ಬೆಂಗಳೂರಿನ ರೇಸ್‌ ಕೋರ್ಸ್‌ ಜಂಕ್ಷನ್‌ ಪುನರಾಭಿವೃದ್ಧಿಯಿಂದ ಸಂಚಾರ ಸುಗಮ: ಬಿಬಿಎಂಪಿ

ಜಂಕ್ಷನ್‌ ಅನ್ನು ಮರು ವಿನ್ಯಾಸಗೊಳಿಸಲಾಗಿದ್ದು, ಇಂಡಿಯನ್‌ ರೋಡ್‌ ಕಾಂಗ್ರೆಸ್‌ (ಐಆರ್‌ಸಿ) ಮಾರ್ಗಸೂಚಿಗಳ ಅನ್ವಯ ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಬಿಬಿಎಂಪಿ ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.
BBMP and Karnataka HC
BBMP and Karnataka HC
Published on

ಅಪಘಾತ ತಪ್ಪಿಸುವ ಉದ್ದೇಶದಿಂದ ಹಾಗೂ ಪಾದಚಾರಿಗಳ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಬೆಂಗಳೂರಿನ ರೇಸ್‌ ಕೋರ್ಸ್‌ ಜಂಕ್ಷನ್‌ ಅನ್ನು (ಟ್ರಿಲೈಟ್‌) ಪುನರಾಭಿವೃದ್ಧಿ ಮಾಡಲಾಗುತ್ತಿದ್ದು, ಇದರಿಂದ ವಾಹನ ಸಂಚಾರ ಸುಗಮವಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ಗೆ ಬಿಬಿಎಂಪಿ ಸ್ಪಷ್ಟಪಡಿಸಿದೆ.

ಬಳ್ಳಾರಿ ರಸ್ತೆ ಅಗಲೀಕರಣ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಮರ್ಪಣ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಬಿಬಿಎಂಪಿ (ಯೋಜನೆಗಳು-ಕೇಂದ್ರ) ವಿಭಾಗದ ಮುಖ್ಯ ಎಂಜಿನಿಯರ್‌ ಎಂ ಲೋಕೇಶ್‌ ಅವರು ಪ್ರಮಾಣಪತ್ರ ಸಲ್ಲಿಸಿದ್ದು, ಟ್ರಿಲೈಟ್‌ ಜಂಕ್ಷನ್‌ ಅಲ್ಲಿ ಶಿವಾನಂದ ಮೇಲ್ಸೇತುವೆ ಕಡೆಗೆ ಹೋಗುವ ರಸ್ತೆ ತೀವ್ರ ತಿರುವಿನಿಂದ ಕೂಡಿದ್ದು, ಅಪಘಾತಗಳು ಸಂಭಿಸುವ ಹಾಗೂ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದೆ. ಜಂಕ್ಷನ್‌ ಕೇಂದ್ರ ಭಾಗದಲ್ಲಿರುವ ಪ್ರತಿಮೆಗಳನ್ನು ತೆರವುಗೊಳಿಸಬೇಕು ಹಾಗೂ ಅಲ್ಲಿನ ಐಲ್ಯಾಂಡ್‌ ಅನ್ನು ಸರಿಪಡಿಸಬೇಕು ಎಂದು ತಿಳಿಸಿ 2023ರ ಜನವರಿ 4ರಂದು ನಗರ ಸಂಚಾರ ಪೊಲೀಸ್‌ (ಪೂರ್ವ) ವಿಭಾಗದ ಉಪ ಪೊಲೀಸ್‌ ಆಯುಕ್ತರು ಬಿಬಿಎಂಪಿಗೆ ಪತ್ರ ಬರೆದಿದ್ದರು. ಆ ಪತ್ರವನ್ನು ಪರಿಗಣಿಸಿ ಕುದುರೆ ಪ್ರತಿಮೆಗಳನ್ನು ತೆರವುಗೊಳಿಸಲಾಗಿದೆ. ಜಂಕ್ಷನ್‌ ಅನ್ನು ಮರು ವಿನ್ಯಾಸಗೊಳಿಸಲಾಗಿದ್ದು, ಇಂಡಿಯನ್‌ ರೋಡ್‌ ಕಾಂಗ್ರೆಸ್‌ (ಐಆರ್‌ಸಿ) ಮಾರ್ಗಸೂಚಿಗಳ ಅನ್ವಯ ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಲಾಗಿದೆ.

ಜಂಕ್ಷನ್‌ ಮರು ಅಭಿವೃದ್ಧಿಯಿಂದ ರಸ್ತೆ ಅಗಲ ಕಡಿಮೆಯಾಗಿದೆ ಎಂಬುದು ಅರ್ಜಿದಾರರ ಊಹೆಯಾಗಿದೆ. ಸಂಚಾರ ನಿರ್ವಹಣೆಗೆ ಜಂಕ್ಷನ್‌ ಅಲ್ಲಿ ಸಿಗ್ನಲ್‌ ಲೈಟ್‌ ಅಳವಡಿಸಲಾಗಿದೆ. ಜಂಕ್ಷನ್‌ ಮರು ವಿನ್ಯಾಸದ ಬಳಿಕ ಖಾಲಿ ಪ್ರದೇಶವನ್ನು ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆಯಡಿ ನವೀನ ಪರಿಕಲ್ಪನೆಯಲ್ಲಿ ಅಭವೃದ್ಧಿ ಪಡಿಸಲಾಗುತ್ತಿದೆ. ಜಂಕ್ಷನ್‌ ಅಲ್ಲಿ ಸಾರ್ವಜನಿಕ ಜಾಗ ಕಲ್ಪಿಸಲಾಗಿದೆ. ಪಾದಚಾರಿಗಳು ಸುರಕ್ಷತೆಯಿಂದ ಜಂಕ್ಷನ್‌ ದಾಟಲು ಅನುವು ಮಾಡಿಕೊಡಲಾಗಿದೆ. ಮರು ಅಭಿವೃದ್ಧಿಯಿಂದ ವಾಹನಗಳ ಸಂಚಾರ ಸುಗಮವಾಗಿದೆ. ಪಾದಚಾರಿಗಳು ಸುರಕ್ಷಿತವಾಗಿ ರಸ್ತೆ ದಾಟುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.

ಈ ಪ್ರಮಾಣ ಪತ್ರ ದಾಖಲಿಸಿಕೊಂಡ ನ್ಯಾಯಾಲಯವು ಪಕ್ಷಕಾರರು ಪ್ರಕರಣ ಕುರಿತ ಮಾಹಿತಿಯನ್ನು ಪರಸ್ಪರ ವಿಮಯ ಮಾಡಿಕೊಳ್ಳುವಂತೆ ಸೂಚಿಸಿ ಅರ್ಜಿ ವಿಚಾರಣೆಯನ್ನು ಮಾರ್ಚ್‌ 7ಕ್ಕೆ ಮುಂದೂಡಿತು.

ಪ್ರಕರಣದ ಹಿಂದಿನ ವಿಚಾರಣೆ ವೇಳೆ ಅರ್ಜಿದಾರರು ಮಧ್ಯಂತರ ಅರ್ಜಿ ಸಲ್ಲಿಸಿ, ಟ್ರಿಲೈಟ್‌ ಜಂಕ್ಷನ್‌ ಅನ್ನು ಹೊಸದಾಗಿ ಅಭಿವೃದ್ಧಿ ಮಾಡುತ್ತಿರುವುದರಿಂದ ರಸ್ತೆಯ ಅಗಲ ಕಡಿಮೆಯಾಗಿದೆ. ಪಾದಚಾರಿಗಳು ಸುರಕ್ಷತೆಯಿಂದ ಓಡಾಡಲು ಆಗುತ್ತಿಲ್ಲ. ಸಂಚಾರ ದಟ್ಟಣೆ ಹೆಚ್ಚಾಗಿದೆ ಎಂದು ಆಕ್ಷೇಪಿಸಿದ್ದರು. ಅದನ್ನು ಪರಿಗಣಿಸಿದ್ದ ಹೈಕೋರ್ಟ್‌, ಅರ್ಜಿದಾರರ ಆಕ್ಷೇಪಣೆಗೆ ಉತ್ತರಿಸುವಂತೆ ಬಿಬಿಎಂಪಿಗೆ ನಿರ್ದೇಶಿಸಿತ್ತು.

Kannada Bar & Bench
kannada.barandbench.com