[ಕೋವಿಡ್‌ ಇಳಿಮುಖ] ಆನ್‌ಲೈನ್‌ ಜೊತೆಗೆ ಭೌತಿಕ ವಿಚಾರಣೆಗೂ ಅನುಮತಿಸಿದ ಹೈಕೋರ್ಟ್‌; ಪರಿಷ್ಕೃತ ಮಾರ್ಗಸೂಚಿ ಪ್ರಕಟ

ರಾಜ್ಯದ ಎಲ್ಲ ವಿಚಾರಣಾಧೀನ ನ್ಯಾಯಾಲಯಗಳು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಮೂಲಕ ಮೊದಲಿನಂತೆ ಕಾರ್ಯನಿರ್ವಹಿಸಬಹುದಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿರುವ ರಿಜಿಸ್ಟ್ರಾರ್‌ ಜನರಲ್‌.
Karnataka HC, COVID-19
Karnataka HC, COVID-19

ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಭಾವ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಹೈಕೋರ್ಟ್‌ನ ಬೆಂಗಳೂರಿನ ಪ್ರಧಾನ ಪೀಠ ಮತ್ತು ಧಾರವಾಡ, ಕಲಬುರಗಿ ಪೀಠಗಳು ಹಾಗೂ ವಿಚಾರಣಾ ನ್ಯಾಯಾಲಯಗಳಲ್ಲಿನ ಕಲಾಪಕ್ಕೆ ಸಂಬಂಧಿಸಿದಂತೆ ವಿಧಿಸಿದ್ದ ನಿರ್ಬಂಧಗಳನ್ನು ನ್ಯಾಯಾಲಯವು ಸಡಿಲಿಕೆ ಮಾಡಿದ್ದು, ಫೆಬ್ರವರಿ 7ರಿಂದ ಅನ್ವಯವಾಗುವಂತೆ ಮುಂದಿನ ಆದೇಶದವರೆಗೆ ಪರಿಷ್ಕೃತ ಪ್ರಮಾಣೀಕೃತ ಮಾರ್ಗಸೂಚಿ ಹೊರಡಿಸಿದೆ.

ಹೈಕೋರ್ಟ್‌ನ ಎಲ್ಲಾ ಪೀಠಗಳಲ್ಲಿ ಆನ್ ಲೈನ್ ಮತ್ತು ಭೌತಿಕ ಕಲಾಪ ನಡೆಯಲಿದೆ. ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿ ನಿಗದಿಯಾದ ಪ್ರಕರಣಗಳಲ್ಲಿ ವಕೀಲರು ಹಾಗೂ ಪಾರ್ಟಿ-ಇನ್-ಪರ್ಸನ್‌ಗಳು ಮಾತ್ರ ನ್ಯಾಯಾಲಯ ಪ್ರವೇಶಿಸಬಹುದು. ಈ ವೇಳೆ ಕೋವಿಡ್ ನಿಯಮಗಳ ಪಾಲನೆ ಕಡ್ಡಾಯ ಎಂದು ರಿಜಿಸ್ಟ್ರಾರ್ ಜನರಲ್ ಟಿ ಜಿ ಶಿವಶಂಕರೇಗೌಡ ಅವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ಪಾರ್ಟಿ ಇನ್ ಪರ್ಸನ್ ಗಳು ನ್ಯಾಯಾಲಯ ಆವರಣ ಪ್ರವೇಶಿಸುವ ವೇಳೆ ಪಟ್ಟಿಯಲ್ಲಿ ತಮ್ಮ ಪ್ರಕರಣ ವಿಚಾರಣೆಗೆ ನಿಗದಿಯಾಗಿರುವುದನ್ನು ಪ್ರವೇಶ ದ್ವಾರದಲ್ಲಿ ಸ್ಪಷ್ಟಪಡಿಸಬೇಕಾಗಿದೆ. ನ್ಯಾಯಾಲಯದ ನಿರ್ದೇಶನವಿದ್ದಲ್ಲಿ ಅಥವಾ ಅನುಮತಿ ಇದ್ದಲ್ಲಿ ಮಾತ್ರ ಸಂಬಂಧಿತ ದಾಖಲೆ ತೋರಿಸಿ ಕಕ್ಷಿದಾರರು ನ್ಯಾಯಾಲಯ ಪ್ರವೇಶಿಸಬಹುದು.

ಎಸ್ಓಪಿಯ ಪ್ರಮುಖ ಅಂಶಗಳು ಇಂತಿವೆ:

  • ಪ್ರಕರಣಗಳನ್ನು ಇ-ಫೈಲಿಂಗ್ ಜತೆಗೆ ಭೌತಿಕವಾಗಿಯೂ ದಾಖಲಿಸಬಹುದು.

  • ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಹಾಗೂ ಶನಿವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 12ರವರೆಗೆ ಮಾತ್ರ ಫೈಲಿಂಗ್ ಮಾಡಲು ಅವಕಾಶ. ತುರ್ತು ಅರ್ಜಿ ಸಲ್ಲಿಕೆಗೆ ಎರಡು ಕೌಂಟರ್ ಗಳು ಸಂಜೆ 4.30ರವರೆಗೆ ತೆರೆದಿರಲಿವೆ.

  • ಪ್ರಕರಣದ ತುರ್ತು ವಿಚಾರಣೆಯಿದ್ದಲ್ಲಿ ನಿಗದಿತ ಕೌಂಟರ್‌ನಲ್ಲಿ ಮೆಮೊ ಸಲ್ಲಿಸಬೇಕು. ಈ ಮೆಮೊವನ್ನು ಪರಿಗಣಿಸಿ ಅದನ್ನು ಸಲ್ಲಿಸಿದ ಮೂರನೇ ದಿನ ಪೀಠದ ಎದುರು ಇರಿಸಲಾಗತ್ತದೆ. ಇದರ ಹೊರತಾಗಿಯೂ ತುರ್ತು ಪ್ರಕರಣಗಳಿದ್ದಲ್ಲಿ ಮೆಮೊವನ್ನು ತುರ್ತಿನ ಕುರಿತು ವಿವರಿಸುವುದರ ಜತೆಗೆ ನಿಗದಿತ ಪೀಠದಲ್ಲಿಯೇ ಸಲ್ಲಿಸಬಹುದಾಗಿದೆ.

  • ನ್ಯಾಯಾಲಯದ ಶುಲ್ಕವನ್ನು ಹೈಕೋರ್ಟ್ ವೆಬ್ ಸೈಟ್ ಮೂಲಕ ಆನ್ ಲೈನ್ ಮೂಲಕ ಮತ್ತು ನೇರವಾಗಿ ಕೌಂಟರ್ ನಲ್ಲಿಯೂ ಪಾವತಿಸಬಹುದಾಗಿದೆ.

  • ನೋಟರಿ ಹಾಗೂ ಓತ್ ಕಮಿಷನರ್ಸ್ ಪಾರ್ಕಿಂಗ್ ಜಾಗದಲ್ಲಿ ಕಾರ್ಯ ನಿರ್ವಹಿಸಲು ಅನುಮತಿಸಲಾಗಿದೆ.

  • ಕಚೇರಿ ಆಕ್ಷೇಪಣೆಗಳನ್ನು ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 10.30ರಿಂದ ಸಂಜೆ 4.30 ಹಾಗೂ ಶನಿವಾರದಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಸರಿಪಡಿಸಲು ಅವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ವಕೀಲರು ಅಥವಾ ಪಾರ್ಟಿ-ಇನ್-ಪರ್ಸನ್ ಗಳು 15ರಿಂದ 30 ನಿಮಿಷಗಳಲ್ಲಿ ಫೈಲ್ ಹಿಂದಿರುಗಿಸಲು ಸೂಚಿಸಲಾಗಿದೆ.

  • ವಕೀಲರ ಸಂಘ ಹಾಗೂ ಕ್ಯಾಂಟೀನ್ ಗೆ ಅನುಮತಿ ನೀಡಲಾಗಿದೆ. ಇನ್ನು ನ್ಯಾಯಾಲಯದ ಕೊಠಡಿಗಳಲ್ಲಿ ಲಭ್ಯವಿರುವ ಕುರ್ಚಿಗಳಲ್ಲಿ ಶೇಕಡಾ 50 ರಷ್ಟು ಬಳಕೆಗೆ ಮಾತ್ರ ಅವಕಾಶ ಕೊಡಲಾಗಿದೆ.

  • ರಾಜ್ಯದ ಎಲ್ಲ ವಿಚಾರಣಾಧೀನ ನ್ಯಾಯಾಲಯಗಳು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಮೂಲಕ ಮೊದಲಿನಂತೆ ಕಾರ್ಯನಿರ್ವಹಿಸಬಹುದಾಗಿದೆ. ಆದರೆ, ಕಕ್ಷಿದಾರರು ಅನಗತ್ಯವಾಗಿ ನ್ಯಾಯಾಲಯಗಳಿಗೆ ಬರದಂತೆ ವಕೀಲರು ಎಚ್ಚರವಹಿಸುವಂತೆ ಸೂಚಿಸಲಾಗಿದೆ.

Attachment
PDF
HC new SOP.pdf
Preview

Related Stories

No stories found.
Kannada Bar & Bench
kannada.barandbench.com