚ್ಚರಿಸಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ (ಬೆಸ್ಕಾಂ) ಜೆ ಪಿ ನಗರ ಉಪ ವಿಭಾಗದಲ್ಲಿನ ಸಹಾಯಕ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಸ್ ಬಿ ಅನಿಲ್ ಕುಮಾರ್ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ನೇತೃತ್ವದ ವಿಭಾಗೀಯ ಪೀಠ ಪುರಸ್ಕರಿಸಿದೆ.
ಏಕಸದಸ್ಯ ಪೀಠದ ಆದೇಶ ವಜಾಗೊಳಿಸಿರುವ ನ್ಯಾಯಾಲಯವು “ಎಸ್ ಬಿ ಅನಿಲ್ ಕುಮಾರ್ ಶೇ 75ರಷ್ಟು ಅಂಗವೈಕಲ್ಯತೆ ಹೊಂದಿದ್ದು, ಅವರಿಗೆ ಸಹಾಯಕ ಲೆಕ್ಕಾಧಿಕಾರಿ ಹುದ್ದೆ ನೀಡಬೇಕು” ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತಕ್ಕೆ (ಕೆಪಿಟಿಸಿಎಲ್) ನಿರ್ದೇಶನ ನೀಡಿದೆ.
“ಅನಿಲ್ ಕುಮಾರ್ ಸದ್ಯ ಕೆಪಿಟಿಸಿಎಲ್‌ನಲ್ಲಿ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಹಾಯಕ ಮತ್ತು ಸಹಾಯಕ ಲೆಕ್ಕಾಧಿಕಾರಿ ಕಾರ್ಯಗಳು ಬಹುತೇಕ ಒಂದೇ ಸ್ವರೂಪ ಹೊಂದಿರುತ್ತವೆ. ಹೀಗಾಗಿ, ಅನಿಲ್ ಕುಮಾರ್ ಸಹಾಯಕ ಲೆಕ್ಕಾಧಿಕಾರಿ ಹುದ್ದೆಗೆ ಬಡ್ತಿ ಪಡೆಯಲು ಸಂಪೂರ್ಣ ಅರ್ಹರಿದ್ದಾರೆ” ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: ಕೆಪಿಟಿಸಿಎಲ್ 2016ರ ಸೆಪ್ಟೆಂಬರ್ 8ರಂದು ಸಹಾಯಕ ಲೆಕ್ಕಾಧಿಕಾರಿ ಹುದ್ದೆ ಸೇರಿದಂತೆ ವಿವಿಧ ಹುದ್ದೆಗಳ ನೇಮಕಕ್ಕೆ ಅರ್ಜಿ ಅಹ್ವಾನಿಸಿತ್ತು. ಅನಿಲ್ ಕುಮಾರ್ ಕೂಡಾ ಸಹಾಯಕ ಲೆಕ್ಕಾಧಿಕಾರಿ ಹುದ್ದೆಗೆ ಅಂಗವಿಕಲರ ಕೋಟಾದಡಿ ಅರ್ಜಿ ಸಲ್ಲಿಸಿದ್ದರು. ಆದರೆ, ಕೆಪಿಟಿಸಿಎಲ್ ಅಂಗವಿಕಲರ ವರ್ಗದಲ್ಲಿ ಅರ್ಹ ಅಭ್ಯರ್ಥಿಗಳು ಲಭ್ಯವಾಗಿಲ್ಲ ಎಂಬ ಕಾರಣ ನೀಡಿ ಇವರ ಅರ್ಜಿಯನ್ನು ತಿರಸ್ಕರಿಸಿತ್ತು.
ಇದನ್ನು ಪ್ರಶ್ನಿಸಿ ಅನಿಲ್ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠವು “ಅರ್ಜಿದಾರರು ಹುದ್ದೆಗೆ ಅರ್ಹರಲ್ಲ” ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅನಿಲ್ ಕುಮಾರ್ ಮೇಲ್ಮನವಿ ಸಲ್ಲಿಸಿದ್ದರು.