

ದೆಹಲಿಯ ಕೆಂಪು ಕೋಟೆ ಬಳಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಹಣ ವರ್ಗಾವಣೆ ಮಾಡಿರುವ ಪ್ರಕರಣದಲ್ಲಿ ಅಲ್ ಫಲಾಹ್ ವಿಶ್ವವಿದ್ಯಾಲಯದ ಸ್ಥಾಪಕ ಜವಾದ್ ಅಹ್ಮದ್ ಸಿದ್ದಿಕಿ ಅವರನ್ನು 13 ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿ ಮಂಗಳವಾರ ದೆಹಲಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಸಾಕೇತ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಶೀತಲ್ ಚೌಧರಿ ಪ್ರಧಾನ್ ಅವರು ಬುಧವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಆದೇಶ ಹೊರಡಿಸಿದರು. ಮಂಗಳವಾರ ತಡರಾತ್ರಿ ವಿಚಾರಣೆ ಆರಂಭವಾಗಿತ್ತು.
ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ (ಪಿಎಂಎಲ್ಎ) ನಿಬಂಧನೆಗಳನ್ನು ಇ ಡಿ ಪಾಲಿಸಿದ್ದು ಕೃತ್ಯದ ಗಂಭೀರತೆ ಪರಿಗಣಿಸಿ ಸಿದ್ದಿಕಿಯನ್ನು 13 ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಬೇಕು ಎಂದು ನ್ಯಾಯಾಧೀಶೆ ಶೀತಲ್ ಆದೇಶದಲ್ಲಿ ತಿಳಿಸಿದ್ದಾರೆ.
ನವೆಂಬರ್ 10, 2025ರಂದು ದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಫೋಟ ಸಂಭವಿಸಿತ್ತು. ಹತ್ತಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದ ಸ್ಫೋಟ ಪ್ರಕರಣದಲ್ಲಿ ಫರಿದಾಬಾದ್ ಮೂಲದ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಮೂವರು ವೈದ್ಯರನ್ನು ಶಂಕಿತರೆಂದು ಗುರುತಿಸಲಾಗಿತ್ತು.
ತದನಂತರದ ಬೆಳವಣಿಗೆಗಳಲ್ಲಿ ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದ ಸ್ಥಾಪಕ ಮತ್ತು ವ್ಯವಸ್ಥಾಪಕ ಟ್ರಸ್ಟಿ ಸಿದ್ದಿಕಿ ಅವರನ್ನು ಬಳಿಕ ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು. ಭಯೋತ್ಪಾದನೆಗೆ ಹಣಕಾಸು ನೆರವು ಮತ್ತು ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದ್ದು ಅವರನ್ನು ಮಂಗಳವಾರ ಬಂಧಿಸಲಾಗಿತ್ತು.