ಕೆಂಪುಕೋಟೆ ಮೇಲಿನ ದಾಳಿ: ಮರಣ ದಂಡನೆ ಪ್ರಶ್ನಿಸಿದ್ದ ಎಲ್‌ಇಟಿ ಉಗ್ರನ ಮರುಪರಿಶೀಲನಾ ಅರ್ಜಿ ವಜಾ ಮಾಡಿದ ಸುಪ್ರೀಂ

ದೆಹಲಿಯ ಕೆಂಪು ಕೋಟೆಯ ಮೇಲೆ 2000ರ ಡಿಸೆಂಬರ್‌ 22ರಂದು ನಡೆದಿದ್ದ ಭಯೋತ್ಪಾದಕ ದಾಳಿಯಲ್ಲಿ ಭದ್ರತೆಗೆ ನಿಯೋಜಿಸಲ್ಪಟ್ಟಿದ್ದ ರಜಪೂತ್ ರೈಫಲ್ಸ್‌ಗೆ ಸೇರಿದ ಮೂವರು ಸೈನಿಕರು ಪ್ರಾಣ ಕಳೆದು ಕೊಂಡಿದ್ದರು.
(From L to R) Justice S Ravindra Bhat, CJI UU Lalit and Justice Bela Trivedi
(From L to R) Justice S Ravindra Bhat, CJI UU Lalit and Justice Bela Trivedi
Published on

ದೆಹಲಿಯ ಪ್ರತಿಷ್ಠಿತ ಕೆಂಪು ಕೋಟೆ ಮೇಲಿನ ದಾಳಿಕೋರ, ಲಷ್ಕರ್‌-ಇ-ತೋಯ್ಬಾ ಸಂಘಟನೆಯ ಸದಸ್ಯನಾದ ಪಾಕಿಸ್ತಾನದ ಮೊಹಮ್ಮದ್‌ ಆರೀಫ್‌ಗೆ ವಿಧಿಸಿದ್ದ ಮರಣ ದಂಡನೆಯನ್ನು ಸುಪ್ರೀಂ ಕೋರ್ಟ್‌ ಗುರುವಾರ ಎತ್ತಿ ಹಿಡಿದಿದೆ. 2000ರಲ್ಲಿ ನಡೆದಿದ್ದ ದಾಳಿಯಲ್ಲಿ ರಜ್ಪೂತ್‌ ರೈಫಲ್ಸ್‌ನ ಏಳನೇ ಘಟಕದ ಮೂವರು ಸೈನಿಕರು ಸಾವಿಗೀಡಾಗಿದ್ದರು.

ಮರಣ ದಂಡನೆ ಪ್ರಶ್ನಿಸಿ ಆರೀಫ್‌ ಸಲ್ಲಿಸಿದ್ದ ತೀರ್ಪು ಮರುಪರಿಶೀಲನಾ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಉದಯ್‌ ಉಮೇಶ್‌ ಲಲಿತ್‌ ಮತ್ತು ನ್ಯಾಯಮೂರ್ತಿಗಳಾದ ಎಸ್‌ ರವೀಂದ್ರ ಭಟ್‌ ಮತ್ತು ಬೆಲಾ ಎಂ ತ್ರಿವೇದಿ ಅವರ ನೇತೃತ್ವದ ತ್ರಿಸದಸ್ಯ ಪೀಠವು ವಜಾ ಮಾಡಿತು.

“ಭಾರತದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತೆಯ ಮೇಲೆ ನೇರ ದಾಳಿ ಮಾಡಿರುವುದು ದಾಖಲೆಗಳಿಂದ ಸ್ಪಷ್ಟವಾಗಿದ್ದು, ಇದು ಶಿಕ್ಷೆಯನ್ನು ತಗ್ಗಿಸಲು ಅಧಿಕೃತವಾಗಿ ಪರಿಗಣಿಸಬಹುದಾದಂತಹ ಯಾವುದೇ ಸಣ್ಣ ಅಂಶಗಳನ್ನೂ ಮೀರುತ್ತದೆ,” ಎಂದು ಪೀಠವು ಆದೇಶದಲ್ಲಿ ಹೇಳಿದೆ.

2000ರ ಡಿಸೆಂಬರ್‌ 22ರಂದು ದೆಹಲಿಯ ಕೆಂಪು ಕೋಟೆಯಲ್ಲಿ ನಿಯೋಜಿಸಲ್ಪಟ್ಟಿದ್ದ ರಜಪೂತ್ ರೈಫಲ್ಸ್‌ ಘಟಕವಿದ್ದಲ್ಲಿ ದಾಳಿಕೋರರು ನುಗ್ಗಿ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಮೂವರು ಸೈನಿಕರು ಪ್ರಾಣ ಕಳೆದು ಕೊಂಡಿದ್ದರು. ದಾಳಿಕೋರರು ಕೆಂಪು ಕೋಟೆಯ ಹಿಂದಿನ ಗೋಡೆಯನ್ನು ಜಿಗಿದು ನಾಪತ್ತೆಯಾಗಿದ್ದರು.

ದಾಳಿಯ ನಂತರ ಸೆರೆ ಸಿಕ್ಕಿದ್ದ ಆರೀಫ್‌ನನ್ನು ಐಪಿಸಿ, ಶಸ್ತ್ರಾಸ್ತ್ರ ಕಾಯಿದೆ, ವಿದೇಶಿಯರ ಕಾಯಿದೆ ಮತ್ತು ಸ್ಫೋಟಕ ವಸ್ತುಗಳ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ವಿಚಾರಣೆಗೆ ಒಳಪಡಿಸಲಾಗಿತ್ತು. 2005ರ ಅಕ್ಟೋಬರ್‌ 31ರಂದು ದೆಹಲಿಯ ಸತ್ರ ನ್ಯಾಯಾಲಯವು ಆತನನ್ನು ದೋಷಿ ಎಂದು ಘೋಷಿಸಿತ್ತು. ಇದನ್ನು 2007ರ ಸೆಪ್ಟೆಂಬರ್‌ 13ರಂದು ದೆಹಲಿ ಹೈಕೋರ್ಟ್‌, 2011ರ ಆಗಸ್ಟ್‌ 10ರಂದು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿತ್ತು.

ತನ್ನ ಶಿಕ್ಷೆಯನ್ನು ವಿಭಾಗೀಯ ಪೀಠವು ಕಾಯಂಗೊಳಿಸಿದ್ದು ಬದಲಿಗೆ ತ್ರಿಸದಸ್ಯ ಪೀಠವು ಹೈಕೋರ್ಟ್‌ ಆದೇಶವನ್ನು ಕಾಯಂಗೊಳಿಸಬೇಕಿತ್ತು ಎಂದು ಆರೀಫ್‌ ಅರ್ಜಿ ಸಲ್ಲಿಸಿದ್ದರು. ಇದನ್ನು ಈಗ ವಜಾ ಮಾಡಲಾಗಿದೆ.

ಸಾಕ್ಷ್ಯ ಕಾಯಿದೆಯ ಸೆಕ್ಷನ್‌ 65 ಬಿ ಅಡಿ ಕರೆ ದತ್ತಾಂಶದ ದಾಖಲೆಯನ್ನು ಪರಿಗಣಿಸದೇ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠವು ಪ್ರಮಾದ ಎಸಗಿದೆ ಎಂದು ಆರೀಫ್‌ ವಾದಿಸಿದ್ದನು. ಅಪರಾಧದಲ್ಲಿ ಮೇಲ್ಮನವಿದಾರರು ಭಾಗಿಯಾಗಿರುವುದಕ್ಕೆ ಯಾವುದೇ ಅನುಮಾನವಿಲ್ಲ ಎಂಬುದನ್ನು ದಾಖಲೆಗಳು ಹೇಳುತ್ತಿವೆ. ಭಾರತದ ಮೇಲೆ ಯುದ್ಧಗೈದು, ಸೇನಾ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದಕ್ಕಾಗಿ ಪಾಕಿಸ್ತಾನದ ಪ್ರಜೆಯಾಗಿರುವ ಅರೋಪಿಯನ್ನು ದೋಷಿ ಎಂದು ಘೋಷಿಸಲಾಗಿದೆ ಎಂದು ಪೀಠವು ಆದೇಶದಲ್ಲಿ ಹೇಳಿದೆ.

Kannada Bar & Bench
kannada.barandbench.com